Advertisement

ಕುಣಿದ “ಕರಗ’, ಕಣ್ತುಂಬಿದ “ವೈಭೋಗ’

10:27 PM May 19, 2019 | Lakshmi GovindaRaj |

ಜಿಲ್ಲೆಯ ದೇವನಹಳ್ಳಿ ಹಾಗೂ ದೊಡ್ಡಬಳ್ಳಾಪುರದಲ್ಲಿ ಕರಗ ಮಹೋತ್ಸವ ಅದ್ಧೂರಿಯಾಗಿ ನೆರವೇರಿತು. ಈ ವೇಳೆ ಭಕ್ತರು ಮಲ್ಲಿಗೆ ಹೂವನ್ನು ಕರಗದ ಮೇಲೆ ಎಸೆಯುವ ಮೂಲಕ ಇಷ್ಟಾರ್ಥ ಸಿದ್ಧಿಗೆ ಪ್ರಾರ್ಥನೆ ಸಲ್ಲಿಸಿದರು. ವಿಶೇಷ ದೀಪಾಲಂಕಾರ ಕಣ್ಮನ ಸೆಳೆದರೆ, ರಂಗೋಲಿ ಬಿಡಿಸಿ ಮಹಿಳೆಯರು ಕರಗವನ್ನು ಸ್ವಾಗತಿಸಿದ್ದು ವಿಶೇಷವಾಗಿತ್ತು.

Advertisement

ದೇವನಹಳ್ಳಿ: ಶ್ರೀ ಮೌಕ್ತಿಕಾಂಬ ಅಮ್ಮನ ಕರಗ ಮಹೋತ್ಸವ ಅಂಗವಾಗಿ ಪಟ್ಟಣದ ಪರ್ವತಪುರ ರಸ್ತೆಯ ಮರಳುಬಾಗಿಲಿನಲ್ಲಿ 1.5 ಟನ್‌ ಹೂ ನಲ್ಲಿ ಕರಗಕ್ಕೆ ವಿಶೇಷ ನವರಂಗಿ ಅಲಂಕಾರ ಮಾಡಲಾಗಿತ್ತು.

1.5 ಟನ್‌ನ ಎಲ್ಲಾ ತರಹದ ಹೂ ಗಳನ್ನು ಅಲಂಕಾರದ ರೀತಿಯಲ್ಲಿ ರಸ್ತೆಯಲ್ಲಿ ಮಾಡಲಾಗಿತ್ತು. ಮಲ್ಲಿಗೆ 800ಕೆ.ಜಿ., ಚೆಂಡು ಹೂ 500ಕೆ.ಜಿ., ಕನಕಾಂಬರ 200ಕೆಜಿ ಹಾಗೂ ಬಟನ್ಸ್‌ ರೋಜ್‌ 250ಕೆ.ಜಿ., ಕೆಂದೇರಿ ಹೂ 200ಕೆ.ಜಿ. ಹಾಗೂ ಇತರೆ ಹೂಗಳನ್ನು ಹಾಕುವುದರ ಮೂಲಕ ವಿಜೃಂಭಣೆಯಿಂದ ಮಾಡಲಾಗಿತ್ತು.

ಕರಗಕ್ಕೆ ಸ್ವಾಗತ: ರಸ್ತೆಯಲ್ಲಿ ಕರಗ ನಡೆದಾಡಲು ಈ ಅಲಂಕಾರ ಮಾಡಲಾಗಿತ್ತು. ಒಂದೂವರೆ ಲಕ್ಷ ರೂ. ಗೂ ಅಧಿಕ ಮೌಲ್ಯದ ಬಿಡಿ ಹೂವುಗಳನ್ನು ರಸ್ತೆಯಲ್ಲಿ ಹಾಕಿ ರಂಗೋಲಿ ಚಿತ್ರದ ಆಕೃತಿಯ ಮೂಲಕ ಹೂ.ಗಳನ್ನು ಹಾಸಿ ಕರಗವನ್ನು ಸ್ವಾಗತಿಸಿದರು. ಇದಕ್ಕೆ ತಾಲೂಕು ಕರ್ನಾಟಕ ರಕ್ಷಣಾ ವೇದಿಕೆ ಗೌರವಾಧ್ಯಕ್ಷ ವಿ.ನಾರಾಯಣ್‌ ಮತ್ತು ಸ್ನೇಹಿತರು, ವೆಂಕಟರಾಯಪ್ಪ ಕುಟುಂಬ ನೇತೃತ್ವ ವಹಿಸಿದ್ದರು.

ಮಳೆ-ಬೆಳೆಯಾಗಲಿ: ಕರವೇ ಗೌರವಾಧ್ಯಕ್ಷ ವಿ.ನಾರಾಯಣ್‌ ಮಾತನಾಡಿ, ಸತತ 6ನೇ ವರ್ಷಗಳಿಂದ ಕರಗ ಪ್ರಯುಕ್ತ ಹೂವಿನ ಅಲಂಕಾರ ಮಾಡಿ ಕರಗ ನಡೆದಾಡುವಂತೆ ಮಾಡಲಾಗುತ್ತಿದೆ. ತಾಯಿ ಮೌಕ್ತಿಕಾಂಬ ಬರಗಾಲದಿಂದ ತತ್ತರಿಸಿರುವ ರೈತರಿಗೆ ಉತ್ತಮ ಮಳೆಯನ್ನು ಕರುಣಿಸಿ, ಸಮೃದ್ಧ ಜೀವನ ಸಾಗಿಸುವಂತೆ ಆಗಲಿ ಎಂದು ಪ್ರಾರ್ಥಿಸಿದರು.

Advertisement

ಇದೇ ವೇಳೆ ವೆಂಕಟರಾಯಪ್ಪ, ವಿ.ಶ್ರೀನಿವಾಸ್‌, ವಿ.ನಾರಾಯಣಸ್ವಾಮಿ, ವಿ. ಗೋಪಾಲ್‌, ವಾಸು, ಮಂಜುನಾಥ್‌, ಟೌನ್‌ ಬಿಜೆಪಿ ಅಧ್ಯಕ್ಷ ಮಂಜುನಾಥ್‌ ಇದ್ದರು. ಕರಗ ಹೊತ್ತ ಪೂಜಾರಿ ರವಿಕುಮಾರ್‌ ಸುಮಾರು ಹತ್ತು ನಿಮಿಷ ಹೂವಿನ ಮೇಲೆ ನೃತ್ಯ ಮಾಡಿದರು. ಇದನ್ನು ನೋಡಿ ನೆರೆದಿದ್ದ ಜನ ಪುಳಕಿತಗೊಂಡು ಗೋವಿಂದ-ಗೋವಿಂದ ಎಂದು ಪಠಿಸಿದರು.

ನೀರಗಂಟಿ ಪಾಳ್ಯ ಮತ್ತು ಅಕ್ಕುಪೇಟೆ ತಿಗಳ ಸಮುದಾಯದ ಮುಖಂಡರಿಂದ ಕರಗ ಮಹೋತ್ಸವದ ಅಂಗವಾಗಿ 300ಕೆ.ಜಿ. ಹೂಗಳಲ್ಲಿ ತ್ರಿಶೂಲ, ನವಿಲು, ಸ್ವಾಸ್ಥಿಕ್‌, ಓಂ, ಇತರೆ ವಿನ್ಯಾಸದ ಚಿತ್ರ ಮಾಡಲಾಗಿತ್ತು. ಕೋಟಿ ದ್ವಾರದಿಂದ ಚಿಕ್ಕಕೆರೆ ತನಕ ಹೂವಿನ ವಿನ್ಯಾಸ ಮಾಡಿದ್ದರು. ಮಲ್ಲಿಗೆ 80ಕೆಜಿ, ಚೆಂಡು ಹೂ. 60ಕೆ.ಜಿ., ಗುಲಾಬಿ 40ಕೆ.ಜಿ., ಗೆನ್ನೇರಿ 60ಕೆ.ಜಿ., ಹಳದಿ ಬಣ್ಣದ ಚೆಂಡು ಹೂ 50ಕೆ.ಜಿ., ಪತ್ರೆ 10 ಕೆ.ಜಿ. ಹೂಗಳಿಂದ ಅಲಂಕರಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next