Advertisement

ದಣ್ಣೂರ: 50 ಲಕ್ಷ ರೂ. ಸಾಲ ವಿತರಣೆ

11:33 AM Dec 23, 2021 | Team Udayavani |

ಆಳಂದ: ಬಿಕ್ಕಟ್ಟಿನಿಂದ ಕೂಡಿದ ಕೃಷಿಯಿಂದ ಹೊರಬರಲು ರೈತರು ಉಪಕಸಬು ಕೈಗೊಂಡು ಆರ್ಥಿಕವಾಗಿ ಸದೃಢಗೊಳ್ಳಬೇಕು ಎಂದು ಮಾಜಿ ಶಾಸಕ ಬಿ.ಆರ್‌. ಪಾಟೀಲ ರೈತರಿಗೆ ಸಲಹೆ ನೀಡಿದರು.

Advertisement

ತಾಲೂಕಿನ ದಣ್ಣೂರ ಗ್ರಾಮದಲ್ಲಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಹಾಗೂ 200 ಸದಸ್ಯ ರೈತರಿಗೆ ಬಡ್ಡಿ ರಹಿತ 50 ಲಕ್ಷ ರೂ. ಸಾಲ ವಿತರಿಸುವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಅತಿವೃಷ್ಟಿ-ಅನಾವೃಷ್ಟಿಗೆ ಬೆಳೆ ಬಾರದೇ, ಕೃಷಿ ವೆಚ್ಚವೂ ಕೈಗೆ ದೊರಕದೇ ಸಾಲದ ಸುಳಿಗೆ ಸಲುಕುವುದು ಬೇಡ, ಮಾಡಿದ ಸಾಲಕ್ಕೆ ಹೆದರಿ ಕೃಷಿ ಮಾಡುವುದನ್ನು ಬಿಡುವಂತಿಲ್ಲ. ಕೃಷಿಯೊಂದಿಗೆ ಉಪಕಸುಬಾಗಿ ಹೈನುಗಾರಿಕೆ, ಕುರಿ, ಕೋಳಿ ಸಾಕಾಣಿಕೆ ಸೇರಿದಂತೆ ಬೆಳೆಯಲ್ಲಿ ಮಿಶ್ರ ಬೇಸಾಯ ಪದ್ಧತಿ ಅನುಸರಿಸಿ ಆರ್ಥಿಕ ನಷ್ಟದಿಂದ ಪಾರಾಗಿ ಎಂದು ಸಲಹೆ ನೀಡಿದರು.

ಸಕಾಲಕ್ಕೆ ಸಾಲ ಮರು ಪಾವತಿಸಿದರೆ ಹೊಸಬರಿಗೆ, ಹಳಬರಿಗೆ ಹೆಚ್ಚಿನ ಸಾಲ ನೀಡಲು ಅನುಕೂಲವಾಗುತ್ತದೆ. ಸಹಕಾರ ಸಂಘಗಳನ್ನು ಉಳಿಸಿ-ಬೆಳೆಸಲು ಪ್ರತಿಯೊಬ್ಬರು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಬೇಕು ಎಂದರು.

ಮುಖ್ಯ ಅತಿಥಿಯಾಗಿದ್ದ ಡಿಸಿಸಿ ಬ್ಯಾಂಕ್‌ ನಿರ್ದೇಶಕ ಅಶೋಕ ಸಾವಳೇಶ್ವರ ಮಾತನಾಡಿ, ತಾಲೂಕಿನ ಎಲ್ಲ ವಿಎಸ್‌ಎಸ್‌ಎನ್‌ಗಳ ಮೂಲಕ ಪಹಣಿ ಹೊಂದಿರುವ ರೈತರಿಗೆ ಬಡ್ಡಿ ರಹಿತ ಸಾಲ ನೀಡಲಾಗುತ್ತಿದೆ. ಅಲ್ಲದೇ, ಡಿಸಿಸಿಯಿಂದ ಮುಂಬರುವ ದಿನಗಳಲ್ಲಿ ಹೈನುಗಾರಿಕೆ ಸೇರಿದಂತೆ ಇನ್ನಿತರ ಕೃಷಿ ಉಪಯೋಗಕ್ಕೆ ಸಾಲ ಸೌಲಭ್ಯ ಹೆಚ್ಚಿನ ಪ್ರಮಾಣದಲ್ಲಿ ನೀಡಲಾಗುತ್ತಿದೆ ಎಂದು ಹೇಳಿದರು.

Advertisement

ಸಂಘದ ಅಧ್ಯಕ್ಷ ಭೀಮಾಶಂಕರ ಪಾಟೀಲ ಮಾತನಾಡಿ, ಕಡಗಂಚಿಯಿಂದ ವಿಭಜಿತವಾದ ಸಂಘವು ದಣ್ಣೂರನಲ್ಲಿ ಸೊಸೈಟಿ ಸ್ಥಾಪನೆಯಾದ ಮೇಲೆ ಎಲ್ಲ ರೈತರಿಗೆ 25 ಸಾವಿರ ರೂ. ಸಾಲ ನೀಡಲಾಗಿದೆ. ಮುಂದಿನ ದಿನಗಳಲ್ಲಿ 50 ಸಾವಿರ ರೂ. ಸಾಲ ನೀಡಲು ನಿರ್ಧರಿಸಿ ಡಿಸಿಸಿಗೆ ಕೋರಿದ ಮೇಲೆ ಒಪ್ಪಿಗೆ ದೊರೆತಿದೆ ಎಂದು ತಿಳಿಸಿದರು.

ಡಿಸಿಸಿ ನಿರ್ದೇಶಕ ಬಸವರಾಜ ಪಾಟೀಲ ಹೇರೂರ, ಕಡಗಂಚಿ ವಿಎಸ್‌ಎಸ್‌ನ್‌ ಅಧ್ಯಕ್ಷ ಚಂದ್ರಕಾಂತ ಭೂಸನೂರ ಮಾತನಾಡಿದರು. ಪಿಎಲ್‌ಡಿ ಬ್ಯಾಂಕ್‌ ಮಾಜಿ ಅಧ್ಯಕ್ಷ ಬಸವರಾಜ ಪಾಟೀಲ ಗೋಳಾ, ಜಿಪಂ ಮಾಜಿ ಸದಸ್ಯ ಸಂತೋಷ ಪಾಟೀಲ ದಣ್ಣೂರ, ನಿವೃತ್ತ ಎಎಸ್‌ಐ ವಿ.ಜಿ.ಹೊನ್ನಶೆಟ್ಟಿ, ವಿಜಯಕುಮಾರ ಪಾಟೀಲ, ಗ್ರಾಪಂ ಅಧ್ಯಕ್ಷೆ ಶಾಂತಾಬಾಯಿ ಸಿಂಗೆ, ಸಂಘದ ಕಾರ್ಯದರ್ಶಿ ವಿಠ್ಠಲ ರೆಡ್ಡಿ ಹಾಗೂ ಗ್ರಾಪಂ ಸದಸ್ಯರು, ಪತ್ತಿನ ಸಂಘದ ನಿರ್ದೇಶಕರು, ಸದಸ್ಯ ರೈತರು, ಗ್ರಾಮಸ್ಥರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next