ಕೆ.ಆರ್.ನಗರ: ಪಟ್ಟಣದ ಪುರಸಭಾಧಿಕಾರಿ ಗಳ ನಿರ್ಲಕ್ಷ್ಯದಿಂದ ಮುಸ್ಲಿಂ ಬಡಾ ವಣೆಯ ಮಧುವನಹಳ್ಳಿ ರಸ್ತೆ ಮತ್ತು ಹುಣಸೂರು ರಸ್ತೆಗೆ ಸಂಪರ್ಕ ಕಲ್ಪಿಸುವ ಜಾಮಿಯಾ ಮಸೀದಿಯ ಮುಂಭಾಗದ ರಸ್ತೆಯಲ್ಲಿ ಒಳಚರಂಡಿ ಮುಚ್ಚಳ ಮುರಿದು ಬಿದ್ದು ಬಾಯ್ದೆರೆದುಕೊಂಡು ಅಪಾಯಕ್ಕೆ ಆಹ್ವಾನ ನೀಡುತ್ತಿದೆ ಎಂದು ಸಾರ್ವಜನಿಕರು ದೂರಿದ್ದಾರೆ.
ಮ್ಯಾನ್‌ಹೋಲ್ನ ಮುಚ್ಚಳ ಮುರಿದು ಬಿದ್ದು ಹಲವಾರು ತಿಂಗಳುಗಳೇ ಕಳೆದಿದ್ದು, ಇದರಿಂದ ದುರ್ವಾಸನೆ ಬರುತ್ತಿದ್ದು, ಇಲ್ಲಿನ ನಿವಾಸಿಗಳು ಮೂಗು ಮುಚ್ಚಿಕೊಂಡು ಓಡಾಡಬೇಕಾದ ಪರಿಸ್ಥಿತಿ ನಿರ್ಮಾಣ ವಾಗಿದೆ. ಈ ರಸ್ತೆಯಲ್ಲಿ ಪ್ರತಿನಿತ್ಯ ಸಾವಿರಾರು ಮಂದಿ ಜನರು ಮತು ವಾಹನಗಳು ಸಂಚರಿಸಲಿದ್ದು, ಎಲ್ಲರೂ ದುರ್ವಾಸನೆ ಯನ್ನು ಅನುಭವಿಸಬೇಕಾಗಿದೆ.
ಅಲ್ಲದೆ ಬಾಯ್ದೆರೆದಿರುವ ಮ್ಯಾನ್‌ಹೋಲ್ಗೆ ರಾತ್ರಿಯ ವೇಳೆ ಹಲವಾರು ಮಂದಿ ಬಿದ್ದು ಕೈಕಾಲುಗಳನ್ನು ಮುರಿದು ಕೊಂಡಿರುವ ಉದಾಹರಣೆಗಳಿವೆ. ಜತೆಗೆ ಸಾರ್ವಜನಿಕರು ಮತ್ತು ವಾಹನಗಳ ಸಂಚಾರಕ್ಕೆ ತುಂಬಾ ತೊಂದರೆಯಾಗಿದೆ. ಇದರ ಬಗ್ಗೆ ಪುರಸಭಾಧಿಕಾರಿಗಳಿಗೆ ಹತ್ತು ಹಲವು ಬಾರಿ ಮೌಖೀಕವಾಗಿ ದೂರು ನೀಡಿ ದರೂ ತಮಗೂ ಇದಕ್ಕೂ ಸಂಬಂಧವಿಲ್ಲ ವೆಂಬಂತೆ ಇಲ್ಲಿಯವರೆಗೆ ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ವಹಿಸಿದ್ದಾರೆ.
ಪುರಸಭಾ ಮಾಜಿ ಸದಸ್ಯರನ್ನು ಪ್ರಶ್ನಿಸಿದರೆ ಮುಖ್ಯಾಧಿಕಾರಿಗೆ ದೂರು ನೀಡಿ ಎಂದು ಸಬೂಬು ಹೇಳಿ ಕೈತೊಳೆದುಕೊಳ್ಳುತ್ತಾರೆ. ಇದರಿಂದ ಜನತೆ ವಾರ್ಡಿನ ಸಮಸ್ಯೆಯನ್ನು ಯಾರ ಬಳಿ ಹೇಳಿಕೊಳ್ಳಬೇಕು ಎಂಬ ಪ್ರಶ್ನೆ ಕಾಡುತ್ತಿದೆ ಎಂದಿದ್ದಾರೆ. ಮೇ.29ರಂದು ನಡೆಯುವ ಪುರಸಭೆ ಚುನಾವಣೆಗೂ ಮುಂಚೆ ಸಂಬಂಧಪಟ್ಟವರು ಮ್ಯಾನ್‌ಹೋಲ್ ದುರಸ್ತಿ ಮಾಡಿಸಬೇಕು. ಇಲ್ಲದಿದ್ದರೆ ನಿವಾಸಿಗಳೆಲ್ಲರೂ ಪುರಸಭಾ ಕಾರ್ಯಾಲಯದ ಮುಂದೆ ಉಗ್ರ ಪ್ರತಿಭಟನೆ ನಡೆಸಲಾಗುವುದು. ಅಲ್ಲದೆ ಚುನಾವಣೆಯನ್ನು ಬಷ್ಕರಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.