Advertisement
ಈ ಎಲ್ಲದರ ನಡುವೆ ಇತ್ತೀಚೆಗೆ ಪ್ರಕಟ ವಾದ ಸಂಶೋಧನೆಯೊಂದರ ವರದಿಯಲ್ಲಿ ಶುಭ ಸುದ್ದಿಯೊಂದು ಬಂದಿದೆ. ಪ್ರಪಂಚದಾದ್ಯಂತ ವಂಶ ನಾಶ ಎದುರಿಸುತ್ತಿರುವ ಸುಮಾರು 73 ಜೀವಿಗಳು (48 ಪಕ್ಷಿ ಪ್ರಭೇದ ಮತ್ತು 25 ಸಸ್ತನಿ ಪ್ರಭೇದ) ಅಪಾಯದ ಅಂಚಿನಿಂದ ಪಾರಾಗಿವೆ. ಅದು ಹೇಗೆ ಎನ್ನುವುದರ ವಿವರ ಇಲ್ಲಿದೆ.
ಸಂರಕ್ಷಿಸಲ್ಪಟ್ಟ ಜೀವಿಗಳಲ್ಲಿ ಪ್ಯೂಟೋರಿಕಾನ್ ಗಿಳಿ, ಮಂಗೋಲಿಯನ್ ಕಾಡು ಕುದುರೆ, ಸಿಬೇರಿಯನ್ ಲಿಂಕ್ಸ್, ನ್ಯೂಜಿಲ್ಯಾಂಡ್‌ನ ಪಕ್ಷಿಯಾದ ಬ್ಲ್ಯಾಕ್ ಸ್ಟಿಂಟ್, ಕ್ಯಾಲಿಫೋರ್ನಿಯಾ ಕೊಂಡಾರ್, ಪಿಗ್ಮಿ ಹೋಗ್ ಮುಂತಾದವು ಒಳಗೊಂಡಿವೆ.
Related Articles
ಈ ಜೀವಿಗಳನ್ನು ವಂಶನಾಶದ ಭೀತಿಗೆ ತಳ್ಳಿದ್ದು ಮಾನವನ ವಿವೇಚನ ರಹಿತವಾದ ಚಟುವಟಿಕೆಗಳೇ ಎನ್ನುತ್ತಾರೆ ವಿಜ್ಞಾನಿಗಳು. ಅವುಗಳ ವಾಸ ಸ್ಥಾನದ ನಾಶ, ಮಿತಿ ಮೀರಿದ ಬೇಟೆ, ವಾತಾವರಣದಲ್ಲಿ ಕಂಡು ಬಂದ ವ್ಯತ್ಯಯ, ಕಾಯಿಲೆ ಮುಂತಾದವುಗಳು ಈ ಅಪೂರ್ವ ಜೀವಿಗಳನ್ನು ವಂಶನಾಶದ ಅಂಚಿಗೆ ತಳ್ಳಿದ್ದವು. 1970ರ ದಶಕದ ಅನಂತ ಜಗತ್ತಿನ ವನ್ಯ ಜೀವಿಗಳ ಸಂಖ್ಯೆಯಲ್ಲಿ ಮೂರರಲ್ಲಿ ಎರಡು ಅಂಶದವರೆಗೆ ಕಡಿಮೆಯಾಗಿತ್ತು ಎನ್ನುತ್ತದೆ ಡಬ್ಲ್ಯುಡಬ್ಲ್ಯುಎಫ್ ವರದಿ.
Advertisement
ಯುಕೆ ಮೂಲದ ನ್ಯೂಕಾಸ್ಟಲ್ ವಿವಿಯ ಸಂಶೋಧಕ ಡಾ| ರೈಕ್ ಬೋಲನ್ ಪ್ರತಿಕ್ರಿಯಿಸಿ, “ವರದಿಯ ಪ್ರಕಾರ ಕೆಲ ಜೀವಿಗಳು ವಂಶ ನಾಶ ಭೀತಿಯಿಂದ ನಾವಂದುಕೊಂಡದ್ದಕ್ಕಿಂತಲೂ ವೇಗವಾಗಿ ಪಾರಾಗಿವೆ ಎನ್ನುವುದು ನಿರೀಕ್ಷೆ ಹೆಚ್ಚಿಸಿದೆ. ಇನ್ನೊಂದು ಧನಾತ್ಮಕ ಅಂಶವೆಂದರೆ ವಂಶನಾಶದ ಭೀತಿ ಎದುರಿಸುತ್ತಿರುವ ಜೀವಿಗಳ ಸಂಖ್ಯೆಯಲ್ಲಿ ಇತ್ತೀಚೆಗೆ ಗಣನೀಯವಾದ ಇಳಿಕೆ ಕಂಡು ಬಂದಿದೆ. ವಿನಾಶದ ಅಂಚಿನಲ್ಲಿರುವ ಜೀವಿಗಳನ್ನು ಸಂರಕ್ಷಿಸಬಹುದು ಎನ್ನುವ ಹೊಸದೊಂದು ಸಾಧ್ಯತೆಯನ್ನೂ ಇದು ತೆರೆದಿಟ್ಟಿದೆ’ ಎನ್ನುತ್ತಾರೆ. ಸುಮಾರು 137 ಸಂಶೋಧಕರ ತಂಡ ನಡೆಸಿದ ಅಧ್ಯಯನ ಆಧಾರದಲ್ಲಿ ಡಾ| ರೈಕ್ ಬೋಲನ್ ಮತ್ತು ಅವರ ಸಹೋದ್ಯೋಗಿಗಳು ಈ ನಿಗಮನಕ್ಕೆ ಬಂದಿದ್ದಾರೆ. ಪ್ರತಿ ಜೀವಿಯ ಎತ್ತರ, ತೂಕ, ವರ್ತನೆ, ಅವುಗಳು ಎದುರಿಸುತ್ತಿರುವ ಸವಾಲು ಮುಂತಾದ ಅಂಶಗಳನ್ನು ಸಂಶೋಧನೆಗಾಗಿ ಪರಿಗಣಿಸಲಾಗಿತ್ತು. ಸಂರಕ್ಷಣಾ ವಿಧಾನ
ಆಕ್ರಮಣಕಾರಿ ಜೀವಿಗಳ ನಿಯಂತ್ರಣ, ವಾಸಸ್ಥಾನದ ಸಂರಕ್ಷಣೆ ಮುಂತಾದವುಗಳು ಪಕ್ಷಿಗಳನ್ನು ಕಾಪಾಡಿದರೆ ಹೊಸ ಕಾನೂನು ರಚನೆ, ಮೃಗಾಲಯಗಳ ನಿಯಮಗಳಲ್ಲಿ ಬದಲಾವಣೆ ಇತ್ಯಾದಿ ಕ್ರಮಗಳು ಸಸ್ತನಿಗಳನ್ನು ಸಂರಕ್ಷಿಸಿದವು. “ಇದು ನಂಬಿಕೆಯನ್ನು ಗಟ್ಟಿಗೊಳಿಸುವ ಅಂಶ. ಇದೇ ರೀತಿಯ ಕ್ರಮಗಳು ಕೈಗೊಂಡರೆ ಜೀವಜಾಲಗಳ ನಾಶವನ್ನು ತಡೆಗಟ್ಟಬಹುದು’ ಎಂದು ಸಲಹೆ ನೀಡುತ್ತಾರೆ ಹಿರಿಯ ವಿಜ್ಞಾನಿ ಫಿಲ್ ಮ್ಯಾಕ್‌ಗೊàವನ್. ಆದರೂ ಈ ಕಾಲಾವಧಿಯಲ್ಲೇ ಸುಮಾರು 15 ಪಕ್ಷಿಗಳೂ, ಸಸ್ತನಿಗಳೂ ಕಣ್ಮರೆಯಾಗಿರುವ ಸಾಧ್ಯತೆ ಇದೆ ಎಂದು ಅವರು ಸಂಶಯ ವ್ಯಕ್ತ ಪಡಿಸಿದ್ದಾರೆ. ಒಟ್ಟಿನಲ್ಲಿ ಇನ್ನಾದರೂ ನಾವು ಎಚ್ಚೆತ್ತುಕೊಳ್ಳದಿದ್ದರೆ ಜೀವಜಾಲಗಳಿಗೆ ಅಪಾಯ ಕಟ್ಟಿಟ್ಟ ಬುತ್ತಿ ಎನ್ನುವುದನ್ನು ಈ ವರದಿ ಸಾರಿ ಹೇಳುತ್ತದೆ. ರಮೇಶ್ ಬಿ., ಕಾಸರಗೋಡು