Advertisement

ಅದ್ಧೂರಿ ದಂಡಗುಂಡ ಬಸವಣ್ಣ ರಥೋತ್ಸವ

01:18 PM Aug 09, 2017 | |

ಚಿತ್ತಾಪುರ: ತಾಲೂಕಿನ ದಂಡಗುಂಡ ಶ್ರೀ ಬಸವಣ್ಣ ದೇಗುಲದ ರಥೋತ್ಸವ ಶ್ರಾವಣ ಮಾಸದ ನಡುವಿನ ಸೋಮವಾರ
ಅದ್ಧೂರಿಯಾಗಿ ಜರುಗಿತು. ಗುಡ್ಡಗಾಡುಗಳ ಮಧ್ಯೆ ಇರುವ ದೇವಸ್ಥಾನದ ಎದುರು ನಡೆದ ರಥೋತ್ಸವದಲ್ಲಿ ಭಕ್ತರು ದಂಡಗುಂಡ ಬಸವಣ್ಣ ಮಹಾರಾಜಕೀ ಜೈ ಎನ್ನುವ ಜಯಘೋಷ್‌ ಮೊಳಗಿಸಿದರು. ದೇವಸ್ಥಾನದ ಶ್ರೀ ಸಂಗನಬಸವ ಶಿವಾಚಾರ್ಯರ ಸಾನ್ನಿಧ್ಯದಲ್ಲಿ ಭಕ್ತರು ಬಾಳೆಹಣ್ಣು, ಉತ್ತತ್ತಿಗಳನ್ನು ರಥಕ್ಕೆ ಎಸೆದು ಭಕ್ತಿ ಸಮರ್ಪಿಸಿದರು. ದೇವಸ್ಥಾನದಿಂದ 3 ಕಿಮೀ ವರೆಗೆ ಭಕ್ತರು
ದೇವರ ದರ್ಶನ ಪಡೆಯಲು ಹಾಗೂ ರಥೋತ್ಸವ ನೋಡಲು ಆಗಮಿಸಿದ್ದರಿಂದ ನೂಕು ನುಗ್ಗಲು ಉಂಟಾಗಿತ್ತು. ಬಾಜಾ ಭಜಂತ್ರಿ, ಡೊಳ್ಳು ಕುಣಿತ, ಪುರವಂತರ ಆಟ, ಬಣ್ಣಬಣ್ಣದ ಕೊಡೆಗಳು, ಧರ್ಮದ ಧ್ವಜಗಳು, ಉಚ್ಛಾಯಿ, ಸುಮಂಗಲಿಯರಿಂದ ಆರತಿ, ಕುಂಭ, ಭಜನೆ, ಗೀಗೀ ಪದ, ಜಾನಪದ ಕಲಾವಿದರ ವಿಶೇಷ ಹಾಡುಗಳು ಜನಮನ ಸೆಳೆದವು. ಕುಂಭ, ಕಳಸ, ಪಲ್ಲಕ್ಕಿ ಮೆರವಣಿಗೆ
ದೇವಸ್ಥಾನದಿಂದ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ದೇವಸ್ಥಾನಕ್ಕೆ ಬಂದು ತಲುಪಿತು. ದೇವಸ್ಥಾನದ ಸುತ್ತ ದೀಪಾಲಂಕಾರ ಮಾಡಲಾಗಿತ್ತು. ಹಣತೆ ದೀಪಗಳ ಸಾಲು ರಾರಾಜಿಸುತ್ತಿದ್ದವು. 100 ಕಿಮೀಗೂ ಹೆಚ್ಚು ದೂರದ ಪಟ್ಟಣ ಹಾಗೂ ಗ್ರಾಮಗಳಿಂದ ಕೆಲವು ಭಕ್ತರು ಪಾದಯಾತ್ರೆ ಮೂಲಕ ಆಗಮಿಸಿ ದೇವರಿಗೆ ನೈವೇದ್ಯ ಸಮರ್ಪಿಸಿದರು. ಗಂಗಸ್ಥಳ, ಕತೃ ಗದ್ದುಗೆಗೆ ರುದ್ರಾಭೀಷೇಕ,
ಸಹಸ್ರ ಬಿಲ್ವಾರ್ಚನೆ, ಭಜನೆಗಳು ಜರುಗಿದವು. ಎಂಎಲ್‌ಸಿ ಬಿ.ಜಿ. ಪಾಟೀಲ, ಮಾಜಿ ಶಾಸಕ ವಾಲ್ಮೀಕಿ ನಾಯಕ, ಬ್ಲಾಕ್‌ ಕಾಂಗ್ರೆಸ್‌
ಅಧ್ಯಕ್ಷ ಭೀಮಣ್ಣ ಸಾಲಿ, ತಾಪಂ ಅಧ್ಯಕ್ಷ ಜಗಣ್ಣಗೌಡ ರಾಮತೀರ್ಥ, ಚಂದ್ರಶೇಖರ ಅವಂಟಿ, ಮಹಾಂತಗೌಡ ಪಾಟೀಲ
ಹಾಗೂ ಕರ್ನಾಟಕ, ಆಂಧ್ರ, ಮಹಾರಾಷ್ಟ್ರ, ತಮಿಳುನಾಡು ರಾಜ್ಯದ ಭಕ್ತರು ರಥೋತ್ಸವಕ್ಕೆ ಆಗಮಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next