Advertisement

Dandeli; ಹಾರ್ನಬಿಲ್ ಹಕ್ಕಿಗಳು ಪರಿಸರ ಸ್ನೇಹಿ ಪಕ್ಷಿಗಳು : ಸ್ಮಿತಾ ಬಿಜ್ಜೂರು

07:37 PM Feb 17, 2024 | Team Udayavani |

ದಾಂಡೇಲಿ : ಪರಿಸರಕ್ಕೆ ಹಾಗೂ ಮಾನವನ ಅಸ್ತಿತ್ವಕ್ಕೆ ಧಕ್ಕೆ ಉಂಟಾಗುವುದನ್ನು ತಡೆಯುವ ವಿಶೇಷ ಶಕ್ತಿಯಿರುವ ಹಾರ್ನಬಿಲ್ ಹಕ್ಕಿಗಳು ಪರಿಸರ ಸ್ನೇಹಿ ಹಕ್ಕಿಗಳಾಗಿ ಗಮನ ಸೆಳೆದಿವೆ.ನಾಲ್ಕು ವಿಭಿನ್ನ ಪ್ರಬೇಧಗಳ ಹಾರ್ನಬಿಲ್ ಗಳು ದಾಂಡೇಲಿ ಮತ್ತು ಜೋಯಿಡಾದಲ್ಲಿ ಹೇರಳವಾಗಿದ್ದು, ಈ ಭಾಗದ ಪ್ರವಾಸೋದ್ಯಮದ ಪ್ರಗತಿಯಲ್ಲಿ ಹಾರ್ನಬಿಲ್ ಹಕ್ಕಿಗಳ ಕೊಡುಗೆ ಅಪಾರವಾಗಿದೆ.

Advertisement

ತನ್ನ ವಿಶಿಷ್ಟ ಆಕರ್ಷಕ ಬಣ್ಣ ಮತ್ತು ಶರೀರದಿಂದಲೆ ಹಾರ್ನಬಿಲ್ ಹಕ್ಕಿ ಪ್ರವಾಸಿಗರ ಕಣ್ಮನ ಸೆಳೆಯುತ್ತಿದೆ. ಇಲ್ಲಿಗೆ ಬರುವ ಪ್ರವಾಸಿಗರು ಹಾರ್ನ್ ಬಿಲ್ ಹಕ್ಕಿಗೆ ಮನಸೋಲದೆ ಇರಲು ಸಾಧ್ಯವೇ ಇಲ್ಲ. ಪ್ರವಾಸೋದ್ಯಮದ ಅಭಿವೃದ್ಧಿಯೊಂದಿಗೆ ಹಾರ್ನಬಿಲ್ ಹಕ್ಕಿಯ ಮಹತ್ವ, ಅದರ ವಿಶೇಷತೆಯ ಅರಿವಿನ ಜೊತೆಗೆ ಅವುಗಳ ಸಂರಕ್ಷಣೆಯ ಮಹತ್ವದ ಹಿತದೃಷ್ಟಿಯಿಂದ ಹಾರ್ನಬಿಲ್ ಹಬ್ಬ ಅತ್ಯಂತ ಮಹತ್ವಪೂರ್ಣವಾಗಿದೆ ಎಂದು ಬೆಂಗಳೂರಿನ ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸ್ಮಿತಾ ಬಿಜ್ಜೂರು ಅವರು ಹೇಳಿದರು.

ಕರ್ನಾಟಕ ಅರಣ್ಯ ಇಲಾಖೆ, ಕೆನರಾ ವೃತ್ತ ಶಿರಸಿ ಇದರ ಹಳಿಯಾಳ ವಿಭಾಗದ ಆಶ್ರಯದಡಿ ಶನಿವಾರ ನಗರದ ಹಾರ್ನಬಿಲ್ ಸಭಾಭವನದಲ್ಲಿ ಹಾರ್ನಬಿಲ್ ಹಕ್ಕಿ ಹಬ್ಬ  2024 ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿ ಮಾತನಾಡಿದ ಅವರು, ಪರಿಸರ ಮತ್ತು ವನ್ಯಸಂಕುಲಕ್ಕೆ ಹೊಂದಿಕೊಂಡು ಜೀವನ ನಡೆಸುವ ಪದ್ಧತಿ ನಮ್ಮದಾಗಿರುವುದರಿಂದಲೆ ಇಲ್ಲಿಯ ಪರಿಸರ ಇನ್ನೂ ಸಮೃದ್ಧವಾಗಿರುವುದನ್ನು ನಾವು ನೋಡಬಹುದು. ಪರಿಸರ ಹಾಗೂ ವನ್ಯಸಂಕುಲದ ರಕ್ಷಣೆ ಕೇವಲ ಅರಣ್ಯ ಇಲಾಖೆಯ ಜವಾಬ್ದಾರಿ ಮಾತ್ರವಲ್ಲ. ಇದರ ರಕ್ಷಣೆ ಪ್ರತಿಯೊಬ್ಬ ಆದ್ಯ ಕರ್ತವ್ಯವಾಗಿದೆ. ಎಲ್ಲವನ್ನು ಪಡೆದುಕೊಳ್ಳುವ ನಾವು ನಮ್ಮಿಂದ ಪರಿಸರಕ್ಕೆ ಕೊಡುಗೆ ಏನು ಎನ್ನುವುದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ.

ವೈಶಿಷ್ಟ್ಯಪೂರ್ಣವಾದ ಹಾರ್ನಬಿಲ್ ಹಕ್ಕಿಯ ಜೀವನಶೈಲಿಯೆ ವಿಭಿನ್ನವಾಗಿದೆ. ಹಾರ್ನಬಿಲ್ ಹಕ್ಕಿಗಳ ಬಗ್ಗೆ ಅರಿವು ಮತ್ತು ಅದರ ರಕ್ಷಣೆಯ ಬಗ್ಗೆ ಜನಮಾನಸಕ್ಕೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಸ್ಪೂರ್ತಿಯಾಗಲೆಂದರು.

ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಕೆನರಾ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ವಸಂತ ರೆಡ್ಡಿಯವರು ದಾಂಡೇಲಿಯ ಸುಮಾರು 50ಸಾವಿರ ಚದರ ಕಿಲೋ ಮೀಟರ್ ಪ್ರದೇಶ ವ್ಯಾಪ್ತಿ ಹಾರ್ನಬಿಲ್ ಹಕ್ಕಿಗಳ ವಾಸಸ್ಥಳವಾಗಿದೆ. ದಾಂಡೇಲಿ, ಜೋಯಿಡಾ ಭಾಗದಲ್ಲಿ ಗ್ರೇಟ್ ಹಾರ್ನಬಿಲ್, ಮಲಬಾರ್ ಫೈಡ್ ಹಾರ್ನಬಿಲ್, ಮಲಬಾರ್ ಗ್ರೇ ಹಾರ್ನಬಿಲ್, ಇಂಡಿಯನ್ ಗ್ರೇ ಹಾರ್ನಬಿಲ್ ಪ್ರಭೇಧಗಳನ್ನು ನೋಡಬಹುದಾಗಿದ್ದು, ಇದು ಈ ಭಾಗದ ಜನತೆಯ ಸೌಭಾಗ್ಯ. ಇಲ್ಲಿಯ ವನ್ಯಸಂಕುಲ ಮತ್ತು ದಟ್ಟ ಕಾಡು ಉಳಿಸಿ, ಬೆಳೆಸುವಲ್ಲಿ ಇಲಾಖೆಯ ಜೊತೆ ಬಹುಮುಖ್ಯ ಪಾತ್ರ ಸ್ಥಳೀಯ ಜನತೆಯದ್ದಾಗಿದೆ ಎಂದ ಅವರು ಕೆನರಾ ವೃತ್ತ ವ್ಯಾಪ್ತಿಯಲ್ಲಿ ವಿವಿಧ ಜಾತಿಯ ಒಟ್ಟು 296 ಹಕ್ಕಿಗಳಿದ್ದು, ಅವುಗಳನ್ನು ಗುರುತಿಸಲಾಗಿದೆ.ಈ ಭಾಗದ ಹಾರ್ನಬಿಲ್ ಹಕ್ಕಿಗಳ ಸಂರಕ್ಷಣೆಯೆ ಈ ಹಬ್ಬದ ಮೂಲ ಆಶಯವಾಗಿದೆ ಎಂದರು.

Advertisement

ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ.ಪ್ರಶಾಂತಕುಮಾರ್.ಕೆ.ಸಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಹಾರ್ನಬಿಲ್ ಹಕ್ಕಿಗಳು ಈ ಭಾಗದ ಪ್ರವಾಸೋಧ್ಯಮದ ಬೆಳವಣಿಗೆಗೆ ಮಹತ್ವದ ಕೊಡುಗೆಯನ್ನು ನೀಡಿದೆ. ಹಾರ್ನಬಿಲ್ ಹಕ್ಕಿಗಳ ರಕ್ಷಣೆ ಮತ್ತು ಅವುಗಳ ಸಂತತಿ ಬೆಳವಣಿಗೆಯನ್ನೆ ಮುಖ್ಯ ಗುರಿಯಾಗಿಸಿಕೊಂಡು ಹಾರ್ನಬಿಲ್ ಹಕ್ಕಿ ಹಬ್ಬವನ್ನು ಮಾಡಲಾಗುತ್ತಿದೆ ಎಂದರು.

ಅರಣ್ಯ ಇಲಾಖೆಯಲ್ಲಿ ಶ್ಲಾಘನಾರ್ಹ ಸಾಧನೆ ಮಾಡಿದ ಉಪ ವಲಯಾರಣ್ಯಾಧಿಕಾರಿಗಳಾದ ಆನಂದ್ಆರ್. ಬಸವನಾಳ, ಸಂತೋಷ್ ಗವಸ್, ಗಸ್ತು ಅರಣ್ಯ ಪಾಲಕರಾದ ಶಂಕರಾನಂದ ಜಿದ್ದಿಮನಿ ಮತ್ತು ಅರಣ್ಯ ವೀಕ್ಷಕರಾದ ಚಂದ್ರಕಾಂತ್ ಹುಂದಲೇಕರ್ ಅವರನ್ನು ಸನ್ಮಾನಿಸಲಾಯ್ತು. ಹಾರ್ನಬಿಲ್ ಹಬ್ಬದ ನಿಮಿತ್ತ ಶಾಲಾ/ಕಾಲೇಜು ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು . ಕಾರ್ಯಕ್ರಮದಲ್ಲಿ ವೆಸ್ಟ್ ಕೋಸ್ಟ್ ಕಾಗದ ಕಾರ್ಖಾನೆಯವರು ವಿತರಿಸಲಿರುವ ಬಟ್ಟೆ ಚೀಲಗಳನ್ನು ಬಿಡುಗಡೆಗೊಳಿಸಲಾಯಿತು.

ವೇದಿಕೆಯಲ್ಲಿ ಧಾರವಾಡ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಯತೀಶ್ ಕುಮಾರ್, ಬೆಳಗಾವಿ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮಂಜುನಾಥ್ ಚೌವ್ಹಾಣ್, ಕಾಳಿ ಹುಲಿ ಸಂರಕ್ಷಿತ ಪ್ರದೇಶದ ನಿರ್ದೇಶಕರಾದ ನೀಲೇಶ್ ಶಿಂಧೆ, ಶಿರಸಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಅಜ್ಜಯ್ಯ, ಕಾರವಾರ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ರವಿಶಂಕರ್, ಹೊನ್ನಾವರ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಯೋಗೇಶ್, ಯಲ್ಲಾಪುರ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಹರ್ಷಬಾನು ಮೊದಲಾದವರು ಉಪಸ್ಥಿತರಿದ್ದರು.

ಕು.ಮಾನಸಾ ವಾಸರೆ ಪ್ರಾರ್ಥನೆ ಗೀತೆ ಹಾಡಿದರು. ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸಂತೋಷ್ ಚೌವ್ಹಾಣ್ ಸ್ವಾಗತಿಸಿದರು. ವಲಯ ಅರಣ್ಯಾಧಿಕಾರಿ ಅಪ್ಪರಾವ್ ಕಲಶೆಟ್ಟಿ ವಂದಿಸಿದರು.

ಸಭಾ ಕಾರ್ಯಕ್ರಮದ ಮೊದಲು ನಗರಸಭೆಯಿಂದ ಹಾರ್ನಬಿಲ್ ಸಭಾಭವನದವರೆಗೆ ಜಾಗೃತಿ ಮೂಡಿಸುವ ಭವ್ಯ ಮೆರವಣಿಗೆ ನಡೆಯಿತು.

ಮೆರವಣಿಗೆಯಲ್ಲಿ ಹಾರ್ನಬಿಲ್ ಹಕ್ಕಿಯ ಟ್ಯಾಬ್ಲೋ ಎಲ್ಲರ ಆಕರ್ಷಣೆಗೆ ಪಾತ್ರವಾಯ್ತು. ಡಮಾಮಿ ನೃತ್ಯ, ಡೊಳ್ಳು ಕುಣಿತ, ಕಂಸಾಳೆ ನೃತ್ಯ ಎಲ್ಲರ ಗಮನ ಸೆಳೆಯಿತು. ಮೆರವಣಿಗೆಯಲ್ಲಿ ನಗರದ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಹಾರ್ನಬಿಲ್ ಸಭಾಭವನದ ಮುಂಭಾಗದಲ್ಲಿ ವಸ್ತು ಪ್ರದರ್ಶನ ಮಳಿಗೆಗಳು ಕಾರ್ಯಕ್ರಮಕ್ಕೆ ಮೆರುಗು ತಂದುಕೊಟ್ಟಿತು. ಕಾರ್ಯಕ್ರಮದ ಯಶಸ್ಸಿಗೆ ಅರಣ್ಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು ಹಾಗೂ ವಿವಿಧ ಸಂಘ, ಸಂಸ್ಥೆಗಳ ಪ್ರಮುಖರು ಶ್ರಮಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next