Advertisement

ದಾಂಡೇಲಿ: ಕಾಳಿ ನದಿಯಲ್ಲಿ ಕೊಚ್ಚಿ ಹೋಗಿದ್ದ ಯುವಕ ಶವವಾಗಿ ಪತ್ತೆ

09:56 AM Jan 14, 2022 | Team Udayavani |

ದಾಂಡೇಲಿ: ಸಮೀಪದ ಮೌಳಂಗಿಯಲ್ಲಿ ಈಜಲೆಂದು ಕಾಳಿ ನದಿಗಿಳಿದಿದ್ದ ಯುವಕನೊರ್ವ ಕೊಚ್ಚಿ ಹೋಗಿ ಎರಡು ದಿನಗಳ ನಂತರ ಶುಕ್ರವಾರ ಬೆಳಿಗ್ಗೆ ಶವವಾಗಿ ಪತ್ತೆಯಾಗಿದ್ದಾನೆ.

Advertisement

ಹುಬ್ಬಳ್ಳಿಯ 104 ಆರೋಗ್ಯ ಸಹಾಯವಾಣಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ 6 ಜನರ ತಂಡವೊಂದು ಕೋವಿಡ್ ಮುನ್ನೆಚ್ಚರಿಕೆಯ ಬಗ್ಗೆ ಪ್ರಚಾರಕ್ಕೆಂದು ಬುಧವಾರ ದಾಂಡೇಲಿಗೆ ಆಗಮಿಸಿ, ಮೌಳಂಗಿಗೆ ಹೋಗಿತ್ತು. ಈಜಲೆಂದು ನೀರಿಗಿಳಿದಿದ್ದ 6 ಜನ ಯುವಕರ ತಂಡದಲ್ಲಿದ್ದ ಹುಬ್ಬಳ್ಳಿಯ 32 ವರ್ಷದ ಯುವಕ ಆನಂದ ಸಿಂಗ್ ಲಕ್ಷ್ಮಣ ಸಿಂಗ್ ಎಂಬಾತ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದ.

ಬುಧವಾರ ಸಂಜೆಯಿಂದ ದಾಂಡೇಲಿ ಗ್ರಾಮೀಣ ಪೊಲೀಸರ ಸಹಕಾರದಲ್ಲಿ ಮಾನಸ ಅಡ್ವೆಂಚರ್ಸಿನ ನುರಿತ ಈಜುಗಾರರ ರ್ಯಾಪ್ಟ್ ತಂಡ ಯುವಕನ ಶೋಧ ಕಾರ್ಯಾಚರಣೆಗೆ ಇಳಿದಿತ್ತು. ಬುಧವಾರ ಮತ್ತು ಗುರುವಾರ ಬೆಳಗ್ಗಿನಿಂದ ಕತ್ತಲಾಗುವವರೆಗೆ ಶೋಧ ಕಾರ್ಯಾಚರಣೆಯನ್ನು ನಡೆಸಿತ್ತು. ಮೌಳಂಗಿಯಿಂದ ಹಳೆದಾಂಡೇಲಿಯವರೆಗೆ ಶೋಧ ಕಾರ್ಯ ನಡಿಸಿದರೂ ಯುವಕನ ಪತ್ತೆಯಾಗಿರಲಿಲ್ಲ.

ಆದರೆ ಶುಕ್ರವಾರ ಬೆಳಿಗ್ಗೆ ಕಾರ್ಯಾಚರಣೆಗಿಳಿದ ಶೋಧ ತಂಡಕ್ಕೆ ಇಂದು ಯುವಕನ ಮೃತದೇಹ ಮೌಳಂಗಿಯ ಸಂಗಮದಲ್ಲಿ ಮೃತದೇಹವನ್ನು ಪತ್ತೆ ಹಚ್ಚಿದ್ದಾರೆ.

ಬೆಳಿಗ್ಗೆ ಮಾನಸ ಅಡ್ವೆಂಚರ್ಸಿನ ರ್ಯಾಪ್ಟ್ ತಂಡ ಹಾಗೂ ಪಿಎಸೈ ಐ.ಆರ್.ಗಡ್ಡೇಕರ, ಎಎಸೈ ವೆಂಕಟೇಶ ತೆಗ್ಗಿನ ಹಾಗೂ ಪೊಲೀಸ್ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿದ್ದರು. ಇತ್ತ ಅರಣ್ಯ ಇಲಾಖೆಯ ಸಿಬ್ಬಂದಿಗಳು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿಗಳು ಸಹಕರಿಸಿದ್ದರು.

Advertisement

ಮೃತ ಆನಂದ ಸಿಂಗ್ ಲಕ್ಷ್ಮಣ ಸಿಂಗ್ ಕುಟುಂಬಸ್ಥರ ಹಾಗೂ ಬಂಧು ಮಿತ್ರರ ಆಕ್ರಂದನ ಮುಗಿಲು ಮುಟ್ಟಿದ್ದು, ಈಗಾಗಲೆ ಮೃತ ದೇಹವನ್ನು ದಾಂಡೇಲಿಯ ಸಾರ್ವಜನಿಕ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ಕರೆ ತರಲಾಗುತ್ತಿದ್ದು, ಅಲ್ಲಿ ಮರಣೋತ್ತರ ಪರೀಕ್ಷೆ ಮುಗಿದ ಬಳಿಕ, ಮೃತ ಶರೀರವನ್ನು ಕುಟುಂಬಸ್ಥರಿಗೆ ಒಪ್ಪಿಸಲಾಗುತ್ತದೆ.

ಡಿವೈಎಸ್ಪಿ ಗಣೇಶ್.ಕೆ.ಲ್ ಮತ್ತು ಸಿಪಿಐ ಪ್ರಭು ಗಂಗನಹಳ್ಳಿಯವರ ಮಾರ್ಗದರ್ಶನದಲ್ಲಿ ಪಿಎಸೈಗಳಾದ ಐ,ಆರ್.ಗಡ್ಡೇಕರ ಮತ್ತು ಯಲ್ಲಾಲಿಂಗ ಕುನ್ನೂರು ಕಾರ್ಯಾಚರಣೆಯಲ್ಲಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next