Advertisement

ವೈಭವದ ರಾಮಲೀಲೋತ್ಸವ

03:16 PM Oct 20, 2018 | Team Udayavani |

ದಾಂಡೇಲಿ: ನಗರದ ವೆಸ್ಟ್‌ಕೋಸ್ಟ್‌ ಕಾಗದ ಕಾರ್ಖಾನೆ ಆಶ್ರಯದಲ್ಲಿ ಕಾರ್ಖಾನೆಯ ಡಿಲಕ್ಸ್‌ ಮೈದಾನದಲ್ಲಿ ನಡೆದ ರಾಮ ಲೀಲೋತ್ಸವವು ಜಾತಿ, ಮತ, ಧರ್ಮ ಎಂಬ ಬೇಧವಿಲ್ಲದೆ ಎಲ್ಲರ ಭಾಗವಹಿಸುವಿಕೆಯ ಮೂಲಕ ಐಕ್ಯತೆ ಮೆರೆಯುವುದರೊಂದಿಗೆ ಅಭೂತಪೂರ್ವವಾಗಿ ಹಾಗೂ ಜಿಲ್ಲೆಯಲ್ಲೇ ವಿಶೇಷವಾಗಿ ಮತ್ತು ಆಕರ್ಷಣೀಯವಾಗಿ ನಡೆಯಿತು.

Advertisement

ಕಾಗದ ಕಾರ್ಖಾನೆ ಕಾರ್ಯನಿರ್ವಾಹಕ ನಿರ್ದೇಶಕ ರಾಜೇಂದ್ರ ಜೈನರ ಮಾರ್ಗದರ್ಶನದಲ್ಲಿ ಕಾಗದ ಕಾರ್ಖಾನೆಯ ಕ್ರೀಡಾ ಹಾಗೂ ಸಾಂಸ್ಕೃತಿಕ ಸಮಿತಿ ಕಾರ್ಯದರ್ಶಿ ರಾಜೇಶ ತಿವಾರಿ ನೇತೃತ್ವದಲ್ಲಿ ನಡೆದ ರಾಮಲೀಲೋತ್ಸವ ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ಸಂಪನ್ನಗೊಂಡಿತು.

ಶುಕ್ರವಾರ ಸಂಜೆ ನಡೆದ ಈ ಕಾರ್ಯಕ್ರಮದಲ್ಲಿ 52 ಅಡಿ ಎತ್ತರದ ರಾವಣನ ಮೂರ್ತಿ, 45 ಅಡಿ ಎತ್ತರದ ಕುಂಭಕರ್ಣನ ಮತ್ತು ಮೇಘನಾಥನ ಮೂರ್ತಿಯನ್ನು ಐವತ್ತು ಸಾವಿರಕ್ಕೂ ಅಧಿಕ ಜನರ ಸಮಾಗಮದ ನಡುವೆ ಸುಡಲಾಯಿತು. ಈ ಮೂರ್ತಿಗಳಿಗೆ ಮನೋರಂಜನಾ ಕಾರ್ಯಕ್ರಮ ಮತ್ತು ಆಯ್ದ ಸ್ಥಳೀಯ ಕಲಾವಿದರುಗಳಿಂದ ರಸಮಂಜರಿ ಕಾರ್ಯಕ್ರಮ ನಡೆಯಿತು.

ಶುಕ್ರವಾರ ಬೆಳಗಿನಿಂದ ರಾತ್ರಿ 10 ಗಂಟೆಯವರೆಗೆ ರಾಮಲೀಲೋತ್ಸವದ ಜೊತೆ ಜೊತೆಯಲ್ಲಿಯೆ ಡಿಲಕ್ಸ್‌ ಮೈದಾನದಲ್ಲಿ ವಿವಿಧ ರೀತಿಯ ಮೇಳಗಳನ್ನು ಹಮ್ಮಿಕೊಳ್ಳಲಾಗಿತ್ತು. ಈ ಮೇಳಾದಲ್ಲಿ ಹಲವು ಬಗೆಯ ತಿಂಡಿ ತಿನಸುಗಳ ಮಾರಾಟ ಮಳಿಗೆಗಳು, ಮಕ್ಕಳಿಗಾಗಿ ಹಲವು ಬಗೆಯ ಆಟಗಳು ಹಾಗೂ ಸ್ಥಳೀಯ ಕುಶಲಕರ್ಮಿಗಳ ಕೈಚಳಕದಲ್ಲಿ ಅರಳಿದ ಕಲಾಕೃತಿಗಳ ಪ್ರದರ್ಶನ ಮತ್ತು ಮಾರಾಟದ ಮಳಿಗೆಗಳಿಗೆ ಅವಕಾಶ ಕಲ್ಪಿಸಲಾಗಿತ್ತು.

ವಿದ್ಯುತ್‌ ಸಿಡಿಮದ್ದಿನ ಪ್ರದರ್ಶನ: ಇದೇ ಮೊದಲ ಬಾರಿಗೆ ಪ್ರಾಯೋಗಿಕವಾಗಿ ವಿದ್ಯುತ್‌ ಸಿಡಿಮದ್ದಿನ ಪ್ರದರ್ಶನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಕಳೆದೆರಡು ವರ್ಷಗಳಿಂದ ಸಿಡಿಮದ್ದು ಪ್ರದರ್ಶನವನ್ನು ರದ್ದುಪಡಿಸಲಾಗಿದ್ದು, ಪ್ರೇಕ್ಷಕರ ಮನ ಸೆಳೆಯಲು ಹೊಸ ಬಗೆಯ ವೈವಿಧ್ಯಮಯವಾಗಿ ವಿದ್ಯುತ್‌ ಸಿಡಿಮದ್ದಿನ ಪ್ರದರ್ಶನವನ್ನು ಚೊಚ್ಚಲ ಬಾರಿಗೆ ಆಯೋಜಿಸಲಾಗಿತ್ತು. ಇದಾದ ಬಳಿಕ ಕೊಲ್ಲಾಪುರದ ಆರ್ಕೆಸ್ಟ್ರಾ ತಂಡದಿಂದ ರಸಮಂಜರಿ ಕಾರ್ಯಕ್ರಮವು ಮನೋಜ್ಞವಾಗಿ ನಡೆಯಲಿದೆ.

Advertisement

ಪಾರ್ಕಿಂಗ್‌ ವ್ಯವಸ್ಥೆ: ದಾಂಡೇಲಪ್ಪ ಜಾತ್ರೆ ಹಾಗೂ ರಾಮಲೀಲಾ ಉತ್ಸವದ ನಿಮಿತ್ತ ಲಕ್ಷಾಂತರ ಜನರು ಸಮಾಗಮಗೊಳ್ಳುತ್ತಿರುವುದರಿಂದ ಮುಂಜಾನೆ 7 ಗಂಟೆಯಿಂದಲೇ ಕಾಗದ ಕಾರ್ಖಾನೆ ಒಳಗಡೆ ವಾಹನಗಳ ಪ್ರವೇಶವನ್ನು ನಿರ್ಬಂಸಲಾಗಿದ್ದು, ದ್ವಿಚಕ್ರ ವಾಹನಗಳಿಗೆ ಕನ್ಯಾ ವಿದ್ಯಾಲಯದ ಆಟದ ಮೈದಾನ ಹಾಗೂ ನಾಲ್ಕು ಚಕ್ರ ಹಾಗೂ ಇತರೆ ವಾಹನಗಳಿಗೆ ಜನತಾ ವಿದ್ಯಾಲಯದ ಆಟದ ಮೈದಾನದಲ್ಲಿ ಪಾರ್ಕಿಂಗ್‌ ವ್ಯವಸ್ಥೆ ಮಾಡಲಾಗಿತ್ತು. ಶಿಸ್ತಿನ ಕಾರ್ಯಕ್ರಮ ಮತ್ತು ಸುಗಮ ಸಂಚಾರ ವ್ಯವಸ್ಥೆಯಲ್ಲಿ ದಾಂಡೇಲಿ ಪೊಲೀಸ್‌ ಉಪ ವಿಭಾಗದ ಅಧಿ ಕಾರಿಗಳ ಮತ್ತು ಸಿಬ್ಬಂದಿ ಪಾತ್ರ ಪ್ರಮುಖವಾಗಿತ್ತು.

ಕಾರ್ಯಕ್ರಮದಲ್ಲಿ ಸರಿ ಸುಮಾರು 40 ರಿಂದ 50 ಸಾವಿರ ಜನ ಭಾಗವಹಿಸಿ ಕಾರ್ಯಕ್ರಮಕ್ಕೆ ಸಾಕ್ಷಿಯಾದರು. ರಾವಣ, ಕುಂಭಕರ್ಣ ಮತ್ತು ಮೇಘನಾಥನ ಪ್ರತಿಮೆಯನ್ನು ಸುಡುವ ಕಾರ್ಯಕ್ರಮ ನೋಡಲು ನಗರದ ಜನ ಮಾತ್ರವಲ್ಲದೇ ಜಿಲ್ಲೆ ಮತ್ತು ಹೊರ ಜಿಲ್ಲೆಗಳಿಂದಲೂ ಅಧಿಕ ಸಂಖ್ಯೆಯಲ್ಲಿ ಜನ ಭಾಗವಹಿಸಿದ್ದರು. ಒಟ್ಟಿನಲ್ಲಿ ಧಾರ್ಮಿಕ ಕಾರ್ಯಕ್ರಮಗಳನ್ನು ಅಚ್ಚುಕಟ್ಟಾಗಿ ಮತ್ತು ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿರುವ ವೆಸ್ಟ್‌ಕೋಸ್ಟ್‌ ಪೇಪರ್‌ ಮಿಲ್‌ ಇವರ ಧಾರ್ಮಿಕ ಕಾರ್ಯಕ್ಕೆ ಶ್ಲಾಘನೆ ವ್ಯಕ್ತವಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next