ದಾಂಡೇಲಿ : ಕುಡಿಯುವ ನೀರು ಸರಬರಾಜು ಮಾಡುವ ಪೈಪೊಂದು ಒಡೆದು ಕಾರಂಜಿಯಂತೆ ನೀರು ಚಿಮ್ಮುತ್ತಿದ್ದು, ಅದರ ಮೇಲೆಯೆ ವಿದ್ಯುತ್ ಲೈನ್ ಹಾದು ಹೋಗಿರುವುದರಿಂದ ಮುಂದೆ ಆಗಬಹುದಾಗಿದ್ದ ಅನಾಹುತವನ್ನು ವೆಸ್ಟ್ ಕೊಸ್ಟ್ ಕಾಗದ ಕಾರ್ಖಾನೆಯ ಭದ್ರತಾ ವಿಭಾಗದ ಸಮಯೋಚಿತ ಸ್ಪಂದನೆಯ ಮೂಲಕ ತಪ್ಪಿಸಿದ ಘಟನೆ ಮಂಗಳವಾರ ತಡ ರಾತ್ರಿ ನಡೆದಿದೆ.
ಹಾಲಮಡ್ಡಿಯಲ್ಲಿ ಕುಡಿಯುವ ನೀರು ಸರಬರಾಜು ಮಾಡುವ ಪೈಪೊಂದು ಒಡೆದು ಕಾರಂಜಿಯಂತೆ ನೀರು ಚಿಮ್ಮುತ್ತಿತ್ತು. ಕಾರಜಿಯಂತೆ ಚಿಮ್ಮಿದ ನೀರು ಅಲ್ಲಿಯೇ ಮೇಲೆ ಹಾದು ಹೋಗಿರುವ ವಿದ್ಯುತ್ ಲೈನಿಗೂ ಸ್ಪರ್ಷಿಸುತ್ತಿತ್ತು. ಇದನ್ನು ಗಮನಿಸಿದ ವೆಸ್ಟ್ ಕೊಸ್ಟ್ ಕಾಗದ ಕಾರ್ಖಾನೆಯಲ್ಲಿ ರಾತ್ರಿ ಪಾಳಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಭದ್ರತಾ ವಿಭಾಗದ ಚಂದ್ರು ಮಾಳಿಯವರು ಹೆಸ್ಕಾಂ ಅಧಿಕಾರಿಗಳಿಗೆ ಮಾಹಿತಿಯನ್ನು ನೀಡಿದರು. ತಕ್ಷಣವೆ ಹೆಸ್ಕಾಂ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ವಿದ್ಯುತ್ ಪೊರೈಕೆಯನ್ನು ಸ್ಥಗಿತಗೊಳಿಸಿದರು.
ಇದನ್ನೂ ಓದಿ:ಚೈತನ್ಯ ಕಾಲೇಜಿನ 60 ವಿದ್ಯಾರ್ಥಿಗಳಿಗೆ ಕೊರೊನಾ ಪಾಸಿಟಿವ್!
ಆನಂತರ ಚಂದ್ರು ಮಾಳಿಯವರು ಪ್ಯಾರಿ ಶುಗರ್ಸ್ ಕಾರ್ಖಾನೆಗೆ ಸಂಬಂಧಿಸಿದ ಪಂಪ್ ಹೌಸಿಗೆ ಹೋಗಿ ವಿಷಯ ತಿಳಿಸಿ, ಅಲ್ಲಿಯ ಸಿಬ್ಬಂದಿ ಕೇಶವರವರನ್ನು ಸ್ಥಳಕ್ಕೆ ಕರೆ ತಂದಾಗ, ಕೇಶವ ಅವರು ಇದು ನಮ್ಮ ಪಂಪ್ ಹೌಸಿಗೆ ಸಂಬಂಧಿಸಿದ ಪೈಪ್ಲೈನ್ ಅಲ್ಲ ಎಂದು ಸ್ಪಷ್ಟಪಡಿಸಿದರು. ಆನಂತರ ಕರ್ಕಾ ಹತ್ತಿರವಿರುವ ಪಂಪ್ ಹೌಸಿಗೆ ಮೊಬೈಲ್ ಕರೆ ಮಾಡಿ ಚಂದ್ರು ಮಾಳಿಯವರು ಮಾಹಿತಿಯನ್ನು ನೀಡಿದ ಬಳಿಕ ಅಲ್ಲಿಂದ ಸಿಬ್ಬಂದಿಗಳು ಸ್ಥಳಕ್ಕಾಗಮಿಸಿ ಚಿಮ್ಮುತ್ತಿದ್ದ ನೀರನ್ನು ಬಂದ್ ಮಾಡಿದರು.
ಕಾರ್ಖಾನೆಯ ಭದ್ರತಾ ವಿಭಾಗದ ಚಂದ್ರು ಮಾಳಿಯವರ ಸಾಮಾಜಿಕ ಕಳಕಳಿ ಮತ್ತು ಸಮಯೋಚಿತ ಸ್ಪಂದನೆಯಿಂದ ಆಗಬಹುದಾಗಿದ್ದ ಅಪಾಯವೊಂದು ತಪ್ಪಿದಂತಾಗಿದ್ದು, ಸ್ಥಳೀಯರು, ಹೆಸ್ಕಾಂ ಅಧಿಕಾರಿಗಳು ಮತ್ತು ಕಾಗದ ಕಾರ್ಖಾನೆಯ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.