Advertisement

ಹೆದ್ದಾರಿ ಹೊಂಡಗಳಿಂದ ಅಪಾಯ

11:56 AM Jul 13, 2018 | |

ಸುಳ್ಯ : ಮಾಣಿ-ಮೈಸೂರು ರಾಜ್ಯ ಹೆದ್ದಾರಿಯ ಸಂಪಾಜೆ – ಕನಕ ಮಜಲು ತನಕದ ರಸ್ತೆ ನಾನಾ ಭಾಗದಲ್ಲಿ ಹೊಂಡ ನಿರ್ಮಾಣಗೊಂಡು, ವಾಹನ ಸವಾರರ ಪಾಲಿಗೆ ಮೃತ್ಯುಕೂಪವಾಗುವ ಆತಂಕ ಸೃಷ್ಟಿಯಾಗಿದೆ..! ರಸ್ತೆ ನಿರ್ವಹಣೆ ಅಸರ್ಮಪಕ ಕುರಿತಂತೆ ಸಾರ್ವಜನಿಕ ವಲಯದಿಂದ ದೂರುಗಳು ಕೇಳಿ ಬಂದಿತ್ತು. ಲೋಕಾಯುಕ್ತ ತನಕ ತಲುಪಿತ್ತು. ಇವೆಲ್ಲವೂ ಮಳೆಗಾಲದ ಮೊದಲೇ ನಡೆದ ಪ್ರಕ್ರಿಯೆ. ಆದರೂ ಕೆಆರ್‌ಡಿಸಿಎಲ್‌ ಎಚ್ಚೆತ್ತುಕೊಳ್ಳದ ಕಾರಣ, ಮಳೆಗಾಲದಲ್ಲಿ ಒಂದರ ಹಿಂದೆ ಮತ್ತೂಂದರಂತೆ ಹೊಂಡಗಳು ನಿರ್ಮಾಣವಾಗುತ್ತಿದೆ.

Advertisement

ಎನ್‌ಎಚ್‌ನಿಂದ ಎಸ್‌ಎಚ್‌ಗೆ ಪತ್ರ
ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದ ಸುಪರ್ದಿಯಲ್ಲಿರುವ ಈ ರಾಜ್ಯ ರಸ್ತೆ, ಎನ್‌ಎಚ್‌ ಆಗಿ ಹಸ್ತಾಂತರಿಸುವ ಮೊದಲು, ರಸ್ತೆ ನಿರ್ವಹಣೆ ಸಮರ್ಪಕವಾಗಿರಬೇಕಿದೆ. ಈ ರಸ್ತೆಯಲ್ಲಿ ಅಲ್ಲಲ್ಲಿ ಹೊಂಡ ಇದ್ದು, ಇದನ್ನು ಮುಚ್ಚುವ ಕೆಲಸ ಆಗಬೇಕು. ಈ ಬಗ್ಗೆ ಎನ್‌ಎಚ್‌ ಪ್ರಾಧಿಕಾರ ಕೆಆರ್‌ ಡಿಸಿಎಲ್‌ಗೆ ಪತ್ರೆ ಬರದಿತ್ತು. ಇದಕ್ಕೆ ಮೂರು ತಿಂಗಳು ಕಳೆದಿದೆ. ಕೆಲವು ಭಾಗದಲ್ಲಿ ದುರಸ್ತಿ ಬಗ್ಗೆ ತಯಾರಿ ಆರಂಭಗೊಂಡರೂ. ಅದು ಅಂತಿಮ ಹಂತಕ್ಕೆ ತಲುಪಿಲ್ಲ.

ಅಲ್ಲಲ್ಲಿ ಮರಣಗುಂಡಿ
ಕನಕಮಜಲು, ಬೋಳುಬೈಲು, ಸುಳ್ಯ ನಗರ, ಅರಂತೋಡು ಮೊದಲಾದ ಭಾಗದಲ್ಲಿ ರಸ್ತೆ ಹದಗೆಟ್ಟಿದೆ. ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದ ಕಾರಣ, ಮಳೆ ನೀರು ರಸ್ತೆಯಲ್ಲೇ ಹಾದು ಹೋಗುತ್ತಿದೆ. ಪರಿಣಾಮ ಆರು ವರ್ಷದ ಹಿಂದೆ ನಿರ್ಮಿಸದ ರಸ್ತೆಯಲ್ಲಿ ಹೊಂಡ ನಿರ್ಮಾಣವಾಗಿದೆ. ಈ ಬಗ್ಗೆ ಸಾರ್ವಜನಿಕರು ಕೆಆರ್‌ಡಿಸಿಎಲ್‌ ಕಚೇರಿಗೆ ದೂರು ನೀಡಿದ್ದರೂ, ಅಲ್ಲಿಂದ ಸ್ಪಂದನೆ ಸಿಕ್ಕಿಲ್ಲ. ಸ್ಥಳಕ್ಕೆ ಭೇಟಿ ನೀಡುತ್ತೇನೆಂದರೂ ಬಂದಿಲ್ಲ ಎಂದು ಸಾರ್ವಜನಿಕರು ಅಸಮಧಾನ ವ್ಯಕ್ತಪಡಿಸಿದ್ದಾರೆ.

ಚರಂಡಿ ಅವ್ಯವಸ್ಥೆ
ರಾಜ್ಯ ಹೆದ್ದಾರಿ ಅಭಿವೃದ್ಧಿಗೊಂಡರೂ ಚರಂಡಿ, ಫುಟ್‌ಪಾತ್‌, ಬಸ್‌ಬೇ ವ್ಯವಸ್ಥೆ ಸಮರ್ಪಕವಾಗಿಲ್ಲ. ಈ ಬಗ್ಗೆ ಸಾಮಾಜಿಕ ಕಾರ್ಯಕರ್ತ ಡಿ.ಎಂ. ಶಾರಿಕ್‌ ಲೋಕಾಯುಕ್ತ ಸಂಸ್ಥೆಗೆ ದೂರು ನೀಡಿದ್ದರು. ಮಾಣಿಯಿಂದ ಮೈಸೂರು ತನಕದ ರಸ್ತೆಯಲ್ಲಿ ಸ್ಲಾéಬ್‌ ಸಮರ್ಪಕ ಜೋಡಣೆಗೆ ಗುತ್ತಿಗೆದಾರ ಸಂಸ್ಥೆ ಚಾಲನೆ ನೀಡಿದ್ದರೂ ಅದು ಪೂರ್ಣಗೊಂಡಿಲ್ಲ. ರಸ್ತೆಯ ಅಲ್ಲಲ್ಲಿ ಹೊಂಡ ತುಂಬಿದ್ದು, ಮುಚ್ಚುವ ಕಾರ್ಯಕ್ಕೆ ವೇಗ ಸಿಕ್ಕಿಲ್ಲ.ಮಾಣಿಯಿಂದ ಮೈಸೂರು ತನಕದ 212 ಕಿ.ಮೀ. ರಾಜ್ಯ ಹೆದ್ದಾರಿ 88ರ ವಿಸ್ತರಣೆ, ಅಭಿವೃದ್ಧಿ ಕಾಮಗಾರಿ 2009 ರಲ್ಲಿ ಆರಂಭಗೊಂಡು, 2015ರಲ್ಲಿ ಕಾಮಗಾರಿ ಪೂರ್ಣಗೊಂಡಿತ್ತು. ಮೊದಲ ಹಂತದಲ್ಲಿ ಮೈಸೂರು-ಕುಶಾಲನಗರ, ಕುಶಾಲನಗರ-ಸಂಪಾಜೆ, ಸಂಪಾಜೆ-ಮಾಣಿ ಎಂದು ವಿಭಜಿಸಲಾಗಿತ್ತು. ಮೈಸೂರು-ಕುಶಾಲನಗರ ರಸ್ತೆ 2009 ರಲ್ಲಿ, ಕುಶಾಲನಗರ-ಸಂಪಾಜೆ 2012ರಲ್ಲಿ ಕಾಮಗಾರಿ ಪೂರ್ಣಗೊಂಡಿತ್ತು.

ವಿಳಂಬ ಕಾಮಗಾರಿ
ಮೈಸೂರಿ-ಸಂಪಾಜೆ ವರೆಗಿನ ರಾಜ್ಯ ಹೆದ್ದಾರಿಯನ್ನು 3 ಹಂತಗಳಲ್ಲಿ ಅಭಿವೃದ್ಧಿಪಡಿಸಲು ಯೋಜನೆ ರೂಪಿಸಲಾಗಿತ್ತು. ಅಂತಿಮ ಹಂತದ ಸಂಪಾಜೆ- ಮಾಣಿ ತನಕದ ರಸ್ತೆ ನಿರೀಕ್ಷಿತ ಅವಧಿಯಲ್ಲಿ ಪೂರ್ಣಗೊಳ್ಳದೆ 3 ವರ್ಷ ವಿಳಂಬಗೊಂಡಿತ್ತು. ಕಾಮಗಾರಿ ಮುಗಿದರೂ ಗುತ್ತಿಗೆದಾರ ಸಂಸ್ಥೆಯ ನಿರ್ವಹಣಾ ಅವಧಿ ಪೂರ್ಣಗೊಳ್ಳದ ಕಾರಣ, ರಾ. ಹೆ. ಪ್ರಾಧಿಕಾರ ಈ ರಸ್ತೆಯನ್ನು ತನ್ನ ಸುಪರ್ದಿಗೆ ಪಡೆದುಕೊಂಡಿಲ್ಲ.

Advertisement

ದುರಸ್ತಿ ಮಾಡಬೇಕು
ಸಂಪಾಜೆ-ಕನಕಮಜಲು ತನಕದ ಹೆದ್ದಾರಿಯಲ್ಲಿರುವ ಹೊಂಡಗಳನ್ನು ಮುಚ್ಚಬೇಕು. ಚರಂಡಿ ಅಸಮರ್ಪಕವಾಗಿದ್ದು, ದುರಸ್ತಿ ಮಾಡಿ ಮಳೆ ನೀರು ಹರಿದು ಹೋಗಲು ವ್ಯವಸ್ಥೆ ಮಾಡಬೇಕು.
 - ಪದ್ಮನಾಭ ಭಟ್‌ ಕೆ.
    ಕನಕಮಜಲು

Advertisement

Udayavani is now on Telegram. Click here to join our channel and stay updated with the latest news.

Next