ದಾಂಡೇಲಿ: ಅವರೇನು ಹೆತ್ತ ಮಗನಲ್ಲ. ಆದರೂ ಹೆಂಡತಿ, ಮಕ್ಕಳಿಲ್ಲದ ಆ ವೃದ್ದನನ್ನು ಕಳೆದ 14 ವರ್ಷಗಳಿಂದ ತನ್ನ ಸ್ವಂತ ತಂದೆಯಂತೆ ಅತ್ಯಂತ ಗೌರವಯುತವಾಗಿ ಸಾಕಿ, ಸಲಹಿ ಇಹಲೋಕ ತ್ಯಜಿಸಿದ ಬಳಿಕ ಮಗನ ಸ್ಥಾನದಲ್ಲಿ ನಿಂತು ಅಂತ್ಯಸಂಸ್ಕಾರ ಹಾಗೂ ವಿಧಿವಿಧಾನಗಳನ್ನು ನೆರವೇರಿಸಿ ಊರಿನ ಮೆಚ್ಚುಗೆಗೆ ಪಾತ್ರರಾದವರು ದಾಂಡೇಲಿ ನಗರದ ಹಳೆದಾಂಡೇಲಿಯ ನಿವಾಸಿಯಾಗಿರುವ ಎಸ್.ಆರ್.ಗಜಾಕೋಶ ಅವರು.
ಅಂದ ಹಾಗೆ ನಗರದ ಸಮೀಪದ ಮೌವಳಂಗಿ ನಿವಾಸಿಯಾಗಿದ್ದ ಚೆನ್ನಪ್ಪ ಲಗ್ಮಪ್ಪ ಹರಿಜನ ಎಂಬವರಿಗೆ ಹೆಂಡತಿ, ಮಕ್ಕಳು ಯಾರು ಇಲ್ಲದಿರುವುದನ್ನು ಗಮನಿಸಿದ್ದ ಎಸ್.ಆರ್.ಗಜಾಕೋಶ ಅವರು ಚೆನ್ನಪ್ಪ ಲಗ್ಮಪ್ಪ ಹರಿಜನ ಅವರ ಒಪ್ಪಿಗೆ ಹಾಗೂ ಅಂಬೋಣದಂತೆ ಕಳೆದ 14 ವರ್ಷಗಳಿಂದ ತನ್ನ ಹಳೆದಾಂಡೇಲಿಯ ಮನೆಯಲ್ಲಿರಿಸಿ, ತಂದೆಯ ಗೌರವವನ್ನು ನೀಡಿ, ತಂದೆಯಂತೆ ಸಾಕಿ ಸಲಹಿದರು.
14 ವರ್ಷಗಳಿಂದಲೂ ಚೆನ್ನಪ್ಪ ಲಗ್ಮಪ್ಪ ಹರಿಜನ ಅವರಿಗೆ ಸ್ವಂತ ಮಗನಂತೆ ಸೇವೆ ಮಾಡಿದ ಎಸ್.ಆರ್.ಗಜಾಕೋಶ ಅವರು ಮಗನ ಸ್ಥಾನವನ್ನು ಗೌರವಯುತವಾಗಿ ತುಂಬಿಕೊಟ್ಟು ಚೆನ್ನಪ್ಪರವರ ಪ್ರೀತಿಗೆ ಪಾತ್ರರಾದರು. ಇದೇ ಚೆನ್ನಪ್ಪರವರು ವಯೋಸಹಜವಾಗಿ ಮೊನ್ನೆ 97 ನೇ ವರ್ಷದಲ್ಲಿ ವಿಧಿವಶರಾದರು. ಸ್ವಂತ ತಂದೆಯನ್ನೆ ಕಳೆದುಕೊಂಡ ದುಖ:ದಲ್ಲಿದ್ದ ಎಸ್.ಆರ್.ಗಜಾಕೋಶ ಅವರು ಚೆನ್ನಪ್ಪರವರ ಇಚ್ಚೆಯಂತೆ ಅವರ ಮೌವಳಂಗಿಯಲ್ಲಿರುವ ಹೊಲದಲ್ಲಿ ಸ್ಥಳೀಯರ ಉಪಸ್ಥಿತಿಯಲ್ಲಿ ಅಂತ್ಯಸಂಸ್ಕಾರವನ್ನು ನೆರವೇರಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು.
ಇದನ್ನೂ ಓದಿ:8 ವರ್ಷಗಳ ಬಳಿಕ ರಸ್ತೆಗಳಲ್ಲಿ ಭದ್ರತಾ ಬಂಕರ್!
ಹೆತ್ತು ಹೊತ್ತು ಬೆಳೆಸಿದ ಮಕ್ಕಳೆ ಹೆತ್ತು ಹೊತ್ತ ತಂದೆ ತಾಯಿಗಳನ್ನು ಬೀದಿಗೆ ಬಿಡುತ್ತಿರುವ ಕಾಲಘಟ್ಟದಲ್ಲಿಯೂ ರಕ್ತಸಂಬಂಧವೆ ಇಲ್ಲದ ವ್ಯಕ್ತಿಯೊರ್ವರಿಗೆ ತಂದೆಯ ಸ್ಥಾನವನ್ನು ನೀಡಿ, ಮಗನ ಸ್ಥಾನ ತುಂಬಿ, ಆ ವ್ಯಕ್ತಿಯ ಬಾಳಿಗೆ ಬೆಳಕಾದ ಎಸ್.ಆರ್.ಗಜಾಕೋಶ ಅವರ ಮಾನವೀಯ ಕಾರ್ಯಕ್ಕೊಂದು ಹ್ಯಾಟ್ಸ್ ಆಫ್ ಹೇಳಲೆಬೇಕು.