ದಾಂಡೇಲಿ : ದಾಂಡೇಲಿ ನಗರ ಸಭೆಯ ವಾರ್ಡ್ ನಂ:11 ಕ್ಕೆ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ ಭಾರಿಸುವುದರ ಮೂಲಕ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿದೆ. ಸೋಮವಾರ ಬೆಳಿಗ್ಗೆ ನಗರ ಸಭೆಯ ಸಭಾಭವನದಲ್ಲಿ ಮತ ಏಣಿಕೆ ಪ್ರಕ್ರಿಯೆ ನಡೆಯಿತು.
ಕಾಂಗ್ರೆಸಿನಿಂದ ಸ್ಪರ್ಧಿಸಿದ್ದ ಮಹಾದೇವ ಈರಣ್ಣ ಜಮಾದಾರ ಅವರು 561 ಮತಗಳನ್ನು ಪಡೆದು ಗೆಲುವಿನ ನಗೆ ಬೀರಿದರೇ, ಇತ್ತ ಬಿಜೆಪಿ ಅಭ್ಯರ್ಥಿ ಗೋಪಾಲಸಿಂಗ್ ರಜಪೂತ್ ಅವರು 370 ಮತಗಳನ್ನಷ್ಟೆ ಪಡೆಯಲು ಶಕ್ತರಾಗಿದ್ದಾರೆ. 10 ಮತಗಳು ನೋಟಾ ಮತಗಳಾಗಿವೆ. ವಿಜೇತ ಅಭ್ಯರ್ಥಿ ಮಹಾದೇವ ಈರಣ್ಣ ಜಮಾದಾರ ಅವರು 191 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.
ಒಟ್ಟು 1662 ಮತದಾರರ ಪೈಕಿ 941 ಮತದಾರರು ಮತ ಚಲಾಯಿಸಿದ್ದರು. ತಹಶೀಲ್ದಾರ್ ಶೈಲೇಶ ಪರಮಾನಂದ ಅವರ ಮೇಲುಸ್ತುವಾರಿಯಲ್ಲಿ ಚುನಾವಣಾಧಿಕಾರಿ ಪಿ.ಐ.ಮಾನೆ ಹಾಗೂ ಸಹಾಯಕ ಚುನಾವಣಾಧಿಕಾರಿ ಅಭಯ್ ಎಸ್.ವಾಡಕರ ಅವರು ಚುನಾವಣಾಧಿಕಾರಿಗಳಾಗಿ ಕರ್ತವ್ಯ ನಿರ್ವಹಿಸಿದ್ದರು.
ಇದನ್ನೂ ಓದಿ :ಮೈಸೂರು ಯುವತಿ ಕೇಸ್ ಗೆ ಟ್ವಿಸ್ಟ್: ಇದು ಅತ್ಯಾಚಾರ ಯತ್ನವಲ್ಲ, ಪ್ರೇಮಪುರಾಣ…!
ನಿಷೇಧಾಜ್ಞೆ ಜಾರಿಯಿರುವ ಹಿನ್ನಲೆಯಲ್ಲಿ ಮತ ಏಣಿಕೆ ಕೇಂದ್ರದ ಬಳಿ ಪಿಎಸೈ ಯಲ್ಲಪ್ಪ.ಎಸ್ ಹಾಗೂ ತನಿಖಾ ಪಿಎಸೈ ಕಿರಣ್ ಪಾಟೀಲ ಅವರುಗಳ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋ ಬಸ್ತನ್ನು ಒದಗಿಸಲಾಗಿತ್ತು. ಗೆಲುವಿನ ನಗೆ ಬೀರಿದ ಕಾಂಗ್ರೆಸ್ ಮುಖಂಡರುಗಳ ಹಾಗೂ ಕಾರ್ಯಕರ್ತರುಗಳು ಮತ ಏಣಿಕೆಯ ಹೊರಗಡೆ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.