ದಾಂಡೇಲಿ: ಕುಡಿದ ಮತ್ತಿನಲ್ಲಿ ವ್ಯಕ್ತಿಯೋರ್ವ ನಗರದ ಸೋಮಾನಿ ವೃತ್ತದ ಬಳಿಯಿರುವ ಶ್ರೀ ಛತ್ರಪತಿ ಶಿವಾಜಿ ಮೂರ್ತಿಯ ಕಾಲಿಗೆ ಹಾನಿಗೊಳಿಸಿದ ಘಟನೆ ಸೆ. 22 ರ ಶುಕ್ರವಾರ ಬೆಳಿಗ್ಗೆ ನಡೆದಿದೆ.
ಸ್ಥಳೀಯ ಟೌನಶಿಪ್ ನಿವಾಸಿ ಪ್ಯಾರಸಿಂಗ್ ರಜಪೂತ್ ಕುಡಿದ ಮತ್ತಿನಲ್ಲಿ ಶಿವಾಜಿ ಮೂರ್ತಿಗೆ ಹಾನಿ ಮಾಡಿದ ವ್ಯಕ್ತಿ.
ಶ್ರೀ ಛತ್ರಪತಿ ಶಿವಾಜಿ ಮೂರ್ತಿ ಆವರಣದಲ್ಲಿ ಪ್ರತಿಷ್ಟಪಾಪಿಸಲಾಗಿರುವ ಶ್ರೀ ಗಣೇಶ ಮೂರ್ತಿಗೆ ಪೂಜೆ ನಡೆಯುತ್ತಿರುವ ಸಂದರ್ಭ ಪ್ಯಾರಸಿಂಗ್ ರಜಪೂತ್ ಶ್ರೀ ಛತ್ರಪತಿ ಶಿವಾಜಿ ಮೂರ್ತಿ ಇರುವಲ್ಲಿಗೆ ಹೋಗಿ ಮೂರ್ತಿಯ ಕಾಲಿಗೆ ತೊಡಿಸಲಾಗಿರುವ ಬಂಗಾರದ ಬಣ್ಣದ ಪಾದರಕ್ಷೆಯನ್ನು ಕೀಳಲು ಪ್ರಯತ್ನಿಸಿದ್ದಾನೆ. ಕೈಯಲ್ಲಿ ಕೀಳಲು ಆಗದೇ ಇದ್ದಾಗ, ಅಲ್ಲೆ ಇದ್ದ ಕಬ್ಬಿಣದ ರಾಡ್ ಸಹಾಯದಿಂದ ಪಾದರಕ್ಷೆಯನ್ನು ಕೀಳಲು ಪ್ರಯತ್ನಿಸುವ ಸಂದರ್ಭ ಶಿವಾಜಿ ಮೂರ್ತಿಗೆ ಸ್ವಲ್ಪ ಪ್ರಮಾಣದ ಹಾನಿಯಾಗಿದೆ.
ಮೂರ್ತಿಗೆ ಹಾನಿಗೊಳಿಸಿದ ವಿಚಾರ ತಿಳಿದ ಶ್ರೀ ಛತ್ರಪತಿ ಶಿವಾಜಿ ಮೂರ್ತಿ ಪ್ರತಿಷ್ಟಾಪನಾ ಸಮಿತಿಯ ಅಧ್ಯಕ್ಷ ವಿಶ್ವನಾಥ್ ಜಾಧವ್, ಪ್ರಮುಖರುಗಳಾದ ರವಿ ಸುತಾರ್, ಸಂತೋಷ್ ಸೋಮನಾಚೆ ಸೇರಿದಂತೆ ಸಮಿತಿಯ ಪದಾಧಿಕಾರಿಗಳು ಹಾಗೂ ಸದಸ್ಯರು ಪ್ಯಾರಸಿಂಗ್ ರಜಪೂತ್ ನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಘಟನೆ ನಡೆದ ತಕ್ಷಣ ಶ್ರೀ ಛತ್ರಪತಿ ಶಿವಾಜಿ ಮೂರ್ತಿ ಬಳಿ ಜನ ಜಮಾಯಿಸಿದ್ದರು. ಇದು ಕುಡಿದ ಮತ್ತಿನಲ್ಲಿ ನಡೆದಿರುವ ಘಟನೆಯಾಗಿದ್ದು ಶಿವಾಜಿ ಮೂರ್ತಿಯ ಕಾಲಿನಲ್ಲಿದ್ದ ಬಂಗಾರದ ಬಣ್ಣದ ಪಾದರಕ್ಷೆ ಅದು ಬಂಗಾರದ್ದೇ ಇರಬಹುದೆಂದು ಭಾವಿಸಿ ಪಾದರಕ್ಷೆಯನ್ನು ಕೀಳಲು ಪ್ರಯತ್ನ ಪಟ್ಟಿರಬಹುದೆಂದು ಅಂದಾಜಿಸಲಾಗಿದೆ.
ಎಷ್ಟೇ ಕುಡಿದಿದ್ದರೂ ಸಾರ್ವಜನಿಕ ಆಸ್ತಿ ಪಾಸ್ತಿಗಳಿಗೆ ಹಾಗೂ ಜನರ ಭಾವನೆಗಳಿಗೆ ಧಕ್ಕೆಯಾಗುವಂತಹ ಕೃತ್ಯ ಮಾಡುವುದು ತಪ್ಪು. ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸಬಾರದು. ಸೂಕ್ತ ರೀತಿಯ ಕ್ರಮವನ್ನು ಕೈಗೊಳ್ಳಬೇಕೆಂದು ಶ್ರೀ ಛತ್ರಪತಿ ಶಿವಾಜಿ ಮೂರ್ತಿ ಪ್ರತಿಷ್ಟಾಪನಾ ಸಮಿತಿಯ ಅಧ್ಯಕ್ಷರಾದ ವಿಶ್ವನಾಥ ಜಾಧವ್, ಸಂತೋಷ್ ಸೋಮನಾಚೆ ಮನವಿ ಮಾಡಿದ್ದಾರೆ.