ಬೆಂಗಳೂರು: ರಾಜ್ಯಾದ್ಯಂತ ಡೆಂಗ್ಯೂ ಹಾವಳಿ ಹೆಚ್ಚುತ್ತಿದ್ದು, ಮಂಗಳವಾರ ಕರ್ನಾಟಕದಲ್ಲಿ 185 ಪ್ರಕರಣ ಗಳು ದೃಢಪಟ್ಟಿವೆ. ಈ ಮೂಲಕ ಈ ವರ್ಷ ವರದಿಯಾದ ಒಟ್ಟು ಡೆಂಗ್ಯೂ ಪ್ರಕರಣಗಳ ಸಂಖ್ಯೆ 7,547ಕ್ಕೆ ಏರಿಕೆಯಾಗಿದೆ. ಹೊಸದಾಗಿ ಪತ್ತೆಯಾಗಿರುವ ಡೆಂಗ್ಯೂ ಪೀಡಿತರ ಪೈಕಿ ವರ್ಷದೊಳಗಿನ ಒಂದು ಮಗು, ಒಂದರಿಂದ 18 ವರ್ಷದೊಳಗಿನ 81 ಮಂದಿ, 18 ವರ್ಷ ಮೇಲ್ಪಟ್ಟ 103 ಮಂದಿ ಮೃತಪಟ್ಟಿದ್ದಾರೆ.
ಶಂಕಿತ ಡೆಂಗ್ಯೂಗೆ ಮಗು ಸೇರಿ ಮೂವರ ಸಾವು
ರಾಜ್ಯದಲ್ಲಿ ಮಂಗಳವಾರ ಶಂಕಿತ ಡೆಂಗ್ಯೂಗೆ 9 ತಿಂಗಳ ಮಗು ಸೇರಿ ಮೂವರು ಮೃತಪಟ್ಟಿದ್ದಾರೆ. ಶಿವಮೊಗ್ಗ ಜಿಲ್ಲೆ ರಿಪ್ಪನ್‌ಪೇಟೆಯ ರಾಘವೇಂದ್ರ ನಾಯಕ್ ಪತ್ನಿ ರಶ್ಮಿ ಆರ್. ನಾಯಕ್ (42) ತೀವ್ರ ಜ್ವರದಿಂದ ಬಳಲುತ್ತಿದ್ದು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.
ಶಿರಾಳಕೊಪ್ಪದ ಕಾನಕೇರಿ ಬಡಾವಣೆಯ ಖಾನಿ ಜಾವೀದ್ ಅವರ ಪುತ್ರ 9 ತಿಂಗಳ ಕೌಸೇನ್ ವಾಂತಿ ಬೇಧಿ, ಜ್ವರದಿಂದ ಬಳಲುತ್ತಿದ್ದು ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. 3 ದಿನಗಳ ಹಿಂದೆ ಮಗು ಮೃತಪಟ್ಟಿದೆ.
ಜ್ವರದಿಂದ ಬಳಲುತ್ತಿದ್ದ ದಾವಣಗೆರೆ ಹರಿಹರದ ಕೇಶವನಗರ ನಿವಾಸಿ ಅರುಣ (22) ಮೃತಪಟ್ಟಿದ್ದು, ಡೆಂಗ್ಯೂವಿನಿಂದ ಸಾವು ಸಂಭವಿಸಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.