Advertisement

ಮುಖಂಡನಿಗೆ ದಮಕಿ ಹಾಕಿದ ಶಾಸಕರ ಬೆಂಬಲಿಗನ ಬಂಧನ

12:04 PM Feb 07, 2017 | |

ಬೆಂಗಳೂರು: ಹಣಕಾಸು ವಿಚಾರವಾಗಿ ಕಾಂಗ್ರೆಸ್‌ ಮುಖಂಡನಿಗೆ ಜೀವ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಯಲಹಂಕದ ಬಿಜೆಪಿ ಶಾಸಕ ಎಸ್‌.ಆರ್‌.ವಿಶ್ವನಾಥ್‌ ಅವರ ಬೆಂಬಲಿಗನನ್ನು ಯಲಹಂಕ ಪೊಲೀಸರು ಸೋಮವಾರ ಬಂಧಿಸಿದ್ದಾರೆ.

Advertisement

ನಾಗಶೆಟ್ಟಿಹಳ್ಳಿ ನಿವಾಸಿ ಸತೀಶ್‌ ಬಂಧಿತ ಆರೋಪಿ. ಕೆಲ ದಿನಗಳ ಹಿಂದೆ ಸ್ಥಳೀಯ ಕಾಂಗ್ರೆಸ್‌ ಮುಖಂಡ ಟಾಟಾ ರಮೇಶ್‌ ಎಂಬುವರಿಗೆ ಸತೀಶ್‌ ಬೆದರಿಕೆ ಹಾಕಿದ್ದ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಆತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.  ಯಲಹಂದಲ್ಲಿ ಸತೀಶ್‌ ರಿಯಲ್‌ ಎಸ್ಟೇಟ್‌ ವ್ಯವಹಾರ ಮಾಡಿಕೊಂಡಿದ್ದು, ಭೂ ವ್ಯವಹಾರ ವಿಚಾರವಾಗಿ ಟಾಟಾ ರಮೇಶ್‌ ಜತೆ ಜಗಳವಾಗಿತ್ತು. ಈ ಹಿನ್ನೆಲೆಯಲ್ಲಿ ರಮೇಶ್‌ಗೆ ಸತೀಶ್‌ ಬೆದರಿಕೆ ಹಾಕಿದ್ದರು ಎನ್ನಲಾಗಿದೆ.

ಕಡಬಗೆರೆ ಶ್ರೀನಿವಾಸ್‌ ಘಟನೆ ತಳುಕು: ಈ ಮಧ್ಯೆ ದಾಸನಪುರ ಎಪಿಎಂಸಿ ಅಧ್ಯಕ್ಷ ಶ್ರೀನಿವಾಸ್‌ ಮೇಲೆ ನಡೆದ ಗುಂಡಿನ ದಾಳಿ ಪ್ರಕರಣದಲ್ಲಿ ಸತೀಶ್‌ನನ್ನು ಬಂಧಿಸಲಾಗಿದೆ ಎಂಬ ಮಾತುಗಳು ಕೇಳಿ ಬಂದಿದ್ದವು. ಅದರೆ, ಇದನ್ನು ತಳ್ಳಿಹಾಕಿರುವ ಈಶಾನ್ಯ ವಿಭಾಗದ ಡಿಸಿಪಿ ಹರ್ಷ, ಸತೀಶ್‌ ಬಂಧನಕ್ಕೂ ಶ್ರೀನಿವಾಸ್‌ ಮೇಲಿನ ಶೂಟೌಟ್‌ ಪ್ರಕರಣಕ್ಕೂ ಸಂಬಂಧವಿಲ್ಲ. ಕಾಂಗ್ರೆಸ್‌ ಮುಖಂಡ ಟಾಟಾ ರಮೇಶ್‌ ಎಂಬುವರಿಗೆ ಸತೀಶ್‌ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿದೆ. ಶೂಟೌಟ್‌ ಪ್ರಕರಣದಲ್ಲಿ ಯಾರೊಬ್ಬರನ್ನೂ ಇನ್ನೂ ಬಂಧಿಸಿಲ್ಲ ಎಂದು ಅವರು ತಿಳಿಸಿದ್ದಾರೆ.

ನನಗೆ ಸಂಬಂಧ ಇಲ್ಲ ಎಂದ ವಿಶ್ವನಾಥ್‌ 
ಸತೀಶ್‌ ಬಂಧನದ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಶಾಸಕ ವಿಶ್ವನಾಥ್‌, ಸತೀಶ್‌ ಹಲವು ವರ್ಷಗಳಿಂದ ನನಗೆ ಪರಿಚಿತರು. ಸಾರ್ವಜನಿಕ ಜೀವನದಲ್ಲಿರುವವರಿಗೆ ಹಲವರು ಬೆಂಬಲಿಗರಿರುತ್ತಾರೆ. ಆದರೆ, ಸತೀಶ್‌ ಬಂಧನಕ್ಕೂ ನನಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದಾರೆ. ಅಲ್ಲದೆ, ಎಪಿಎಂಸಿ ಅಧ್ಯಕ್ಷ ಶ್ರೀನಿವಾಸ್‌ ಅವರು ಬಿಜೆಪಿಯಲ್ಲಿದ್ದಾಗ ನನ್ನ ಸಂಪರ್ಕದಲ್ಲಿದ್ದರು. ಅವರು ಪಕ್ಷ ತೊರೆದ ಬಳಿಕ ಸಂಪರ್ಕದಲ್ಲಿಲ್ಲ. ಶೂಟೌಟ್‌ ಪ್ರಕರಣದಲ್ಲಿ ಕೆಲವರು ನನ್ನ ವಿರುದ್ಧ ವಿನಾ ಕಾರಣ ಆರೋಪ ಮಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next