ಡಂಗುರಾವ ಸಾರಿ ಹರಿಯ ಡಿಂಗರಿಗರೆಲ್ಲರೂ
ಭೂಮಂಡಲಕ್ಕೆ ಪಾಂಡುರಂಗ ವಿಠಲ ಪರದೈವವೆಂದು||
ಒಡಲ ಜಾಗಟೆಯ ಮಾಡಿ ನುಡಿವ ನಾಲಿಗೆಯ ಪಿಡಿದು|
ಬಿಡದೆ ಢಣಾರ್ ಢಣಾರ್ ಎಂದು ಬಡಿದು ಚಪ್ಪಾಳಿಕ್ಕುತಾ|| ಡಂಗುರಾವ||
ಹರಿಯು ಮುಡಿದ ಹೂವು ಹರಿವಾಣದಲ್ಲಿಟ್ಟುಕೊಂಡು|
ಹರುಷದಿಂದ ಹಾಡಿ ಪಾಡಿ ಕುಣಿದು ಚಪ್ಪಾಳಿಕ್ಕುತಾ||ಡಂಗುರಾವ||
ಇಂತು ಸಕಲ ಲೋಕಕ್ಕೆ ಲಕ್ಷ್ಮೀಕಾಂತ ನಲ್ಲದಿಲ್ಲವೆಂದು|
ಸಂತತಂ ಭಜಿಸುತ ನಿಶ್ಚಿಂತ ಪುರಂದರ ವಿಠಲನೆಂದೂ|| ಡಂಗುರಾವ||
ಈ ಹಾಡನ್ನು ಭಾಗವತರು ಹಾಡುತ್ತಿದ್ದಂತೆ ಉಡುಪಿ ಶ್ರೀಕೃಷ್ಣಮಠದಲ್ಲಿ ಪರ್ಯಾಯ ಸ್ವಾಮೀಜಿಯವರು ಹೆಜ್ಜೆ ಹಾಕುತ್ತಾರೆ. ಇದು ಆಷಾಢ ಶುದ್ಧ ಏಕಾದಶಿ ಮಂಗಳವಾರ ರಾತ್ರಿ ಶ್ರೀಕೃಷ್ಣಮಠದಲ್ಲಿ ಹರಿವಾಣ ನೃತ್ಯ ಸೇವೆ ಸಂದರ್ಭ ಕಂಡು ಬಂದ ದೃಶ್ಯ.
ರಾತ್ರಿ ಪೂಜೆಯಾದ ಬಳಿಕ ಸ್ವಾಮೀಜಿಯವರು ಕೃಷ್ಣನ ಗರ್ಭಗುಡಿ ಹೊರಗಿನ ಚಂದ್ರಶಾಲೆಯಲ್ಲಿ ಕುಳಿತಿರುತ್ತಾರೆ. ಆಗ ಸೂರ್ಯವಾದ್ಯವೇ ಮೊದಲಾದ ನಾಲ್ಕು ಬಗೆಯ ವಾದ್ಯೋಪಕರಣಗಳನ್ನು ಕಲಾವಿದರು ನುಡಿಸುತ್ತಾರೆ. ಅನಂತರ ಸಂಕೀರ್ತನೆ ನಡೆಯುತ್ತದೆ. ಭಾಗವತರು ನಾಲ್ಕು ಪದ್ಯಗಳನ್ನು ಹಾಡುತ್ತಾರೆ. ಪುರಾಣ ಹೇಳುವವರು ಸಾಂಕೇತಿಕವಾಗಿ ಪುರಾಣ ಪ್ರವಚನ ಮಾಡುತ್ತಾರೆ. ತೀರ್ಥಮಂಟಪದೆದುರು ಬಂದು ಸ್ವಾಮೀಜಿ ಮಂಗಳಾರತಿ ಮಾಡುತ್ತಾರೆ. ಆಗ ಭಾಗವತರು “ಡಂಗುರಾವ ಸಾರಿ ಹರಿಯ ಡಿಂಗರಿಗರೆಲ್ಲರೂ…|’ ಹಾಡುತ್ತಾರೆ. ದೇವರಿಗೆ ಸಮರ್ಪಿಸಿದ ತುಳಸಿ ಮತ್ತು ಹೂವುಗಳನ್ನು ಹರಿವಾಣದಲ್ಲಿರಿಸಿ ಹರಿವಾಣವನ್ನು ತಲೆ ಮೇಲೆ ಹೊತ್ತು ಸ್ವಾಮೀಜಿ ನರ್ತಿಸುತ್ತಾರೆ. ಇದಾದ ಬಳಿಕ ತುಳಸಿ ಮತ್ತು ಹೂವನ್ನು ಭಕ್ತರಿಗೆ ವಿತರಿಸಲಾಗುತ್ತದೆ.
ಹಾಡಿನ ಮೊದಲ ಸೊಲ್ಲು ಹೇಳುವಾಗ ಹಿರಿಯ ಸ್ವಾಮೀಜಿ ಹರಿವಾಣವನ್ನು ಹೊತ್ತು ನರ್ತಿಸಿದರೆ ಕೊನೆಯ ಎರಡು ಸೊಲ್ಲು ಹೇಳುವಾಗ ಕಿರಿಯ ಸ್ವಾಮೀಜಿ ನರ್ತಿಸಿದರು. ನರ್ತನವೆಂದರೆ ಸಾಮಾನ್ಯ ಹೆಜ್ಜೆ ಅಷ್ಟೆ. ಏಕಾದಶಿ ದಿನ ನಿರ್ಜಲ ಉಪವಾಸದಲ್ಲಿದ್ದು ರಾತ್ರಿ ಪೂಜೆಯಾದ ಬಳಿಕ ಪಾಂಡುರಂಗ ಈ ಜಗಕ್ಕೆಲ್ಲಾ ಮುಖ್ಯಸ್ಥನೆಂಬುದು ಅನುಸಂಧಾನ ಮಾಡುವುದು/ ಸಾರುವುದು ಈ ಹಾಡಿನ ಸಾರ. ರಾತ್ರಿ ಪುರಾಣ ಪ್ರವಚನ, ಸಂಕೀರ್ತನ, ನರ್ತನದಿಂದ ಜಾಗರವಿರಬೇಕೆಂಬ ಸಂಕೇತಾರ್ಥದಲ್ಲಿ ಈ ಆಚರಣೆಗಳು ಚಾಲ್ತಿಗೆ ಬಂದಿವೆ. ಚಾತುರ್ಮಾಸ್ಯದ ನಾಲ್ಕೂ ತಿಂಗಳಲ್ಲಿ ಬರುವ ಎಂಟು ಏಕಾದಶಿಗಳಂದು ಉಡುಪಿ ಸಂಪ್ರದಾಯದ ಎಲ್ಲಾ ಸ್ವಾಮೀಜಿಯವರು ಎಲ್ಲಿ ಮೊಕ್ಕಾಂ ಇರುತ್ತಾರೋ ಅಲ್ಲಿ ಈ ತೆರನಾದ ಆಚರಣೆ ನಡೆಯುತ್ತದೆ.