Advertisement

Danger Dengue: ಡೆಂಗ್ಯೂ ಪ್ರಕರಣಗಳ ಹೆಚ್ಚಳ; ಸ್ವಯಂ ಅರ್ಜಿ ದಾಖಲು

12:30 AM Jul 11, 2024 | Team Udayavani |

ಬೆಂಗಳೂರು: ರಾಜ್ಯದಲ್ಲಿ ಡೆಂಗ್ಯೂ ಪ್ರಕರಣಗಳು ಹೆಚ್ಚುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಹೈಕೋರ್ಟ್‌, ಈ ಸಂಬಂಧ ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ದಾಖಲಿಸಿಕೊಂಡು ರಾಜ್ಯ ಸರಕಾರಕ್ಕೆ ನೋಟಿಸ್‌ ಜಾರಿಗೊಳಿಸಿದೆ. ಬುಧವಾರ ಕೋರ್ಟ್‌ ಕಲಾಪ ಆರಂಭವಾಗುತ್ತಿದ್ದಂತೆ ಮುಖ್ಯ ನ್ಯಾಯಮೂರ್ತಿ ಎನ್‌.ವಿ. ಅಂಜಾರಿಯಾ ಹಾಗೂ ನ್ಯಾ. ಕೆ.ವಿ. ಅರವಿಂದ ಅವರಿದ್ದ ವಿಭಾಗೀಯ ನ್ಯಾಯಪೀಠದಲ್ಲಿ ಮುಖ್ಯ ನ್ಯಾಯಮೂರ್ತಿಗಳು ಈ ವಿಷಯ ಪ್ರಸ್ತಾವಿಸಿದರು.

Advertisement

ರಾಜಧಾನಿ ಬೆಂಗಳೂರು ಸೇರಿ ಇಡೀ ರಾಜ್ಯದಲ್ಲಿ ಅದರಲ್ಲೂ ಮುಖ್ಯವಾಗಿ ಗ್ರಾಮೀಣ ಭಾಗದಲ್ಲಿ ಡೆಂಗ್ಯೂ ಪ್ರಕರಣಗಳು ಹೆಚ್ಚಳವಾಗಿ ಸಾವುಗಳು ಸಂಭವಿಸುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ರಾಜ್ಯದಲ್ಲಿ ವೈದ್ಯಕೀಯ ತುರ್ತು ಪರಿಸ್ಥಿತಿ ಘೋಷಿಸಬೇಕು ಎಂದು ಆಂಗ್ಲ ದಿನಪತ್ರಿಕೆಯೊಂದಕ್ಕೆ ರಾಯಚೂರಿನ ನಿವಾಸಿ ಎಚ್‌.ಕೆ. ವಿಜಯಕುಮಾರ್‌ ಜುಲೈ 9ರಂದು ಬರೆದಿರುವ ಸಂಪಾದಕರಿಗೆ ಪತ್ರ ಅಂಕಣ ಹಾಗೂ ಇತರ ಪತ್ರಿಕಾ ವರದಿಗಳನ್ನು ಆಧರಿಸಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿಕೊಳ್ಳಲಾಗುತ್ತಿದೆ ಎಂದು ಹೇಳಿದ ನ್ಯಾಯಪೀಠ, ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ, ಆರೋಗ್ಯ ಇಲಾಖೆಯ ಕಾರ್ಯದರ್ಶಿ ಹಾಗೂ ಬಿಬಿಎಂಪಿ ಆಯುಕ್ತರಿಗೆ ನೋಟಿಸ್‌ ಜಾರಿಗೊಳಿಸಿತು.

ಒಂದೇ ದಿನ 293 ಡೆಂಗ್ಯೂ ಪ್ರಕರಣ
ಬೆಂಗಳೂರು: ಆರೋಗ್ಯ ಇಲಾಖೆಯ ಮಾಹಿತಿ ಪ್ರಕಾರ, ರಾಜ್ಯದಲ್ಲಿ ಬುಧವಾರ 293 ಡೆಂಗ್ಯೂ ಪ್ರಕರಣಗಳು ದೃಢಪಟ್ಟಿವೆ. ಡೆಂಗ್ಯೂ ಪತ್ತೆ ಸಂಬಂಧ 24 ಗಂಟೆಗಳ ಅವಧಿಯಲ್ಲಿ 1,874 ಪರೀಕ್ಷೆಗಳನ್ನು ನಡೆಸಲಾಗಿತ್ತು. ಹೊಸದಾಗಿ ಡೆಂಗ್ಯೂ ಪೀಡಿತರಾದವರಲ್ಲಿ ಇಬ್ಬರು ಒಂದು ವರ್ಷದೊಳಗಿನವರಾದರೆ, 101 ಮಂದಿ ಒಂದರಿಂದ 18 ವರ್ಷದೊಳಗಿನವರಾಗಿದ್ದಾರೆ. 190 ಮಂದಿ 18 ವರ್ಷ ಮೇಲ್ಪಟ್ಟವರಾಗಿದ್ದಾರೆ. ಸದ್ಯ ರಾಜ್ಯದ ವಿವಿಧ ಆಸ್ಪತ್ರೆಗಳಲ್ಲಿ 358 ಡೆಂಗ್ಯೂ ಪೀಡಿತರು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಈ ವರ್ಷ ವರದಿಯಾದ ಒಟ್ಟು ಡೆಂಗ್ಯೂಪ್ರಕರಣಗಳ ಸಂಖ್ಯೆ 7,840ಕ್ಕೆ ಏರಿಕೆಯಾಗಿದೆ. ಡೆಂಗ್ಯೂ ಪೀಡಿತರಲ್ಲಿ ಈವರೆಗೆ 7 ಮಂದಿ ಮೃತಪಟ್ಟಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next