ದಾಂಡೇಲಿ: ಹಣ್ಣುಗಳ ರಾಜ ಎಂದೇ ಕರೆಸಿಕೊಳ್ಳುವ ಮಾವಿನ ಹಣ್ಣಿಗೆ ಈಗ ಭರಪೂರ ಬೇಡಿಕೆ. ವರ್ಷದ ಕೆಲವೇ ತಿಂಗಳಲ್ಲಿ ಸಿಗುವ ಮಾವಿನ ಹಣ್ಣುಗಳು ಎಲ್ಲೆಡೆ ಭರ್ಜರಿ ಮಾರಾಟವಾಗುತ್ತಿರುವುದನ್ನು ಸಹಜ.
ಅಂದ ಹಾಗೆ ದಾಂಡೇಲಿ ನಗರದಲ್ಲಿಯೂ ಮಾವಿನ ವ್ಯಾಪಾರ ಬಲು ಜೋರಾಗಿ ನಡೆಯುತ್ತಿದೆ.
ದಾಂಡೇಲಿ, ಹಳಿಯಾಳ, ಜೋಯಿಡಾ ತಾಲೂಕುಗಳ ಸುತ್ತಮುತ್ತಲುಗಳಿಂದ ಬರುವ ಮಾವಿನ ಹಣ್ಣುಗಳನ್ನಲ್ಲದೇ, ಅಂಕೋಲಾ, ಕುಮಟಾ ಕಡೆಯಿಂದಲೂ ಮಾವಿನ ಹಣ್ಣುಗಳನ್ನು ತಂದು ಮಾರಾಟ ಮಾಡಲಾಗುತ್ತಿದೆ.
ಅದು ಮಾತ್ರವಲ್ಲದೇ ತುಮಕೂರಿನಿಂದಲೂ ಲೋಡ್ ಗಟ್ಟಲೆ ಮಾವಿನ ಹಣ್ಣುಗಳು ಬರತೊಡಗಿದ್ದು, ನಗರದಲ್ಲಿ ಎಲ್ಲಿ ನೋಡಿದರೂ ಮಾವಿನ ಹಣ್ಣುಗಳ ಮಾರಾಟ ಭರ್ಜರಿ ನಡೆಯುತ್ತಿದೆ.
Related Articles
ನಗರದ ಸೋಮಾನಿ ವೃತ್ತ, ಜೆ.ಎನ್.ರಸ್ತೆ, ಸಂಡೆ ಮಾರ್ಕೆಟ್ ಮೊದಲಾದ ಕಡೆಗಳಲ್ಲಿ ಹಳ್ಳಿಯ ರೈತರು ಹಾಗೂ ನಿತ್ಯ ವ್ಯಾಪಾರಿಗಳು ಬೀದಿ ಬದಿ ಮಾವಿನ ಹಣ್ಣುಗಳ ವ್ಯಾಪಾರ ಮಾಡುತ್ತಿದ್ದು, ಇಂದು (ಮೇ.25) ಗುರುವಾರವೂ ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಮಾವುಗಳನ್ನು ಖರೀದಿಸುತ್ತಿರುವುದು ಕಂಡು ಬಂತು.
ಸೋಮಾನಿ ವೃತ್ತದ ಬಳಿ ಇರುವ ತಾಲೂಕು ಕಚೇರಿಗೆ ಹೋಗುವ ರಸ್ತೆಯ ಎರಡು ಬದಿಗಳಲ್ಲಿ ಮಾವಿನ ಹಣ್ಣಿನ ವ್ಯಾಪಾರ ಪ್ರಕಿಯೆ ನಡೆಯುತ್ತಿದ್ದೂ, ಸುಗಮ ವಾಹನ ಸಂಚಾರಕ್ಕೆ ತಕ್ಕಮಟ್ಟಿನ ಅಡಚಣೆಯಾದರೂ, ವರ್ಷದ ಕೆಲವೇ ತಿಂಗಳು ಸಿಗುವ ಮಾವಿನ ಹಣ್ಣಿನ ವ್ಯಾಪಾರವಾಗಲಿ, ಬಡ ವ್ಯಾಪಾರಿಗಳಿಗೂ ಅನುಕೂಲವಾಗಲಿ, ವಾಹನ ಚಲಾಯಿಸುವಾಗ ಸಾಧ್ಯವಾದಷ್ಟು ಎಚ್ಚರಿಕೆಯಿಂದ ವಾಹನ ಚಲಾಯಿಸೋಣ ಎಂಬ ಮಾತು ಸಾರ್ವಜನಿಕ ವಲಯದಲ್ಲಿದೆ.
ಬಡ ವ್ಯಾಪಾರಿಗಳಿಗೂ ಅವರದ್ದೇ ಆದ ಸಂಸಾರವಿದೆ. ಒಂದೆರಡು ತಿಂಗಳು ವ್ಯಾಪಾರ ಮಾಡಿ ಹೋಗುತ್ತಾರೆ. ಅವರಿಗೆ ಯಾವ ರೀತಿಯಲ್ಲೂ ತೊಂದರೆಯಾಗದಂತೆ (ಹೊಟ್ಟೆ ಮೇಲೆ ಹೊಡೆಯದಿರೋಣ) ಎಂಬ ಮಾತು ಸಾರ್ವಜನಿಕ ವಲಯದಲ್ಲಿದ್ದು, ಸಾರ್ವಜನಿಕರು ಮತ್ತು ಅಧಿಕಾರಿಗಳ ವಲಯವೂ ಬೀದಿ ಬದಿ ವ್ಯಾಪಾರಿಗಳ ಮೇಲೆ ಅನುಕಂಪ ತೋರಿಸುತ್ತಿರುವುದಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.
ಇನ್ನೂ ಹಣ್ಣಿನ ವ್ಯಾಪಾರಿಗಳು ಸಹ ಮಾರಾಟ ಮಾಡಿ ಉಳಿದು, ಕೆಟ್ಟು ಹೋದ ಹಣ್ಣುಗಳನ್ನು ಅಲ್ಲೆ ಬಿಸಾಕಿ ಅಸ್ವಚ್ಚತೆ ಮಾಡದೇ ಸ್ವಚ್ಚವಾಗಿ ಇಟ್ಟುಕೊಳ್ಳಬೇಕೆಂಬ ತಿಳುವಳಿಕೆಯನ್ನು ಮೂಡಿಸುವ ಕೆಲಸವನ್ನು ನಗರ ಸಭೆಯ ಅಧಿಕಾರಿಗಳು ಮಾಡುತ್ತಿದ್ದಾರೆ.