ದಾಂಡೇಲಿ: ವೆಸ್ಟ್ ಕೊಸ್ಟ್ ಕಾಗದ ಕಾರ್ಖಾನೆಯ ಕಾರ್ಮಿಕರ ವೇತನ ಪರಿಷ್ಕಣೆಯ ಸಮಸ್ಯೆಯನ್ನು ಆಡಳಿತ ಮಂಡಳಿ ಈ ಕೂಡಲೇ ಬಗೆಹರಿಸದಿದ್ದಲ್ಲಿ ಎಲ್ಲಾ ಸಂಘ ಸಂಸ್ಥೆಗಳು ಮತ್ತು ಕಾರ್ಮಿಕರೊಂದಿಗೆ ಸೇರಿ ಉಗ್ರ ಹೋರಾಟ ಮಾಡಲಾಗುವುದೆಂದು ದಾಂಡೇಲಿ ತಾಲೂಕು ಸಮಗ್ರ ಹೋರಾಟ ಸಮೀತಿಯ ಪದಾಧಿಕಾರಿಗಳು ತಿಳಿಸಿದ್ದಾರೆ.
ಜಿಲ್ಲಾ ಉಸ್ತುವಾರಿ ಮತ್ತು ಕಾರ್ಮಿಕ ಸಚಿವರಾದ ಶಿವರಾಮ ಹೆಬ್ಬಾರ ಮತ್ತು ಶಾಸಕ ಆರ್.ವಿ ದೇಶಪಾಂಡೆ ಅವರಿಗೆ ಶನಿವಾರ ಮನವಿ ಸಲ್ಲಿಸಿರುವ ದಾಂಡೇಲಿ ಸಮಗ್ರ ಅಭಿವೃದ್ಧಿ ಹೊರಾಟ ಸಮಿತಿಯ ಪದಾಧಿಕಾರಿಗಳು ಕಾಗದ ಕಾರ್ಖಾನೆಯ ಚೌಧರಿ ಗೇಟ್ ಮುಂಭಾಗದಲ್ಲಿ ಸಾಂಕೇತಿಕ ಪ್ರತಿಭಟನೆ ನಡೆಸಿದರು. ವೆಸ್ಟ್ ಕೊಸ್ಟ್ ಕಾಗದ ಕಾರ್ಖಾನೆಯ ಆಡಳಿತ ಮಂಡಳಿಯ ವಿಳಂಬ ನೀತಿಯಿಂದಾಗಿ ಕಾರ್ಮಿಕರ ತಾಳ್ಮೆಯ ಕಟ್ಟೆ ಒಡೆದಿದೆ. ಪರಿಣಾಮವಾಗಿ ಹಕ್ಕಿಗಾಗಿ ಹೋರಾಟಕ್ಕಿಳಿದಿದ್ದಾರೆ.
ವೆಸ್ಟ್ ಕೊಸ್ಟ್ ಕಾಗದ ಕಾರ್ಖಾನೆ ಐಎಸ್ಓ ಪ್ರಮಾಣಪತ್ರ ಪಡೆದ ಕಾರ್ಖಾನೆಯಾಗಿದ್ದರೂ, ಕಾರ್ಮಿಕರಿಗೆ ವೇತನ ಪರಿಷ್ಕರಣೆ ಮಾಡಿಕೊಡದೆ ಅನ್ಯಾಯ ಮಾಡುವುದು ಸರಿಯಲ್ಲ. ಆಡಳಿತ ಮಂಡಳಿ ಮತ್ತು ಕಾರ್ಮಿಕರು ಸೌಹಾರ್ಧಯುತವಾಗಿ ಮಾತುಕತೆ ನಡೆಸಿ ವೇತನ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬೇಕು, ಜೊತೆಗೆ ದಿನಗೂಲಿ ಕಾರ್ಮಿಕರನ್ನು ಖಾಯಂ ಮಾಡಿ ಉತ್ಪಾದನೆಯನ್ನು ಹೆಚ್ಚಿಸಿಕೊಳ್ಳಬೇಕು. ಈ ಸಮಸ್ಯೆಗಳನ್ನು ಕಾಗದ ಕಾರ್ಖಾನೆಯ ಆಡಳಿತ ಮಂಡಳಿ ತ್ವರಿತಗತಿಯಲ್ಲಿ ಬಗೆಹರಿಸಬೇಕು. ಇಲ್ಲದಿದ್ದರೆ ಅತ್ಯಂತ ಉಗ್ರ ಹೋರಾಟದ ಭಾಗವಾಗಿ ದಾಂಡೇಲಿ ಬಂದ್ ಕರೆ ನೀಡಬೇಕಾಗುತ್ತದೆ ಎಂದು ಮನವಿಯಲ್ಲಿ ಎಚ್ಚರಿಕೆ ನೀಡಲಾಗಿದೆ.
ಇದನ್ನೂ ಓದಿ:ಗೃಹ ಸಚಿವರು ಹೆಣ್ಣುಮಕ್ಕಳು ಸುರಕ್ಷಿತವಾಗಿ ಓಡಾಡಬಹುದಾದ ಸಮಯ ತಿಳಿಸಲಿ:ಅಮ್ರಪಾಲಿ ಸುರೇಶ್
ಕಾಗದ ಕಾರ್ಖಾನೆಯ ಕಾರ್ಮಿಕ ವಿರೋಧಿ ನೀತಿಯನ್ನು ದಾಂಡೇಲಿ ಸಮಗ್ರ ಅಭಿವೃದ್ಧಿ ಹೋರಾಟ ಸಮಿತಿಯ ಅಧ್ಯಕ್ಷ ಅಕ್ರಂ ಖಾನ್, ಪದಾಧಿಕಾರಿಗಳಾದ ಅಶೋಕ ಪಾಟೀಲ, ರಾಮಲಿಂಗ ಜಾಧವ್, ರಮೇಶ ನಾಯ್ಕ, ಪಿರೋಜ್ ಫಿರ್ಜಾದೆ ಹಾಗೂ ಜೆಡಿಎಸ್ ತಾಲೂಕು ಘಟಕದ ಅಧ್ಯಕ್ಷ ಗೌರೀಶ ಬಾಬ್ರೇಕರ ಅವರುಗಳು ಖಂಡಿಸಿದರಲ್ಲದೇ, ಕೂಡಲೆ ಸಮಸ್ಯೆ ಬಗೆಹರಿಸುವಂತೆ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಸಮಿತಿಯ ಪದಾಧಿಕಾರಿಗಳಾದ ರಾಘವೇಂದ್ರ ಗಡೆಪ್ಪನವರ, ರವಿಕುಮಾರ ಚವ್ಹಾಣ, ಸಲೀಮ್ ಕಾಕರ, ಪೌಲ್ ಫರ್ನಾಂಡಿಸ್, ತೌಸೀಫ್ ಮುಲ್ಲಾ, ಶಹಜಾದ ಕಳಸಾಪುರ, ಮುಜೀಬಾ ಛಬ್ಬಿ, ಪ್ರೇಮಕುಮಾರ ಪೆರುಮಾಳ್, ಮಂಜು ಪಂತೋಜಿ ಮತ್ತು ನಗರ ಸಭೆಯ ವಾರ್ಡ್ ನಂ:11 ರ ಉಪ ಚುನಾವಣೆಯ ಬಿಜೆಪಿ ಅಭ್ಯರ್ಥಿ ಗೋಪಾಲಸಿಂಗ್ ರಜಪೂತ ಉಪಸ್ಥಿತರಿದ್ದರು.