ದಾಂಡೇಲಿ: ಅತಿಕ್ರಮಣ ವಿಚಾರದಲ್ಲಿ ರಾಜ್ಯದಲ್ಲೆ ಐತಿಹಾಸಿಕ ದಾಖಲೆಯತ್ತ ದಾಂಡೇಲಿ ನಗರ ಮುನ್ನುಗ್ಗುತ್ತಿರುವುದು ಸ್ಪಷ್ಟವಾಗುತ್ತಿದೆ. ನಗರದಲ್ಲಿ ಎಗ್ಗಿಲ್ಲದೆ ನಡೆಯುವ ಅತಿಕ್ರಮಣಗಳಿಗೆ ಕಡಿವಾಣ ಹಾಕುವ ನಗರಾಡಳಿತದ ದಿವ್ಯ ಮೌನ ಹತ್ತು ಹಲವು ಅನುಮಾನಕ್ಕೆ ಎಡೆಮಾಡಿ ಕೊಟ್ಟಿದೆ.
ರಾಜ್ಯದ ಮುತ್ಸದ್ದಿ ನಾಯಕರಾದ ಆರ್.ವಿ.ದೇಶಪಾಂಡೆಯವರ ಕ್ಷೇತ್ರದಲ್ಲಿ ಅವರದ್ದೇ ಪಕ್ಷ ಆಡಳಿತವಿರುವ ದಾಂಡೇಲಿ ನಗರ ಸಭೆಯ ವ್ಯಾಪ್ತಿಯಲ್ಲಿ ಹೇಳುಕೇಳುವವರಿಲ್ಲದೆ ಅತಿಕ್ರಮಣಗಳು ನಿತ್ಯ ನಿರಂತರವಾಗಿ ನಡೆಯುತ್ತಿದೆ. ಅತಿಕ್ರಮಣಗಳ ಬಗ್ಗೆ ಮಾದ್ಯಮಗಳು ವರದಿ ಮಾಡಿದ ಸಂದರ್ಭದಲ್ಲಿ ಕಾಟಚಾರಕ್ಕೆ ಎಂಬಂತೆ ನಗರ ಸಭೆಯ ಅಧಿಕಾರಿಗಳು ದಾಳಿ ಮಾಡುವಂತಹ ನಾಟಕಗಳು ನಗರದಲ್ಲಿ ಮಾಮುಲಿ ಎಂಬಂತಾಗಿದೆ.
ಇನ್ನೂ ನಗರ ಸಭೆಯ ಅಧಿಕಾರಿಗಳು ಅತಿಕ್ರಮಣ ತೆರವಿಗೆ ಹೋಗಬಾರದಂಬ ಕಟ್ಟಪ್ಪಣೆಯನ್ನು ಮಾಡಿರುವುದರಿಂದ ನಗರ ಸಭೆಯ ಅಧಿಕಾರಿಗಳು ಅತಿಕ್ರಮಣ ತೆರವಿಗೆ ಹಿಂದೇಟು ಹಾಕುತ್ತಿದ್ದಾರೆ ಎಂಬ ಮಾಹಿತಿ ಹೊರ ಬೀಳುತ್ತಿದೆ. ನಗರದ ಬರ್ಚಿ ರಸ್ತೆಯಲ್ಲಿರುವ ಖಾಲಿ ಜಾಗದಲ್ಲಿ ಪಿಲ್ಲರ್ ಎಬ್ಬಿಸಿ ಕಟ್ಟಡ ನಿರ್ಮಾಣ ಕಾರ್ಯ ನಡೆಯುತ್ತಿದ್ದು, ನಗರ ಸಭೆ ಮಾತ್ರ ಗೊತ್ತಿದ್ದು ಗೊತ್ತಿಲ್ಲದಂತೆ ಕಣ್ಣು ಮುಚ್ಚಿ ಕುಳಿತಿರುವ ಬಗ್ಗೆ ಅನುಮಾನ ವ್ಯಕ್ತವಾಗುತ್ತಿದೆ.
ನಗರದಲ್ಲಿ ಅನೇಕ ಕಡೆಗಳಲ್ಲಿ ನಗರ ಸಭೆಯ ಖಾಲಿಯಿರುವ ಜಾಗಗಳನ್ನು ಅತಿಕ್ರಮಿಸಿ ಕಟ್ಟಡ ನಿರ್ಮಾಣ ಮಾಡಲಾಗಿದೆ ಎಂಬ ಆರೋಪಗಳು ಬಲವಾಗಿ ಕೇಳಿ ಬರುತ್ತಿದೆ. ಪ್ರತಿಷ್ಟಿತರೊಬ್ಬರು ಕೆರೆ ಇಲ್ಲವೇ ಒಳಚರಂಡಿಯನ್ನೆ ಒತ್ತುವರಿ ಮಾಡಿಕೊಂಡು, ನಕಲಿ ದಾಖಲೆ ಸೃಷ್ಟಿಸಿ ಬೃಹತ್ ಬಂಗಲೆ ನಿರ್ಮಿಸುತ್ತಿದ್ದಾರೆ ಎಂಬ ಮಾತುಗಳು ಚರ್ಚೆಯಲ್ಲಿದೆ. ಇನ್ನೂ ಐ.ಡಿ.ಎಸ್.ಎಂ ಲೇಔಟಿನಲ್ಲಿ ಕಾಯ್ದಿರಿಸಲಾದ ನಿವೇಶನಗಳನ್ನೆ ಅಕ್ರಮವಾಗಿ ನಕಲಿ ದಾಖಲೆ ಸೃಷಿಸಿಕೊಂಡು ಮಾರಾಟ ಮಾಡಿರುವುದು ಜಗಜ್ಜಾಹೀರಾಗಿದ್ದು, ಆ ಬಗ್ಗೆ ಮಾಹಿತಿ ಹಕ್ಕು ಕಾಯ್ದೆಯಡಿ ಮಾಹಿತಿ ಕೇಳಿದ್ದಲ್ಲಿ ಮಾಹಿತಿ ನೀಡಲು ನಗರ ಸಭೆ ವಿಳಂಭ ದೋರಣೆಯನ್ನು ಅನುಸರಿಸುತ್ತಿದೆ ಎಂಬ ದೂರುಗಳು ಬರುತ್ತಿದೆ.
ನಗರ ಸಭೆಯ ವ್ಯಾಪ್ತಿಯಲ್ಲಿ ಬಾರಿ ಪ್ರಮಾಣದಲ್ಲಿ ಅಕ್ರಮ ಕಟ್ಟಡಗಳ ನಿರ್ಮಾಣ, ಅಕ್ರಮ ಆಶ್ರಯ ಪಟ್ಟಾದ ಮೂಲಕ ಜಾಗದ ಒತ್ತುವರಿ, ಕಾನೂನುಬಾಹಿರವಾಗಿ 99 ವರ್ಷದ ಲೀಸ್ ನಿವೇಶನಗಳನ್ನು ಅಕ್ರಮವಾಗಿ ನೊಂದಣಿ ಮಾಡಿಕೊಂಡಿರುವುದು, ಮೃತ ವ್ಯಕ್ತಿಯ ಕಟ್ಟಡವನ್ನು ಅಕ್ರಮವಾಗಿ ಪರಭಾರೆ ಮಾಡಿರುವುದು ಹೀಗೆ ಇನ್ನೂ ಅನೇಕ ಅನಧಿಕೃತ ಚಟುವಟಿಕೆಗಳು ನಡೆದಿದೆ ಎನ್ನಲಾಗಿದ್ದು, ಈ ಬಗ್ಗೆ ಮೇಲಾಧಿಕಾರಿಗಳು ತನಿಖೆ ಮಾಡಿ ತಪ್ಪಿತಸ್ಥ ಅಧಿಕಾರಿಗಳ ಮೇಲೆ ಸೂಕ್ತ ಕ್ರಮವನ್ನು ಕೈಗೊಳ್ಳಬೇಕೆಂಬ ಆಗ್ರಹ ಕೇಳಿಬರುತ್ತಿದೆ.
ಅತಿಕ್ರಮಣ ತೆರವಿಗೆ ಮುಂದಾಗಬೇಕು-ಪ್ರವೀಣ ಕೊಠಾರಿ, ಕರವೇ ಮುಖಂಡರು ನಗರದಲ್ಲಿ ನಡೆಯುತ್ತಿರುವ ಅತಿಕ್ರಮಣವನ್ನು ನಗರ ಸಭೆ ನಿಯಂತ್ರಿಸಬೇಕು. ಅತಿಕ್ರಮಣ ತೆರವಿಗೆ ನಗರ ಸಭೆ ಸೂಕ್ತ ರೀತಿಯ ಕ್ರಮವನ್ನು ಕೈಗೊಳ್ಳಬೇಕೆಂದು ಕರವೇ ಮುಖಂಡರಾದ ಪ್ರವೀಣ ಕೊಠಾರಿಯವರು ನಗರ ಸಭೆಯನ್ನು ಆಗ್ರಹಿಸಿದ್ದಾರೆ.