ದಾಂಡೇಲಿ: ನಗರದ ಪ್ರವಾಸೋದ್ಯಮ ಕ್ಷೇತ್ರಕ್ಕೆ ತನ್ನದೇ ಆದ ಕೊಡುಗೆಯನ್ನು ನೀಡುತ್ತಾ ಬಂದಿರುವ ನಗರದ ಕೇಂದ್ರ ಬಸ್ ನಿಲ್ದಾಣದ ಕೂಗಳತೆಯ ದೂರದಲ್ಲಿರುವ ದಂಡಕಾರಣ್ಯ ಇಕೋ ಪಾರ್ಕ್ ಪ್ರವಾಸಿಗರಿಲ್ಲದೆ ಬಿಕೋ ಎನ್ನತೊಡಗಿದೆ.
ಮಳೆಗಾಲ ಆರಂಭವಾದಾಗಿನಿಂದ ಪ್ರವಾಸಿಗರ ಸಂಖ್ಯೆ ವ್ಯಾಪಕವಾಗಿ ಕಡಿಮೆಯಾಗಿರುವುದು ದಂಡಕಾರಣ್ಯ ಇಕೋ ಪಾರ್ಕ್ ವೀಕ್ಷಣೆಗೆ ಜನರೇ ಬರದಂತಾಗಿದೆ.
ಇನ್ನೊಂದು ಕಡೆ ಗಣೇಶ ಗುಡಿಯಲ್ಲಿ ರಾಫ್ಟಿಂಗ್ ಸೇರಿದಂತೆ ವಿವಿಧ ಜಲ ಸಾಹಸ ಕ್ರೀಡೆಗಳನ್ನು ಜಿಲ್ಲಾಡಳಿತ ಸ್ಥಗಿತಗೊಳಿಸಿರುವುದರಿಂದ ಪ್ರವಾಸಿಗರು ದಾಂಡೇಲಿಯತ್ತ ಮುಖ ಮಾಡದೆ 3 ತಿಂಗಳು ಕಳೆದಿದೆ.
ಪ್ರವಾಸೋದ್ಯಮಕ್ಕೆ ಜೀವಕಳೆಯನ್ನು ತಂದಿರುವ ರಾಪ್ಟಿಂಗ್ ಸ್ಥಗಿತಗೊಂಡಿರುವುದರಿಂದ ಪ್ರವಾಸೋದ್ಯಮ ಇದೀಗ ನೆಲಕಚ್ಚಿದೆ. ಸದಾ ಪ್ರವಾಸಿಗರಿಂದ ತುಂಬಿ ತುಳುಕುತ್ತಿದ್ದ ದಂಡಕಾರಣ್ಯ ಇಕೋ ಪಾರ್ಕ್ ಜನರ ಓಡಾಟವಿಲ್ಲದೆ ಬಿಕೋ ಪಾರ್ಕ್ ಎಂಬಂತಾಗಿದೆ.