Advertisement

ಕಾಲಿಕಡವಿನಿಂದ ತಲಪಾಡಿ ತನಕ 1,566 ಗುಂಡಿಗಳು

12:12 AM Sep 17, 2019 | Sriram |

ಕಾಸರಗೋಡು: ಕೇರಳ – ಕರ್ನಾಟಕ ಗಡಿಪ್ರದೇಶವಾದ ಕಾಸರಗೋಡು ಜಿಲ್ಲೆಯ ಸಾವಿರಾರು ಪ್ರಯಾಣಿಕ ವಾಹನ ಗಳಿಗೆ ಆಸರೆಯಾಗಿರುವ ರಾಷ್ಟ್ರೀಯ ಹೆದ್ದಾರಿ – 66 ರಲ್ಲಿ ಸೃಷ್ಟಿಯಾಗಿರುವ ಗುಂಡಿಗಳ ಸಂಖ್ಯೆಯನ್ನು ಖಚಿತವಾಗಿ ನಿರ್ಧರಿಸುವುದು ಕಷ್ಟವಾದರೂ, ಈ ರಸ್ತೆಯಲ್ಲಿ ಗುಂಡಿಗಳ ಸಂಖ್ಯೆ ಬರೋಬರಿ 1,566 ಇವೆ. ಈ ಪೈಕಿ ಕೆಲವು ಗುಂಡಿಗಳನ್ನು ಮುಚ್ಚಿ ಕೆಲವೇ ದಿನಗಳಲ್ಲಿ ಮತ್ತೆ ಅದೇ ಸ್ಥಿತಿಗೆ ಮರಳಿದೆ.

Advertisement

ಕಣ್ಣೂರು ಜಿಲ್ಲೆಯ ಗಡಿಯಾಗಿರುವ ಕಾಲಿಕಡವಿ ನಿಂದ ಕರ್ನಾಟಕದ ಗಡಿ ಯಾಗಿರುವ ತಲಪ್ಪಾಡಿಯ ವರೆಗೆ ಕಾಸರ ಗೋಡು ಜಿಲ್ಲೆಯ ರಾ.ಹೆದ್ದಾರಿಯಲ್ಲಿ ಸೃಷ್ಟಿಯಾಗಿ ರುವ ಮೃತ್ಯು ಕೂಪ ದುರಸ್ತಿಗೆ ಸಂಬಂಧಪಟ್ಟ ಅಧಿಕಾರಿಗಳು ತೋರುವ ಅವಗಣನೆ ಪ್ರತಿಭಟನಾರ್ಹವಾಗಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಸೃಷ್ಟಿಯಾಗಿ ರುವ ಹೊಂಡಗುಂಡಿಗಳನ್ನು ದುರಸ್ತಿಗೊಳಿಸ ಬೇಕೆಂದು ಆಗ್ರಹಿಸಿ ಹಲವು ರಾಜಕೀಯ ಪಕ್ಷಗಳು, ಸಂಘಟನೆಗಳು ಪ್ರತಿಭಟನೆ ನಡೆಸಿದ್ದರೂ, ಈ ವರೆಗೂ ರಸ್ತೆ ದುರಸ್ತಿಗೆ ಸೂಕ್ತ ಕ್ರಮ ತೆಗೆದುಕೊಂಡಿಲ್ಲ.

ತಲಪಾಡಿಯಿಂದ ಉಪ್ಪಳದ ವರೆಗೆ 310 ಗುಂಡಿಗಳು
ವಿವಿಧ ಸ್ಥಳಗಳಲ್ಲಿ ಸೃಷ್ಟಿಯಾಗಿರುವ ಗುಂಡಿಗಳಲ್ಲಿ ಸಿಲುಕಿ ವಾಹನಗಳಿಗೆ ಹಾನಿ ಸಂಭವಿಸುತ್ತಿರುವುದು ಸಾಮಾನ್ಯವಾಗಿದ್ದು, ಸಾರಿಗೆ ಅಡೆತಡೆ ನಿತ್ಯ ಸಂಭವವಾಗಿದೆ. ಪದೇ ಪದೇ ರಸ್ತೆ ಬ್ಲಾಕ್‌ ಆಗುತ್ತಿದೆ. ಶಿರಿಯ, ಮಳ್ಳಂಗೈ, ಕುಕ್ಕಾರ್‌, ಉಪ್ಪಳ, ಪೊಸೋಟು, ಮಂಜೇಶ್ವರ, ಉದ್ಯಾವರ, ಹತ್ತನೇ ಮೈಲು, ತೂಮಿನಾಡು, ತಲಪ್ಪಾಡಿ ಮೊದಲಾದೆಡೆಗಳಲ್ಲಿ ರಾಷ್ಟ್ರೀಯ ಹೆದ್ದಾರಿ ಅತ್ಯಂತ ಶೋಚನೀಯ ಸ್ಥಿತಿಯಲ್ಲಿದೆ.
ವಾಹನಗಳು ಸುಗಮವಾಗಿ ಸಾಗಲು ಸಾಧ್ಯವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಉಪ್ಪಳದಿಂದ ಕಾಸರಗೋಡಿಗೆ ಸಾಮಾನ್ಯ ವಾಗಿ ಅರ್ಧ ಗಂಟೆ ಸಾಕಾಗಿದ್ದರೂ, ಇದೀಗ ಒಂದೂಕಾಲು ಗಂಟೆ ಅಗತ್ಯವಿದೆ. ಉಪ್ಪಳದಿಂದ ಮಂಗಳೂರಿಗೆ ಈ ಹಿಂದೆ 45 ನಿಮಿಷ ಸಾಕಾಗಿದ್ದರೆ, ಇಂದು ಒಂದೂ ಕಾಲು ಗಂಟೆಗೂ ಅಧಿಕ ಕಾಲಾವಕಾಶ ಬೇಕು. ಈ ಕಾರಣದಿಂದ ಕಚೇರಿಗಳಿಗೆ, ಶಾಲಾ ಕಾಲೇಜುಗಳಿಗೆ ನಿಗದಿತ ಸಮಯಕ್ಕೆ ತಲುಪಲು ಸಾಧ್ಯವಾಗುತ್ತಿಲ್ಲ. ಮಂಗಳೂರು ವಿಮಾನ ನಿಲ್ದಾಣಕ್ಕೆ ಹೋಗುವವರು ಮತ್ತು ರೋಗಿಗಳೊಂದಿಗೆ ಆಸ್ಪತ್ರೆಗೆ ಹೋಗುವವರೂ ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ.

ಕಾಸರಗೋಡು ನಗರದಿಂದ ಕುಂಬಳೆ ವರೆಗೆ 951 ಗುಂಡಿಗಳು
ಕಾಸರಗೋಡು ನಗರದಿಂದ ಕುಂಬಳೆ ತನಕ ಸುಮಾರು 951 ಗುಂಡಿಗಳಿವೆ. ಅತ್ಯಂತ ಅಪಾಯಕಾರಿ ಹೊಂಡ ಅಶ್ವಿ‌ನಿ ನಗರ, ಅಡ್ಕತ್ತಬೈಲ್‌, ಎರಿಯಾಲ್‌, ಚೌಕಿ, ಮೊಗ್ರಾಲ್‌ ಪುತ್ತೂರು, ಮೊಗ್ರಾಲ್‌, ಪೆರುವಾಡು, ಕುಂಬಳೆಯಲ್ಲಿದೆ. ಈ ಪ್ರದೇಶಗಳಲ್ಲಿ ರಸ್ತೆ ಬದಿಯ ವಿದ್ಯುತ್‌ ದೀಪಗಳು ಬೆಳಗದಿರುವುದರಿಂದ ರಾತ್ರಿ ಹೊತ್ತಿನಲ್ಲಿ ವಾಹನಗಳು ಮಳೆ ನೀರು ತುಂಬಿದ ಹೊಂಡಗಳಲ್ಲಿ ಸಿಲುಕಿ ಅಪಾಯಕ್ಕೆ ತುತ್ತಾಗುತ್ತಿವೆ.

ಚೆರ್ಕಳದಿಂದ ಕಾಸರಗೋಡು ನಗರದವರೆಗೆ 148 ಗುಂಡಿಗಳು
ಚೆರ್ಕಳದಿಂದ ಕಾಸರಗೋಡು ನಗರದ ವರೆಗೆ 148 ಗುಂಡಿಗಳಿವೆ. ಕೇವಲ ಏಳು ಕಿಲೋ ಮೀಟರ್‌ ದೂರದಲ್ಲಿ ಇಷ್ಟು ಗುಂಡಿಗಳು ಸೃಷ್ಟಿಯಾಗಿವೆ. ಅಣಂಗೂರಿನಿಂದ ಕಾಸರಗೋಡು ನಗರದ ಹೊಸ ಬಸ್‌ ನಿಲ್ದಾಣದವರೆಗೆ ಗುಂಡಿಗಳು ಬಹಳಷ್ಟು ಅಪಾಯಕಾರಿ ಸ್ಥಿತಿಯಲ್ಲಿವೆೆ. ಹೊಸ ಬಸ್‌ ನಿಲ್ದಾಣ ಪರಿಸರದಲ್ಲೂ ಬೃಹತ್‌ ಗುಂಡಿ ನಿರ್ಮಾಣವಾಗಿದೆ.

Advertisement

ಪೊಯಿನಾಚಿಯಿಂದ ಚೆರ್ಕಳದ ವರೆಗೆ 20 ಗುಂಡಿಗಳು
ಈ ರಸ್ತೆಗೆ ಹಾಕಲಾಗಿದ್ದ ಇಂಟರ್‌ಲಾಕ್‌ಗಳು ಮೇಲೆದ್ದು, ಗುಂಡಿಗಳು ನಿರ್ಮಾಣ ವಾಗಿದೆ. ತೆಕ್ಕಿಲ್‌ ತಿರುವಿನಲ್ಲಿ ಇಂಟರ್‌ಲಾಕ್‌ ಹಾನಿಗೀಡಾಗಿದ್ದು ಅಪಘಾತ ಸಾಧ್ಯತೆಗೆ ಕಾರಣವಾಗಿದೆ. ತೆಕ್ಕಿಲ್‌ ಸೇತುವೆಯಲ್ಲಿ ಮಳೆ ನೀರು ತುಂಬಿ ಹೊಂಡ ಗೋಚರಿಸುವುದಿಲ್ಲ. ಬೇವಿಂಜೆಯಿಂದ ಚೆರ್ಕಳದ ವರೆಗೆ ಸಣ್ಣ ಹಾಗು ದೊಡ್ಡ ಗಾತ್ರದ ಹಲವು ಗುಂಡಿಗಳಿವೆ. 20ರಷ್ಟು ಸಣ್ಣ ಗುಂಡಿಗಳಿವೆ. ಚೆರ್ಕಳ ಪೇಟೆಯಲ್ಲಿ ಬೃಹತ್‌ ಹೊಂಡಗಳಿದ್ದು ಅಪಾಯಕಾರಿಯಾಗಿವೆ.

ಮೂಲಕಂಡದಿಂದ ಪೆರಿಯಾಟಡ್ಕದ ವರೆಗೆ 10 ಗುಂಡಿ
ಮೂಲಕಂಡದಿಂದ ಮಾವುಂಗಾಲಿನ ವರೆಗೆ ದೊಡ್ಡ ಗುಂಡಿಗಳಿವೆ. ಹತ್ತಕ್ಕೂ ಅಧಿಕ ಹೊಂಡಗಳಿವೆ. ಪುಲ್ಲೂರು ಸೇತುವೆ ಪರಿಸರದಲ್ಲಿ ಬೃಹತ್‌ ಗುಂಡಿಯೊಂದಿದೆ.
ಪಡನ್ನಕಾಡ್‌ ಸೇತುವೆಯಿಂದ ಮಾವುಂಗಾಲಿನ ವರೆಗೆ 40 ಗುಂಡಿ ಪಡನ್ನಕ್ಕಾಡ್‌ ಮೇಲ್ಸೇತುವೆಯಿಂದ ಐಂಗೋತ್‌ ವರೆಗೆ 40 ಕ್ಕೂ ಅಧಿಕ ಗುಂಡಿಗಳು ಸೃಷ್ಟಿಯಾಗಿವೆ. ಕಾಂಞಂಗಾಡ್‌ ಸೌತ ನಿಂದ ಮಾವುಂಗಾಲ್‌ ಪೇಟೆಯ ವರೆಗಿನ ಆರು ಕಿಲೋ ಮೀಟರ್‌ ರಸ್ತೆ ಉತ್ತಮ ಸ್ಥಿತಿಯಲ್ಲಿದೆ.

ಕಾರ್ಯಾಂಗೋಡು ಸೇತುವೆಯಿಂದ ಪಡನ್ನಕ್ಕಾಡ್‌ ಸೇತುವೆಯ ವರೆಗೆ 25 ಗುಂಡಿಗಳು ಪಡನ್ನಕ್ಕಾಡ್‌ನ‌ ಮೇಲ್ಸೇತುವೆಯಲ್ಲಿ ಮಾತ್ರವೇ 10ಕ್ಕೂ ಅಧಿಕ ಗುಂಡಿಗಳಿವೆ. ಇದರಿಂದಾಗಿ ಸಾರಿಗೆ ಅಸ್ತವ್ಯಸ್ತಗೊಳ್ಳುತ್ತಿದೆ. ಕಾರ್ಯಾಂಗೋಡು ಸೇತುವೆಯಿಂದ ಪಡನ್ನಕ್ಕಾಡ್‌ ತನಕ ಸಣ್ಣ ಗಾತ್ರದ ಹೊಂಡಗಳಿವೆ.

ಚೆರ್ವತ್ತೂರಿನಿಂದ ಕಾಲಿಕಡವಿನ ವರೆಗೆ 62 ಗುಂಡಿಗಳು
ಈ ಪ್ರದೇಶದಲ್ಲಿ ಸಣ್ಣ ಹಾಗು ದೊಡ್ಡ ಗಾತ್ರದ 62 ಗುಂಡಿಗಳು ಸೃಷ್ಟಿಯಾಗಿದ್ದು, ಈ ಪ್ರದೇಶದಲ್ಲಿ ಹಲವು ವಾಹನ ಅಪಘಾತಗಳು ಸಂಭವಿಸಿವೆ.

ರಸ್ತೆ ತಡೆ, ಪ್ರತಿಭಟನೆ
ಕೇರಳ ರಾಜ್ಯ ಸರಕಾರ ಉದ್ದೇಶ ಪೂರ್ವಕವಾಗಿ ಗಡಿನಾಡು ಕನ್ನಡಿಗರು ಅಧಿಕವಾಗಿರುವ ಈ ಭಾಗವನ್ನು ನಿರ್ಲಕ್ಷÂ ಮಾಡುತ್ತಿದೆ. ಕೇಂದ್ರ ಸರಕಾರ ಈಗಾಗಲೇ ತಲಪಾಡಿಯಿಂದ ಕಾಸರಗೋಡು ವರೆಗೆ ರಸ್ತೆ ದುರಸ್ತಿಗೆ 14 ಕೋಟಿ ಬಿಡುಗಡೆ ಮಾಡಿದರೂ ಪಿಣರಾಯಿ ಸರಕಾರ ದುರಸ್ತಿ ಆರಂಭಿಸಿಲ್ಲ. ಹೆದ್ದಾರಿ ದುರಸ್ತಿ ಪ್ರಾಧಿಕಾರ ಹಾಗೂ ರಾಜ್ಯ ಸರಕಾರದ ಹೊಣೆ. ಕೆಎಸ್‌ಆರ್‌ಟಿಸಿ ಬಸ್‌ ಮೊಟಕುಗೊಳಿಸಿ ಜನರಿಗೆ ತೊಂದರೆ ನೀಡುವ ಅಧಿಕಾರಿಗಳ ವಿರುದ್ಧ ಹೋರಾಟ ಅನಿವಾರ್ಯವಾಗಿದೆ. ರಸ್ತೆ ದುರಸ್ತಿ ಕಾರ್ಯ 10 ದಿನಗಳಲ್ಲಿ ಅಗದಿದ್ದಲ್ಲಿ 24 ಗಂಟೆ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಲಾಗುವುದು.
-ಆದರ್ಶ್‌ ಬಿ.ಎಂ., ಪ್ರಧಾನ ಕಾರ್ಯದರ್ಶಿ, ಬಿಜೆಪಿ ಮಂಜೇಶ್ವರ ಮಂಡಲ

ಕಾಮಗಾರಿ ಪ್ರಗತಿ
ಹೆದ್ದಾರಿ ದುರಸ್ತಿಗೆ 10 ದಿನ ಕಾಯಬೇಕು : ತಲಪಾಡಿಯಿಂದ ಕಾಲಿಕಡವ್‌ ತನಕ ಕಾಸರಗೋಡು ಜಿಲ್ಲೆಯಲ್ಲಿ ಹಾದು ಹೋಗುವ ಶೋಚನೀಯಾವಸ್ಥೆಯಿಂದ ಕೂಡಿದ ರಾಷ್ಟ್ರೀಯ ಹೆದ್ದಾರಿಯ ಪೂರ್ಣ ದುರಸ್ತಿಗೆ ಇನ್ನೂ 10 ದಿನಗಳ ಕಾಲ ಕಾಯಬೇಕು. ಈಗಾಗಲೇ ರಸ್ತೆಯಲ್ಲಿನ ಹೊಂಡಗಳನ್ನು ಮುಚ್ಚುವ ಕಾಮಗಾರಿ ಪ್ರಗತಿಯಲ್ಲಿದೆ.
– ವಿ.ವಿ. ಶಾಸ್ತ್ರೀ, ಅಧಿಕಾರಿ, ಕೇಂದ್ರ ಸಾರಿಗೆ ಸಚಿವಾಲಯ, ತಿರುವನಂತಪುರ ವಲಯ ಕಚೇರಿ

ಭಾರೀ ದಂಡಕ್ಕೆ ಸಿದ್ಧರಾಗಿ
ಪ್ರಯಾಣಿಕರ ತಾಳ್ಮೆಯನ್ನು ಪರೀಕ್ಷಿಸುವ ಅಧಿಕಾರಿಗಳ ನಿಲುವು ಮುಂದುವರಿದರೆ ಭಾರೀ ಬೆಲೆ ತೆರಬೇಕಾಗುವುದು. ರಾಷ್ಟ್ರೀಯ ಹೆದ್ದಾರಿ ಪ್ರಯಾಣ ಸಮಸ್ಯೆ ಪರಿಹರಿಸುವುದಕ್ಕೆ ಶೀಘ್ರವೇ ದುರಸ್ತಿ ಕಾರ್ಯ ಪೂರ್ಣಗೊಳಿಸಬೇಕು.
– ಎನ್‌.ಎ. ನೆಲ್ಲಿಕುನ್ನು,
ಶಾಸಕ, ಕಾಸರಗೋಡು

-ಪ್ರದೀಪ್‌ ಬೇಕಲ್‌

Advertisement

Udayavani is now on Telegram. Click here to join our channel and stay updated with the latest news.

Next