ಡೈ ಅಮೋನಿಯಂ ಫಾಸ್ಪೇಟ್(ಡಿಎಪಿ) ರಸಗೊಬ್ಬರಕ್ಕೆ ಪ್ರತೀ ಚೀಲಕ್ಕೆ ನೀಡುತ್ತಿದ್ದ 500 ರೂ. ಸಬ್ಸಿಡಿಯನ್ನು 1,200 ರೂ.ಗಳಿಗೆ ಹೆಚ್ಚಿಸುವ ನಿರ್ಧಾರ ವನ್ನು ಕೈಗೊಳ್ಳುವ ಮೂಲಕ ಕೇಂದ್ರ ಸರಕಾರ ದೇಶದ ರೈತರ ಸಂಕಷ್ಟಕ್ಕೆ ಸ್ಪಂದಿಸಿದೆ. ಸರಕಾರದ ಈ ನಿರ್ಧಾರದಿಂದಾಗಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಡಿಎಪಿ ಬೆಲೆ ಭಾರೀ ಏರಿಕೆ ಕಂಡಿದ್ದರೂ ದೇಶದ ರೈತರಿಗೆ ಕಳೆದ ವರ್ಷದ ಬೆಲೆಯಲ್ಲಿಯೇ ಅಂದರೆ ಪ್ರತೀ ಚೀಲ ಡಿಎಪಿ 1,200 ರೂ.ಗಳಿಗೆ ಲಭಿಸಲಿದೆ.
ಕಳೆದೊಂದು ತಿಂಗಳಿಂದೀಚೆಗೆ ದೇಶದಲ್ಲಿ ರಸಗೊಬ್ಬರ ಬೆಲೆ ಭಾರೀ ಏರಿಕೆ ಕಂಡಿರುವ ಬಗ್ಗೆ ರೈತಾಪಿ ವರ್ಗದಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಕೊರೊನಾದಿಂದಾಗಿ ರೈತರು ವಿವಿಧ ಸಮಸ್ಯೆಗಳನ್ನು ಎದುರಿಸುತ್ತಿರುವ ನಡುವೆಯೇ ರಸಗೊಬ್ಬರ ಬೆಲೆಯೂ ಗಗನಕ್ಕೇರಿದ್ದ ರಿಂದಾಗಿ ರೈತ ಸಂಘಟನೆಗಳು ಮತ್ತು ವಿಪಕ್ಷಗಳು ಕೇಂದ್ರ ಸರಕಾರದ ಮೇಲೆ ಮುಗಿಬಿದ್ದಿದ್ದವು. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಡಿಎಪಿ ಬೆಲೆ ಹೆಚ್ಚಳ ವಾಗಿರುವುದರಿಂದ ದೇಶದಲ್ಲಿಯೂ ರಸಗೊಬ್ಬರದ ಬೆಲೆ ಏರಿಕೆಯಾಗಿ ದೆಯೇ ಹೊರತು ಸಬ್ಸಿಡಿಯಲ್ಲಿ ಯಾವುದೇ ಕಡಿತ ಮಾಡಿಲ್ಲ ಎಂದು ಕೇಂದ್ರ ಸರಕಾರ ಸ್ಪಷ್ಟನೆ ನೀಡಿತ್ತು. ಇಷ್ಟು ಮಾತ್ರವಲ್ಲದೆ ಸದ್ಯ ರಸಗೊಬ್ಬರಗಳಿಗೆ ನೀಡಲಾಗುತ್ತಿರುವ ಸಬ್ಸಿಡಿ ಪ್ರಮಾಣವನ್ನು ಹೆಚ್ಚಿಸುವ ಮೂಲಕ ರೈತರ ಮೇಲಣ ಆರ್ಥಿಕ ಹೊರೆಯನ್ನು ಕೊಂಚ ಕಡಿಮೆ ಮಾಡುವ ಸಂಬಂಧ ಚರ್ಚೆ ನಡೆಸಿ ಶೀಘ್ರದಲ್ಲಿಯೇ ಅಂತಿಮ ತೀರ್ಮಾನಕ್ಕೆ ಬರಲಾಗುವುದು ಎಂದು ಭರವಸೆ ನೀಡಿತ್ತು.
ಅದರಂತೆ ಬುಧವಾರದಂದು ಸಭೆ ಸೇರಿದ ಪ್ರಧಾನಿ ನೇತೃತ್ವದ ಉನ್ನತ ಮಟ್ಟದ ಸಮಿತಿ ಡಿಎಪಿ ಮೇಲಣ ಸಬ್ಸಿಡಿಯನ್ನು ಶೇ. 140ರಷ್ಟು ಹೆಚ್ಚಿಸುವ ಮಹತ್ತರ ನಿರ್ಧಾರ ತೆಗೆದುಕೊಂಡಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಡಿಎಪಿ ಬೆಲೆಯಲ್ಲಿನ ಹೆಚ್ಚಳದ ಹೊರೆಯನ್ನು ಕೇಂದ್ರ ಸರಕಾರವೇ ಹೊತ್ತುಕೊಳ್ಳಲಿದೆ. ಕೇಂದ್ರದ ಈ ಐತಿಹಾಸಿಕ ತೀರ್ಮಾನದಿಂದಾಗಿ ಮುಂದಿನ ಖಾರಿಫ್ ಅವಧಿಯಲ್ಲಿ ಕೇಂದ್ರದ ಬೊಕ್ಕಸಕ್ಕೆ 14,755ಕೋ. ರೂ. ಗಳ ಹೆಚ್ಚುವರಿ ಹೊರೆ ಬೀಳಲಿದೆ ಎಂದು ಅಂದಾಜಿಸಲಾಗಿದೆ. ದೇಶದ ಕೃಷಿ ಚಟುವಟಿಕೆಯಲ್ಲಿ ರಸಗೊಬ್ಬರ ಪ್ರಮುಖ ಪಾತ್ರವನ್ನು ವಹಿಸುತ್ತಿದ್ದು ಹೆಚ್ಚಿನ ಇಳುವರಿಯನ್ನು ಪಡೆಯಲು ಬೆಳೆಗಳಿಗೆ ರಸಗೊಬ್ಬರ ಬಳಕೆ ಅನಿವಾರ್ಯವಾಗಿದೆ.
ಕೊರೊನಾದಿಂದಾಗಿ ಎಲ್ಲ ಕ್ಷೇತ್ರಗಳಂತೆ ಕೃಷಿ ವಲಯವೂ ಸಂಕಷ್ಟಕ್ಕೀಡಾಗಿ ರುವ ಸಂದರ್ಭದಲ್ಲಿ ರಸಗೊಬ್ಬರ ಮೇಲಣ ಸಬ್ಸಿಡಿ ಹೆಚ್ಚಿಸುವ ಕೇಂದ್ರದ ನಿರ್ಧಾರ ರೈತರಲ್ಲಿ ಕೊಂಚ ನಿರಾಳ ಭಾವ ಮೂಡುವಂತೆ ಮಾಡಿದೆ. ಇದೇ ವೇಳೆ ಪ್ರಸಕ್ತ ವರ್ಷ ನೈಋತ್ಯ ಮಾರುತಗಳು ಮಾಸಾಂತ್ಯದಲ್ಲಿ ಕೇರಳವನ್ನು ಪ್ರವೇಶಿಸಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದ್ದು ಪ್ರಸಕ್ತ ಮುಂಗಾರು ಅವಧಿಯಲ್ಲಿ ದೇಶದಲ್ಲಿ ವಾಡಿಕೆಯಷ್ಟು ಮಳೆಯಾಗಲಿದೆ ಎಂದು ಅಂದಾಜಿಸಿದೆ. ಇದು ಕೂಡ ದೇಶದ ಕೃಷಿಕರ ಪಾಲಿಗೆ ಸಂತಸದ ಸುದ್ದಿಯೇ.
ವಿವಿಧ ಉದ್ಯೋಗಗಳ ನಿಮಿತ್ತ ಹಳ್ಳಿಗಳಿಂದ ನಗರಗಳತ್ತ ತೆರಳಿದ್ದ ಯುವ ಸಮುದಾಯ ಕಳೆದ ವರ್ಷದಂತೆಯೇ ಈ ಬಾರಿಯೂ ಕೊರೊನಾದಿಂದಾಗಿ ಹುಟ್ಟೂರಿಗೆ ಮರಳಿದ್ದು ಇವರು ಕೂಡ ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೆ. ಇದರಿಂದಾಗಿ ಈ ಮುಂಗಾರಿನಲ್ಲೂ ಕೃಷಿ ವಲಯದಲ್ಲಿ ಹೆಚ್ಚಿನ ಪ್ರಗತಿಯನ್ನು ಸಾಧಿಸುವ ನಿರೀಕ್ಷೆ ಇದೆ. ದೇಶದ ಆರ್ಥಿಕ ವ್ಯವಸ್ಥೆಯಲ್ಲಿ ಮಹತ್ತರವಾದ ಪಾತ್ರವನ್ನು ಹೊಂದಿರುವ ಕೃಷಿ ವಲಯ ಮುಂಬರುವ ಋತುವಿನಲ್ಲಿ ಆಶಾದಾಯಕ ಪ್ರಗತಿಯನ್ನು ಕಾಣುವ ನಿರೀಕ್ಷೆ ಮೂಡಿಸಿದೆ.