ಕಟಪಾಡಿ: ಉದ್ಯಾವರ ಮೇಲ್ಪೇಟೆ ಐ.ಟಿ.ಐ. ಬಳಿ ಶಿಥಿಲಗೊಂಡು ಅಪಾಯಕಾರಿಯಾಗಿದ್ದ ಬಸ್ ತಂಗುದಾಣವೊಂದನ್ನು ಉದ್ಯಾವರ ಗ್ರಾ. ಪಂ. ಕೆಡಹುವ ಮೂಲಕ ಸುರಕ್ಷತೆ ಕಲ್ಪಿಸಿದೆ. ಈ ಬಸ್ಸು ತಂಗುದಾಣವನ್ನು ಎಲ್ಲರೂ ಉಪಯೋಗಿಸುತ್ತಿದ್ದು, ಅಪಾಯದ ಪರಿಸ್ಥಿತಿ ನಿರ್ಮಾಣವಾಗಿದ್ದು, ಯಾವುದೇ ಸಂದರ್ಭದಲ್ಲೂ ಅವಘಡ ಸಂಭವಿಸುವ ಸಾಧ್ಯತೆ ಇದೆ. ಅಪಾಯ ಸಂಭವಿಸುವ ಮುನ್ನ ಎಚ್ಚೆತ್ತು ಸುರಕ್ಷತೆ ಕಲ್ಪಿಸುವಂತೆ ಡಿ.12ರಂದು ಜರಗಿದ ಮಕ್ಕಳ ಗ್ರಾಮಸಭೆಯಲ್ಲಿ ವಿದ್ಯಾರ್ಥಿಗಳು ಗ್ರಾಮ ಪಂಚಾಯತ್‌ನ್ನು ಎಚ್ಚರಿಸಿದ್ದರು. ಇದಕ್ಕೆ ಪೂರಕವಾಗಿ ಸ್ಪಂದಿಸಿದ ಉದ್ಯಾವರ ಗ್ರಾ.ಪಂ. ಇದರ ಆಡಳಿತ ಮತ್ತು ಅಧಿಕಾರಿ ವರ್ಗವು ಈ ಅಪಾಯಕಾರಿ ಬಸ್ ತಂಗುದಾಣವನ್ನು ಡಿ.14ರ ಸಂಜೆ ಕೆಡಹುವ ಮೂಲಕ ಸ್ಪಂದಿಸಿದ್ದಾರೆ. ಸುರಕ್ಷತಾ ದೃಷ್ಟಿಯಿಂದ ಬಸ್ಸು ತಂಗುದಾಣವನ್ನು ಬಳಸದಂತೆ ನಿರ್ಬಂಧಿಸಿ ಈ ಮೊದಲೇ ಸೂಕ್ತವಾದ ಸೂಚನಾ ಫಲಕ, ಅಡ್ಡ ಪಟ್ಟಿಗಳನ್ನು ಅಳವಡಿಸಲಾಗಿತ್ತು. ದಾನಿಗಳ ಸಹಾಯದಿಂದ ಸುಸಜ್ಜಿತ ಬಸ್ಸು ತಂಗುದಾಣದ ನಿರ್ಮಾಣದ ಬಗ್ಗೆಯೂ ಯೋಜನೆ ಮಾಡಲಾಗಿದೆ ಎಂದು ಪಿ.ಡಿ.ಒ. ತಿಳಿಸಿದ್ದಾರೆ.