Advertisement
60 ಮಂದಿ ಹಾರ್ಮೋನಿಯಂ ಕಲಾವಿದರು ಅಂತಾರಾಷ್ಟ್ರೀಯ ಖ್ಯಾತಿಯ ಹಾರ್ಮೋನಿಯಂ ವಾದಕ ಡಾ| ರವೀಂದ್ರ ಕಾಕೋಟಿ ಮತ್ತು ತಬಲಾವಾದಕ ಡಾ|ಉದಯ ರಾಜ್ ಅವರ ಜತೆ ಏಕಕಾಲದಲ್ಲಿ ಹಾರ್ಮೋನಿಯಂ ನುಡಿಸಿ ನೆರೆದಿದ್ದವರನ್ನು ಮಂತ್ರಮುಗ್ಧಗೊಳಿಸಿದರು. ಭಾರ್ಗವಿ ಆರ್ಟ್ಸ್ ಆ್ಯಂಡ್ ಡ್ಯಾನ್ಸ್ ಅಕಾಡೆಮಿಯ 40 ಮಂದಿ ಕಲಾವಿದರು ನೃತ್ಯ ಪ್ರದರ್ಶನ ನೀಡಿದರು. ನಾದನಮನ ಸಲ್ಲಿಸಿದ ಅನಂತರ ಕಲಾವಿದರು ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರಿಗೆ ಗೌರವ ಸಲ್ಲಿಸಿದರು.
ಆಶೀರ್ವಚನ ನೀಡಿದ ವಿದ್ಯಾಧೀಶತೀರ್ಥ ಶ್ರೀಪಾದರು, ನನ್ನ ಪರ್ಯಾಯದ ಅವಧಿಯಲ್ಲಿ ಇಷ್ಟು ಅಪೂರ್ವವಾದ ಕಾರ್ಯಕ್ರಮ ನಡೆದಿರಲಿಲ್ಲ. 60 ಹಾರ್ಮೋನಿಯಂ ಕಲಾವಿದರು ಕೃಷ್ಣನ ವಿಶ್ವರೂಪವನ್ನೇ ಕಣ್ಣಮುಂದೆ ಸೃಷ್ಟಿಸಿದಂತಾಗಿದೆ. ಇದೊಂದು ಅಪೂರ್ವ ಗಾನ ಸಮ್ಮೇಳನ. 60 ಸಂಗೀತ ಪರಿಕರಗಳಿದ್ದರೂ ಏಕಕಾಲದಲ್ಲಿ ಒಂದೇ ನಾದ ಹೊರ ಹೊಮ್ಮುತ್ತದೆ. ಇದು ಸಮಾಜಕ್ಕೂ ಏಕತೆಯ ಸಂದೇಶ ಸಾರುವಂತಿದೆ ಎಂದು ಹೇಳಿದರು. ಕನ್ನಡ ಸಾಹಿತ್ಯ ಪರಿಷತ್‌ನ ಮಾಜಿ ಅಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು, ದ.ಕ. ಜಿಲ್ಲಾ ಕಸಾಪ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಉದ್ಯಮಿ ರಂಜನ್ ಕಲ್ಕೂರ, ರೋಟರಿ ಮಣಿಪಾಲ ಟೌನ್‌ನ ಎನ್.ಅಡಿಗ, ಸುರಭಿ ಸೌಂಡ್ಸ್ ಆ್ಯಂಡ್ ಲೈಟ್ಸ್‌ನ ದಾಮೋದರ ಭಾಗವತ, ಭಾರ್ಗವಿ ನಿರ್ದೇಶಕ ಶ್ರೀಕಾಂತ್ ಉಪಾಧ್ಯಾಯ, ಟಿ.ರಂಗ ಪೈ ಉಪಸ್ಥಿತರಿದ್ದರು. ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಮಂಜುನಾಥ ಉಪಾಧ್ಯ ಸ್ವಾಗತಿಸಿ ಆರ್‌ಜೆ ಪ್ರಸನ್ನ ಕಾರ್ಯಕ್ರಮ ನಿರ್ವಹಿಸಿದರು.