Advertisement
1988ರಲ್ಲಿ ಯುನೆಸ್ಕೋದಿಂದ ವಿಶ್ವ ಪರಂಪರೆಯ ತಾಣ ಎಂಬ ಮಾನ್ಯತೆ ಪಡೆದ ನಗರ, ಶ್ರೀಲಂಕಾದ ಕ್ಯಾಂಡಿ. ರಾಜಧಾನಿ ಕೊಲೊಂಬೋ ನಂತರದ ಅತಿ ದೊಡ್ಡ ನಗರ. ರಾಜಸೊತ್ತಿಗೆಯ ಕಾಲದಲ್ಲಿ ರಾಜಧಾನಿಯಾಗಿ ಮೆರೆದ ಕ್ಯಾಂಡಿ ಐತಿಹಾಸಿಕ ಹಾಗೂ ಸಾಂಸ್ಕೃತಿಕವಾಗಿ ಪ್ರಮುಖ ನಗರ. ನಗರದ ಹೃದಯ ಭಾಗದಲ್ಲಿರುವ ಕ್ಯಾಂಡಿ ಕೆರೆಯ ಅಂಚಿನಲ್ಲಿ ವಿಶಾಲವಾದ ಬಹು ಕಟ್ಟಡ ಸಮುಚ್ಚಯವಿದೆ. ರಾಜರ ಅರಮನೆ, ರಾಷ್ಟ್ರೀಯ ವಸ್ತು ಸಂಗ್ರಹಾಲಯ, ಅಂತಾರಾಷ್ಟ್ರೀಯ ಬೌದ್ಧ ವಸ್ತು ಸಂಗ್ರಹಾಲಯಗಳ ನಡುವೆ ಎದ್ದು ಕಾಣುವುದು, ಪ್ರಮುಖ ಧಾರ್ಮಿಕ ಮತ್ತು ಪ್ರವಾಸಿ ಕೇಂದ್ರ ದಲದ ಮಾಲಿಗವಾ(ಪವಿತ್ರ ದಂತ ದೇಗುಲ)
ಈ ದೇಗುಲದಲ್ಲಿ ಇರುವುದು ಬುದ್ಧನ ದಂತ ಎಂದು ನಂಬಲಾಗಿದೆ. ನಮ್ಮ ಭಾರತದ ಬುದ್ಧನ ದಂತ ಕ್ಯಾಂಡಿಗೆ ಹೋಗಿದ್ದರ ಹಿಂದೆ ದೊಡ್ಡ ಕತೆಯೇ ಇದೆ. ಭಾರತದ ಕುಶಾನಗರದಲ್ಲಿ ಬುದ್ಧನ ಪರಿನಿರ್ವಾಣದ ನಂತರ ಚಿತೆಯಲ್ಲಿ ಉಳಿದ ನಾಲ್ಕು ಪವಿತ್ರ ದಂತಗಳಲ್ಲಿ ಒಂದನ್ನು ಕಳಿಂಗದ ರಾಜ ಪಡೆದು,ದಂತಪುರಿಯಲ್ಲಿ ಇಟ್ಟು ಪೂಜಿಸುತ್ತಾನೆ. ಅತ್ಯಂತ ಮಹಿಮೆಯುಳ್ಳ ಈ ದಂತದ ಮೇಲೆ ಎಲ್ಲರ ಕಣ್ಣು,ತಮ್ಮದಾಗಿಸಿಕೊಳ್ಳಲು ಹೋರಾಟ. ಏಳೆಂಟು ಶತಮಾನಗಳ ಕಾಲ ಹಲ್ಲಿಗಾಗಿ ಯುದ್ಧ ! ಕಡೆಗೆ ರಾಜ ಗುಹಶಿವನ ಮಗಳು ಹೇಮಮಾಲಿ ಮತ್ತು ಅಳಿಯ ದಂತ ಪವಿತ್ರ ದಂತವನ್ನು ಲಂಕೆಯ ಅನುರಾಧಪುರಕ್ಕೆ ತರುತ್ತಾರೆ. ದಕ್ಷಿಣಭಾರತದ ಪಾಂಡ್ಯ ಹಾಗೂ ಚೋಳ ರಾಜರಿಂದ ಸತತವಾಗಿ ಲಂಕೆಯ ಮೇಲೆ ದಾಳಿ ನಡೆದರೂ ಅಲ್ಲಿನ ಅರಸರು ಅತ್ಯಂತ ಭಕ್ತಿ ಮತ್ತು ಕಾಳಜಿಯಿಂದ ಪವಿತ್ರ ದಂತದ ರಕ್ಷಣೆ ಮಾಡುತ್ತಾರೆ. ಹೀಗೆ, ದಂತ ಒಂದು ಸ್ಥಳದಿಂದ ಇನ್ನೊಂದೆಡೆ ವರ್ಗಾವಣೆಯಾಗುತ್ತಲೇ ಇರುತ್ತದೆ.ಅಂತೂ ಹಲವಾರು ರಾಜಮನೆತನದವರ ಪ್ರತಿಷ್ಠೆ -ಪೂಜಾವಸ್ತುವಾಗಿದ್ದ ಈ ದಂತವನ್ನು ಹದಿನೇಳನೇ ಶತಮಾನದಲ್ಲಿ ಇಂದಿನ ಕ್ಯಾಂಡಿಯಲ್ಲಿ ದೇಗುಲ ಕಟ್ಟಿಸಿ ಭದ್ರವಾಗಿಟ್ಟ ಕೀರ್ತಿ, ದೊರೆ ವೀರ ನರೇಂದ್ರ ಸಿಂಹನದ್ದು.
ವಾರದ ಏಳೂ ದಿನಗಳೂ ಬೆಳಿಗ್ಗೆ ಐದೂವರೆಯಿಂದ ರಾತ್ರಿ ಎಂಟರವರೆಗೆ ದೇಗುಲ ತೆರೆದಿರುತ್ತದೆ. ಸಂಗೀತ ಸೇವೆ
ಮಹಾದ್ವಾರದಲ್ಲಿ ಸುಂದರವಾದ ಮಕರತೋರಣವಿದ್ದು ಇಕ್ಕೆಲಗಳಲ್ಲಿ ಗಜರಾಜನ ಕೆತ್ತನೆಗಳಿವೆ. ಪವಿತ್ರ ದಂತವನ್ನು ದೇಗುಲದೊಳಗೆ ದೊಡ್ಡ ಆನೆ ದಂತದ ಹಿಂದೆ ಎರಡು ಮಹಡಿಯ ಗರ್ಭಗುಡಿಯಲ್ಲಿ ಇರಿಸಲಾಗಿದೆ. ಕೆಳಗಿನ ಅಂತಸ್ತಿನಲ್ಲಿ ವಾದ್ಯಗಾರರ ಅಂಗಳವಿದ್ದು ದಿನಕ್ಕೆ ಮೂರು ಬಾರಿ ಪವಿತ್ರ ದಂತಕ್ಕೆ ವಾದ್ಯ ಸೇವೆ ಸಲ್ಲುತ್ತದೆ. ತೆವಾವಾ ಎಂದು ಕರೆಯಲಾಗುವ ಈ ಸೇವೆಯಲ್ಲಿ ಐದು ಬಗೆಯ ಸಂಗೀತ ವಾದ್ಯಗಳನ್ನು ಸಾಂಪ್ರದಾಯಿಕ ಉಡುಗೆ ಧರಿಸಿ ಭಕ್ತಿ ಮತ್ತು ಆವೇಶದಿಂದ ಕಲಾವಿದರು ಬಡಿಯುತ್ತಿದ್ದರೆ ನೆರೆದವರಲ್ಲಿ ಭಾವ ಸಂಚಾರ.
Related Articles
ಸುತ್ತಲೂ ಚಿನ್ನದ ಲೇಪನ ಮತ್ತು ಆನೆದಂತದ ಕೆತ್ತನೆ ಕಾಣಬಹುದು. ಮೇಲಿನ ಅಂತಸ್ತಿನಲ್ಲಿ ಬೆಳ್ಳಿ- ಬಂಗಾರದ ಬಾಗಿಲಿನ ಬಿಗಿ ಭದ್ರತೆಯ ಒಳಕೋಣೆ. ಅದರೊಳಗೆ ಪೀಠದ ಮೇಲಿರುವ ಸ್ವರ್ಣಕಮಲದ ಮೇಲೆ ಒಂದರ ಒಳಗೆ ಏಳು ಪೆಟ್ಟಿಗೆಗಳು.ಅವು ಮುತ್ತು ರತ್ನ ವಜ್ರಗಳಿಂದ ಮಾಡಲ್ಪಟ್ಟಿವೆ.ಅದರೊಳಗೆ ಕರಂಡಕದಲ್ಲಿ ಬುದ್ಧನ ಪವಿತ್ರ ದಂತವಿದೆ. ಪವಿತ್ರ ದಂತದ ಸಮೀಪ ದರ್ಶನ ಸಾಧ್ಯವಿಲ್ಲ, ಬಾಗಿಲು ತೆರೆದಾಗ ಕಾಣುವುದು ನವರತ್ನಗಳಿಂದ ಥಳಥಳ ಹೊಳೆವ ಕಿರೀಟದಾಕಾರದ ಕರಂಡಕ ಮಾತ್ರ. ಪ್ರತಿ ಬುಧವಾರ ಪವಿತ್ರ ದಂತಕ್ಕೆ ಗಿಡಮೂಲಿಕೆಗಳು,ಸುಗಂಧಿತ ಜಲ ಮತ್ತು ಪರಿಮಳಯುಕ್ತ ಪುಷ್ಪಗಳಿಂದ ಸಾಂಕೇತಿಕ ಮಜ್ಜನ (ನನುಮುರ ಮಂಗಲ್ಯಾ) ನಡೆಯುತ್ತದೆ. ಈ ಪುಣ್ಯ ತೀರ್ಥ, ರೋಗಹರ ಎಂದು ಜನರು ಅದನ್ನು ಪಡೆಯಲು ಸರದಿಯಲ್ಲಿ ನಿಂತು ಕಾಯುತ್ತಾರೆ. ದೇಗುಲದ ಸುತ್ತಲ ಪ್ರಾಕಾರದ ಮೇಲೆ ಬುದ್ಧನ ಜನನದಿಂದ ಪರಿನಿರ್ವಾಣ ಮತ್ತು ಪವಿತ್ರ ದಂತದ ಕತೆಯನ್ನು ದೊಡ್ಡ ಚಿತ್ರಗಳ ಮೂಲಕ ನಿರೂಪಿಸಲಾಗಿದೆ.ಅದರಲ್ಲಿ ಗಮನ ಸೆಳೆಯುವ ಚಿತ್ರ ದಂತ ಮತ್ತು ರಾಜಕುಮಾರಿ ಹೇಮಮಾಲಿಯರದ್ದು. ಆಕೆ ತನ್ನ ತಲೆಯ ತುರುಬಿನಲ್ಲಿ ಈ ಪವಿತ್ರ ದಂತವನ್ನು ಅಡಗಿಸಿ ಭಾರತದಿಂದ ಲಂಕೆಗೆ ಸಾಗಿಸುತ್ತಿರುವ ದೃಶ್ಯ ಮನೋಹರವಾಗಿದೆ.
Advertisement
ಎಸಲ ಪೆರೇರತಮ್ಮ ಮನೋಕಾಮನೆ ಪೂರ್ತಿಯಾಗಲೆಂದು ಪ್ರಾರ್ಥಿಸಿ ಇಲ್ಲಿ ಬರುವ ಸಿಂಹಳೀಯರಷ್ಟೇ ಅಲ್ಲ, ಚೀನಿಯರು, ಜಪಾನೀಯರು, ಪೋರ್ಚುಗೀಸರು, ಬ್ರಿಟಿಷರು, ಭಾರತೀಯರು ಎಲ್ಲರಿಗೂ ಪವಿತ್ರ ದಂತದಶಕ್ತಿಯಲ್ಲಿ ಅಪಾರ ನಂಬಿಕೆ. ಈ ಪವಿತ್ರ ದಂತ ಇದ್ದಲ್ಲಿ ಸುಖ-ಶಾಂತಿ-ನೆಮ್ಮದಿ ಇರುತ್ತದೆ ಎಂದು ಹೇಳಲಾಗುತ್ತದೆ.ಕ್ಯಾಂಡಿಯಲ್ಲಿ ಜೂನ್- ಜುಲೈನಲ್ಲಿ ನಡೆಯುವ ಎಸಲ ಪೆರೇರ ಉತ್ಸವದಲ್ಲಿ ಪವಿತ್ರ ದಂತದ ಮೆರವಣಿಗೆಯೇ ಪ್ರಮುಖ ಆಕರ್ಷಣೆ. ಹಿಂದೆಂದೋ ಲಂಕೆಯಲ್ಲಿ ಭೀಕರ ಬರಗಾಲ ಬಂದಿತ್ತು. ಮಳೆ-ಬೆಳೆಯಿಲ್ಲದೇ ಜನರು ತತ್ತರಿಸುತ್ತಿದ್ದರು.ಆಗ ಧರ್ಮಗುರುಗಳ ಆದೇಶದಂತೆ ಬುದ್ಧನ ಪವಿತ್ರ ದಂತವನ್ನು ಏಳು ದಿನ ಪೂಜಿಸಿದರು. ಆಗ ಮಳೆಯಾಗಿ ನಾಡು ಸುಭಿಕ್ಷವಾಯಿತು. ಅಂದಿನಿಂದ ಈ ಉತ್ಸವವನ್ನು ಪ್ರತಿ ವರ್ಷ ನಡೆಸಲಾಗುತ್ತದೆ . ಆನೆಗೂ ಸ್ಥಾನ
ದೇಗುಲದ ಎಡಭಾಗದಲ್ಲಿರುವ ಕಟ್ಟಡದಲ್ಲಿ ಮಾಲಿಗವಾ ತಸ್ಕರ್ ರಾಜಾ ಎಂಬ ಅತ್ಯುನ್ನತ ಗೌರವ ಪಡೆದ ಆನೆಯ ಪಳೆಯುಳಿಕೆಯನ್ನು ಇಡಲಾಗಿದೆ. 1925 ರಲ್ಲಿ ಎರಾವುರ್ ಕಾಡಿನಿಂದ ಹಿಡಿಯಲ್ಪಟ್ಟ ಗಂಡಾನೆ ರಾಜಾ, ಭಕ್ತರಿಂದ ದೇಗುಲಕ್ಕೆ ದಾನವಾಗಿ ಬಂದು ಸೇರಿತು. ಸುಮಾರು ಐವತ್ತು ವರ್ಷಗಳ ಕಾಲ ಬುದ್ಧನ ದಂತವಿರುವ ಕರಂಡಕವನ್ನು ಹೊತ್ತು ಮೆರವಣಿಗೆ ನಡೆಸಿದ್ದು ಇದೇ ರಾಜಾ. 1984ರಲ್ಲಿ ರಾಜಾನನ್ನು ರಾಷ್ಟ್ರೀಯ ನಿಧಿ ಎಂದು ಘೋಷಿಸಲಾಯಿತು. 1988ರಲ್ಲಿ ನಿಧನದ ಬಳಿಕ ಚರ್ಮಪ್ರಸಾಧನ ಬಳಸಿ ನೈಜವಾಗಿ ಕಾಣುವಂತೆ ಸಂರಕ್ಷಿಸಿಡಲಾಗಿದೆ. – ಡಾ. ಕೆ. ಎಸ್. ಚೈತ್ರಾ