Advertisement

Admission ಪ್ರಚಾರಕ್ಕೆ ವಿದ್ಯಾರ್ಥಿನಿಯರಿಂದ ಡ್ಯಾನ್ಸ್!: ಕಾಲೇಜಿಗೆ ನೋಟಿಸ್

09:19 PM Mar 15, 2024 | Team Udayavani |

ಬೀದರ್ : ಕಾಲೇಜು ಅಡ್ಮಿಷನ್ ಪ್ರಚಾರದ (ಬ್ರ್ಯಾಂಡಿಂಗ್) ಸಂಬಂಧ ವಿದ್ಯಾರ್ಥಿನಿಯರನ್ನು ಸಾರ್ವಜನಿಕವಾಗಿ ರಸ್ತೆ ಮೇಲೆ ನೃತ್ಯ ಮಾಡಲು ಬಳಸಿಕೊಂಡಿರುವ ಹಿನ್ನೆಲೆಯಲ್ಲಿ ಬೆಂಗಳೂರಿನ ಕೆ-12 ಟ್ಯಾಪ್ ರೂಟ್ ಶಿಕ್ಷಣ ಸಮೂಹ ಸಂಸ್ಥೆ ನಡೆಸುತ್ತಿರುವ ನಗರದ ಮಾತೆ ಮಾಣಿಕೇಶ್ವರಿ ಪಿಯು ಕಾಲೇಜಿಗೆ ಡಿಡಿಪಿಯು ಶೋಕಾಸ್ ನೋಟಿಸ್ ಜಾರಿ ಮಾಡಿದ್ದಾರೆ.

Advertisement

ಮಹಾ ಶಿವರಾತ್ರಿಯಂದು ನಗರದ ಪಾಪನಾಶ ಮಂದಿರದ ಪರಿಸರದಲ್ಲಿ ಕಾಲೇಜಿನ ವಿದ್ಯಾರ್ಥಿನಿಯರ ತಂಡ ಟೀ- ಶರ್ಟ್ ಹಾಗೂ ಜೀನ್ಸ್ ಸಮವಸ್ತ್ರ ತೊಟ್ಟು ಸಮೂಹ ನೃತ್ಯ ಮಾಡಿತ್ತು. ಕಾಲೇಜಿನಲ್ಲಿ ಪ್ರವೇಶ ಪಡೆಯುವ ಸಂಬಂಧವಾಗಿ ದೇವಸ್ಥಾನಕ್ಕೆ ಬರುವ ಭಕ್ತರ ಗಮನ ಸೆಳೆಯಲು ವಿದ್ಯಾರ್ಥಿನಿಯರಿಗೆ ನೃತ್ಯಕ್ಕೆ ಬಳಸಿಕೊಳ್ಳಲಾಗಿತ್ತು. ಇದರ ಫೋಟೋ, ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಕಾಲೇಜಿನ ಪ್ರವೇಶ ಪ್ರಚಾರಕ್ಕಾಗಿ ವಿದ್ಯಾರ್ಥಿನಿಯರಿಗೆ ಈ ರೀತಿ ಬಳಸಿಕೊಂಡಿರುವುದಕ್ಕೆ ಆಕ್ರೋಶ ವ್ಯಕ್ತವಾಗಿತ್ತು.

ಹಾಗಾಗಿ ಕಾಲೇಜಿನ ಪ್ರಾಚಾರ್ಯರಿಗೆ ಡಿಡಿಪಿಯು ಶೋಕಾಸ್ ನೋಟಿಸ್ ಜಾರಿ ಮಾಡಿ, ಲಿಖಿತ ಉತ್ತರ ಕೇಳಿದ್ದಾರೆ. ಮಾ.11ರಂದು ಸಾಮಾಜಿಕ ತಾಣಗಳಲ್ಲಿ ಗಮನಿಸಿದ ವಿಡಿಯೋದಲ್ಲಿ ಕಾಲೇಜಿನ ವಿದ್ಯಾರ್ಥಿಗಳು ಪಾಪನಾಶ ಮಂದಿರದಲ್ಲಿ ಖಾಸಗಿಯಾಗಿ ಡ್ಯಾನ್ಸ್ ಮಾಡಿರುವುದು ಕಂಡುಬಂದಿದೆ.

ಈ ಕಾರ್ಯಕ್ರಮ ನಡೆಸಲು ಇಲಾಖೆ ಅಥವಾ ಸಕ್ಷಮ ಪ್ರಾಧಿಕಾರದಿಂದ ಅನುಮತಿ ಪಡೆದಿಲ್ಲ. ಸಾರ್ವಜನಿಕವಾಗಿ ವಿಶೇಷವಾಗಿ ವಿದ್ಯಾರ್ಥಿನಿಯರನ್ನು ಇಂತಹ ಕಾರ್ಯಕ್ರಮಕ್ಕೆ ಬಳಸಿರುವುದು ನಿಯಮಬಾಹಿರವಾಗಿದೆ. ಈ ಸಂಬಂಧ ಜಾರಿಗೊಳಿಸಿದ ಶೋಕಾಸ್ ನೋಟಿಸ್‌ಗೆ ಮಾ. 16 ರೊಳಗೆ ಉತ್ತರ ನೀಡಬೇಕು. ಇಲ್ಲದಿದ್ದರೆ ಕಾಲೇಜಿನ ವಿರುದ್ಧ ಕ್ರಮಕ್ಕಾಗಿ ಮೇಲಾಧಿಕಾರಿಗಳಿಗೆ ಶಿಫಾರಸ್ಸು ಮಾಡಲಾಗುವುದು ಎಂದು ಎಚ್ಚರಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next