Advertisement

Dandeli: ಎಮ್ಮೆ ಮೇಯಿಸಲು ಹೋಗಿ ಜಲ ದಿಗ್ಬಂದನದಲ್ಲಿದ್ದ ವ್ಯಕ್ತಿಯ ರಕ್ಷಣೆ…

07:47 PM Aug 28, 2024 | |

ದಾಂಡೇಲಿ : ಬೊಮ್ಮನಹಳ್ಳಿ ಡ್ಯಾಮ್ ಬಳಿ ನದಿ ಮಧ್ಯೆ ದ್ವೀಪದಲ್ಲಿ ಜಲ ದಿಗ್ಬಂದನದಲ್ಲಿದ್ದ ವ್ಯಕ್ತಿಯನ್ನು ಬುಧವಾರ ನಸುಕಿನ ವೇಳೆ ರಕ್ಷಣೆ ಮಾಡಿದ ಘಟನೆ ನಡೆದಿದೆ.

Advertisement

ಮಂಗಳವಾರ ಸೂಪಾ ಜಲಾಶಯ ಮತ್ತು ಬೊಮ್ಮನಹಳ್ಳಿ ಜಲಾಶಯದಿಂದ ನೀರು ಬಿಟ್ಟ ಹಿನ್ನೆಲೆಯಲ್ಲಿ ಕಾಳಿ ನದಿಯಲ್ಲಿ ಮಂಗಳವಾರ ಮಧ್ಯಾಹ್ನದ ನಂತರ ನೀರಿನ ಪ್ರಮಾಣ ಏರಿಕೆಯಾಗಿತ್ತು. ನೀರು ಬಿಡುವ ಬಗ್ಗೆ ಕೆಪಿಸಿ ಮುನ್ನೆಚ್ಚರಿಕೆಯನ್ನು ನೀಡಿತ್ತು. ಆದರೆ ಇದನ್ನು ಗಮನಿಸದ ಸ್ಥಳೀಯ ನಿವಾಸಿ ಜನ್ನು ಗಾವಡೆ ಅವರು ಬೊಮ್ಮನಹಳ್ಳಿ ಹತ್ತಿರ ನದಿಯ ಮಧ್ಯೆ ಇರುವ ದ್ವೀಪದಲ್ಲಿ ಎಮ್ಮೆಗಳನ್ನು ಮೇಯಿಸಲು ಹೋಗಿದ್ದರು. ಆದರೆ ಜಲಾಶಯದಿಂದ ನೀರು ಹೊರ ಬಿಟ್ಟಿರುವ ಹಿನ್ನೆಲೆಯಲ್ಲಿ ಮಂಗಳವಾರ ಮಧ್ಯಾಹ್ನದಿಂದ ಕಾಳಿ ನದಿಯಲ್ಲಿ ನೀರಿನ ಮಟ್ಟ ಏರಿಕೆಯಾಗಿದ್ದು, ಜನ್ನು ಗಾವಡೆ ಅವರಿಗೆ ಅಲ್ಲಿಂದ ಬರಲಾಗದೆ ನಡುಗಡ್ಡೆಯಲ್ಲೇ ಉಳಿಯುವಂತಾಯಿತು. ಜನ್ನು ಗಾವಡೆ ಅವರು ಮನೆಗೆ ಬಾರದ ಹಿನ್ನೆಲೆಯಲ್ಲಿ ಮನೆ ಮಂದಿಯೆಲ್ಲ ಅವರನ್ನು ಹುಡುಕಾಡಿದರು. ಹೀಗೆ ನದಿಯ ನಡುಗಡ್ಡೆಯಲ್ಲಿ ಜನ್ನು ಗಾವಡೆ ಅವರು ಜಲ ದಿಗ್ಬಂಧನಕ್ಕೆ ಒಳಗಾಗಿದ್ದರು.

ಈ ಬಗ್ಗೆ ಮಾಹಿತಿಯನ್ನು ಪಡೆದುಕೊಂಡ ಅಂಬಿಕಾನಗರ ಕೆಪಿಸಿಯ ಅಧಿಕಾರಿಗಳು ಮತ್ತು ದಾಂಡೇಲಿಯ ತಹಶೀಲ್ದಾರ್ ಶೈಲೇಶ ಪರಮಾನಂದ ಅವರು ತಕ್ಷಣವೇ ಬುಧವಾರ ನಸುಕಿನ ವೇಳೆ ಒಂದು ಗಂಟೆ ಸುಮಾರಿಗೆ ಪ್ರವಾಸೋದ್ಯಮಿ ಹಾಗೂ ಮಾನಸಾ ಅಡ್ವೆಂಚರ್ಸಿನ ಮಾಲಕರಾದ ಉಮೇಶ್ ಜಿ.ಈ ಅವರನ್ನು ಸಂಪರ್ಕಿಸಿ ರಾಪ್ಟ್ ಹಾಗೂ ತಜ್ಞ ಈಜುಗಾರರನ್ನು ಕಳುಹಿಸಿ ಕೊಡುವಂತೆ ವಿನಂತಿಸಿದ್ದರು.

ಮಾಹಿತಿಯನ್ನು ಪಡೆದುಕೊಂಡ ಉಮೇಶ್ ಜಿ. ಈ ಅವರು ತನ್ನ ಮಾನಸಾ ಅಡ್ವೆಂಚರ್ಸಿನ 2 ರಾಪ್ಟ್ ಮತ್ತು ಹತ್ತು ಜನ ನುರಿತ ಈಜುಗಾರರನ್ನು ಸ್ಥಳಕ್ಕೆ ಕಳುಹಿಸಿಕೊಟ್ಟಿದ್ದರು. ಬುಧವಾರ ನಸುಕಿನ ವೇಳೆ 2 ಗಂಟೆಗೆ ಜನ್ನು ಗಾವಡೆಯವರ ರಕ್ಷಣೆ ಕಾರ್ಯವನ್ನು ಆರಂಭಿಸಲಾಯಿತು. ನೀರಿನ ರಭಸದ ನಡುವೆಯೂ ಮಾನಸಾ ಅಡ್ವೆಂಚರ್ಸಿನ ಸೋಮಶೇಖರ್ ಜಿ.ಈ ಮತ್ತು ಕಾರ್ತಿಕ್ ಉಮೇಶ ಜಿ.ಈ ಅವರ ನೇತೃತ್ವದಲ್ಲಿ ಮಾ‌ನಸಾ ಅಡ್ವೆಂಚರ್ಸ್ ಸಿಬ್ವಂದಿಗಳಾದ ಆದರ್ಶ್, ಸಂತೋಷ್, ಬಾಬು, ಸಂಜು, ಮಂಜು, ದೀಪಕ್, ಚೇತನ್, ಅಗ್ನೀಶ್, ಬಸವರಾಜ್ ಅವರ ತಂಡ ನೀರಿನ ರಭಸವನ್ನು ಲೆಕ್ಕಿಸದೆ ನಡುಗೆಡ್ಡೆಗೆ ತೆರಳಿ ಜನ್ನು ಗಾವಡೆ ಅವರನ್ನು ಬುಧವಾರ ನಸುಕಿನ ವೇಳೆ ಸುರಕ್ಷಿತವಾಗಿ ಕರೆದುಕೊಂಡು ನದಿ ದಡಕ್ಕೆ ಬಂದಿದ್ದಾರೆ.

ಈ ಸಂದರ್ಭದಲ್ಲಿ ಅಂಬಿಕಾನಗರ ಕೆಪಿಸಿಯ ಅಧಿಕಾರಿಗಳು, ಸಿಬ್ಬಂದಿಗಳು, ಅಂಬಿಕಾ ನಗರ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು, ಸ್ಥಳೀಯ ಸಾರ್ವಜನಿಕರು ಮತ್ತು ಜನ್ನು ಗಾವಡೆ ಅವರ ಕುಟುಂಬಸ್ಥರು ಉಪಸ್ಥಿತರಿದ್ದು, ಮಾನಸಾ ಅಡ್ವೆಂಚರ್ಸಿನ ಸಾಹಸಿ ಯುವಕರ ತಂಡಕ್ಕೆ ಕೃತಜ್ಞತೆಯನ್ನು ಸಲ್ಲಿಸಿದರು.

Advertisement

ಇದನ್ನೂ ಓದಿ: Manipal: ನೀರಿನಲ್ಲಿ ಮುಳುಗಿದ ಪ್ರಕರಣ, ಚಿಕಿತ್ಸೆ ಫಲಿಸದೆ ಇನ್ನೋರ್ವ ವಿದ್ಯಾರ್ಥಿಯೂ ಮೃತ್ಯು

Advertisement

Udayavani is now on Telegram. Click here to join our channel and stay updated with the latest news.

Next