ನಗರ : ನಗರಸಭಾ ಕಚೇರಿಯ ಪಕ್ಕದಲ್ಲಿ ಇರುವ ನಗರಸಭೆ ಅಧೀನದ ವಾಣಿಜ್ಯ ಸಂಕೀರ್ಣದ ಮೇಲೆ ಮರದ ದೊಡ್ಡ ಗಾತ್ರದ ಗೆಲ್ಲುಗಳು ಹಬ್ಬಿಕೊಂಡಿದ್ದು, ಅಪಾಯಕಾರಿ ಸ್ಥಿತಿ ನಿರ್ಮಾಣವಾಗಿದೆ. ಇಲ್ಲಿ ನಗರಸಭೆಗೆ ಬರುವ ಸಾರ್ವಜನಿಕರು, ವಾಣಿಜ್ಯ ಸಂಕೀರ್ಣಕ್ಕೆ ಬರುವವರ ಓಡಾಟ ನಿರಂತರವಾಗಿ ಇರುತ್ತದೆ. ಗಾಳಿ ಮಳೆಯ ಸಂದರ್ಭದಲ್ಲಿ ಮರದ ಗೆಲ್ಲು ಮುರಿದುಬಿದ್ದರೆ ಪ್ರಾಣ ಹಾನಿ ಹಾಗೂ ಇತರ ಅನಾಹುತಗಳು ಸಂಭವಿಸಬಹುದಾದ ಅಪಾಯವಿದೆ. ಜತೆಗೆ ರಸ್ತೆಯ ಬದಿಯಲ್ಲೇ ಇರುವುದರಿಂದ ವಾಹನಗಳಿಗೂ ತೊಂದರೆಯಾಗಲಿದೆ. ವಿದ್ಯುತ್ ತಂತಿಗಳೂ ಹಾದು ಹೋಗಿರುವುದರಿಂದ ಅಪಾಯವಿದೆ.
ನೀರಿನ ಪಸೆ ಸಂಗ್ರಹವಾಗಿ ಕಟ್ಟಡದ ಬಾಳಿಕೆ, ಸುರಕ್ಷತೆಗೂ ಧಕ್ಕೆ ಆಗಬಹುದು. ಈ ಕುರಿತು ಮುನ್ನೆಚ್ಚರಿಕೆ ವಹಿಸಬೇಕಾದ ಜವಾಬ್ದಾರಿ ನಗರಸಭೆ ಆಡಳಿತಕ್ಕಿದೆ.
ಗಮನ ಹರಿಸಿ
ಅಪಾಯದ ಸಾಧ್ಯತೆಯ ಅರಿವಿದ್ದೂ ನಗರಸಭೆ ಆಡಳಿತ ಹಿಂದೆ ಮುಂದೆ ನೋಡುವುದು ಸರಿಯಲ್ಲ. ಮರದ ಗೆಲ್ಲು ಸವರಲು ಅರಣ್ಯ ಇಲಾಖೆಯ ಅನುಮತಿಯೂ ಅಗತ್ಯವಿಲ್ಲ. ವಿಪತ್ತು ಸಂಭವಿಸುವ ಮೊದಲು ಆಡಳಿತ ವ್ಯವಸ್ಥೆ, ಅಧಿಕಾರಿಗಳು ಗಮನಹರಿಸುವುದು ಒಳಿತು.
- ಡಿ. ಕೆ. ಭಟ್,
ಸಾಮಾಜಿಕ ಕಾರ್ಯಕರ್ತರು