ವಿಜಯಪುರ: ಪ್ರಧಾನ ಮಂತ್ರಿ ಗುಂಪು ಮನೆ ಯೋಜನೆಯ 1493 ಕಾಮಗಾರಿಯಲ್ಲಿ ಮೊದಲ ಹಂತದಲ್ಲಿ 600 ಮನೆ ಫಲಾನುಭವಿಗಳಿಗೆ ಹಂಚಲು ತ್ವರಿತವಾಗಿ ಕಾಮಗಾರಿ ಪೂರ್ಣಗೊಳಿಸುವಂತೆ ಜಿಲ್ಲಾಧಿಕಾರಿ ಡಾ| ವಿ.ಬಿ. ದಾನಮ್ಮನವರ ಅಧಿಕಾರಿಗಳಿಗೆ ಸೂಚಿಸಿದರು.
ನಗರದ ಅಥಣಿ ರಸ್ತೆಯಲ್ಲಿ ಅಲ್ ಅಮೀನ್ ಕಾಲೇಜು ಹಿಂಭಾಗದಲ್ಲಿ ನಿರ್ಮಾಣ ಹಂತದಲ್ಲಿರುವ ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಜಿ ಪ್ಲಸ್ 1 ಮಾದರಿಯ ಗುಂಪು ಮನೆಗಳ ನಿರ್ಮಾಣ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಅವರು ಈ ಸೂಚನೆ ನೀಡಿದರು.
ಸರ್ಕಾರದ ಮಹ್ವಾಕಾಂಕ್ಷೆ ಯೋಜನೆಯ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕು. ಅಲ್ಲದೇ ತ್ವರಿತವಾಗಿ ಕಾಮಗಾರಿ ಮುಗಿಸಿ ಫಲಾನುಭವಿಗಳಿಗೆ ಹಂಚಿಕೆ ಮಾಡಲು ಸಿದ್ಧಗೊಳಿಸುವಂತೆ ಸೂಚಿದರು.
ಕಾಮಗಾರಿ ಗುಣಮಟ್ಟದ ವಿಷಯದಲ್ಲಿ ಯಾವುದೇ ರಾಜಿ ಇರುವುದಿಲ್ಲ. ಪರಿಶೀಲನೆ ವೇಳೆ ವ್ಯತ್ಯಾಸ ಕಂಡು ಬಂದಲ್ಲಿ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಲು ಕ್ರಮ ಕೈಗೊಳ್ಳಲಾಗುತ್ತದೆ. ಹೀಗಾಗಿ ಸದರಿ ಕಾಮಗಾರಿಯ ಪ್ರತಿ ಹಂತದಲ್ಲಿ ಮೂರನೇ ವ್ಯಕ್ತಿಯಿಂದ ಸಾಮಗ್ರಿಗಳ ಗುಣಮಟ್ಟ ಪರೀಕ್ಷಿಸಲು ಹಾಗೂ ಗುಣಮಟ್ಟ ಖಾತ್ರಿ ಪಡಿಸಿಕೊಳ್ಳುವಂತೆ ಪಾಲಿಕೆಯ ತಾಂತ್ರಿಕ ವಿಭಾಗದ ಸಿಬ್ಬಂದಿಗೆ ಸೂಚಿಸಿದರು.
ಈಗಾಗಲೇ ಕಾಮಗಾರಿಯು ಪ್ರಗತಿಯಲ್ಲಿದ್ದು ಆಯ್ಕೆಯಾದ ಫಲಾನುಭವಿಗಳು ತಮ್ಮ ಪಾಲಿನ ವಂತಿಗೆ ಹಣವನ್ನು ಪಾಲಿಕೆಗೆ ಭರಿಸಲು ಹಾಗೂ ಸರ್ಕಾರದ ಯೋಜನೆ ಸದ್ಬಳಕೆಗೆ ಮಾಧ್ಯಮಗಳ ಮೂಲಕ ಫಲಾನುಭವಿಗಳಿಗೆ ಮಾಹಿತಿ ನೀಡುವಂತೆ ಸೂಚಿಸಿದರು.
ಸಾಮಾನ್ಯ ವರ್ಗದ ಜನರಿಗೆ ಕೇಂದ್ರ ಸರ್ಕಾರದಿಂದ 1.50 ಲಕ್ಷ ರೂ. ಹಾಗೂ ರಾಜ್ಯ ಸರ್ಕಾರದಿಂದ 1.20 ಲಕ್ಷ ರೂ. ಸಹಾಯಧನ ಸಿಗಲಿದೆ. ಅದೇ ರೀತಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವರ್ಗದ ಜನರಿಗೆ ಕೇಂದ್ರ ಸರ್ಕಾರದಿಂದ 1.50 ಲಕ್ಷ ರೂ. ಹಾಗೂ ರಾಜ್ಯ ಸರ್ಕಾರದಿಂದ 2 ಲಕ್ಷ ರೂ. ಸಹಾಯಧನ ಸಿಗಲಿದೆ ಎಂದು ಪಾಲಿಕೆ ಆಯುಕ್ತ ವಿಜಯಕುಮಾರ ಮೆಕ್ಕಳಕಿ ಜಿಲ್ಲಾಧಿಕಾರಿಗಳಿಗೆ ವಿವರ ನೀಡಿದರು.
ಪಾಲಿಕೆ ಕಾರ್ಯಪಾಲಕ ಅಭಿಯಂತರ ಡೊಳ್ಳಿನ, ಸಹಾಯಕ ಕಾರ್ಯಪಾಲಕ ಅಭಿಯಂತರ ರಶ್ಮಿ ಮಾಲಗಾವಿ, ಶೇಖರ ಮಾಳಿ ಸೇರಿದಂತೆ ಇತರರು ಇದ್ದರು.