ಮದ್ದೂರು: ಹಲವು ದಿನಗಳಿಂದ ನಿರಂತರವಾಗಿ ಸುರಿದ ಮಳೆಯಿಂದ ಗ್ರಾಮೀಣ ಪ್ರದೇಶದ ರಸ್ತೆ ಗಳೂ ಸೇರಿದಂತೆ ಜಮೀನಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳು ಹಾಳಾಗಿದ್ದರೂ, ಅಗತ್ಯ ಕ್ರಮ ಕೈಗೊಳ್ಳದ ಅಧಿ ಕಾರಿಗಳು ಮತ್ತು ಚುನಾಯಿತ ಪ್ರತಿನಿಧಿಗಳ ವಿರುದ್ಧ ಸ್ಥಳೀಯರು, ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಾಲೂಕಿನ ಚನ್ನೇಗೌಡನದೊಡ್ಡಿ ಗ್ರಾಮದಿಂದ ಸಂಪರ್ಕ ಕಲ್ಪಿಸುವ ಬಸವನಗುಡಿ ರಸ್ತೆ ಮಾರ್ಗವಾಗಿ ಮೊಬ್ಬಳಗೆರೆ, ಗೆಜ್ಜಲಗೆರೆ, ಹನಕೆರೆ, ವಳಗೆರೆಹಳ್ಳಿ ಸೇರಿದಂತೆ ವಿವಿಧ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯು ಹಲವು ವರ್ಷಗಳಿಂದ ಅದ್ವಾನಗೊಂಡು, ರೈತರು ಸಂಕಷ್ಟ ಪರಿಸ್ಥಿತಿ ಅನುಭವಿಸುತ್ತಿದ್ದರೂ ಇದುವರಿಗೂ ದುರಸ್ತಿಗೆ ಮುಂದಾಗದಿರುವುದು ಶೋಚನೀಯವಾಗಿದೆ. ಕಳೆದ 15 ವರ್ಷಗಳ ಹಿಂದೆ ರಸ್ತೆಗೆ ಜಲ್ಲಿ, ಮಣ್ಣು ಹಾಕಿ ಸಂಚಾರಕ್ಕೆ ಅನುಕೂಲ ಕಲ್ಪಿಸಿದ್ದ ಕಾವೇರಿ ನೀರಾವರಿ ನಿಗಮ ಹಾಗೂ ಜಿಪಂ ಉಪವಿಭಾಗ ಇಲಾಖೆ ಅಧಿಕಾರಿಗಳು ಇಷ್ಟು ವರ್ಷ ಕಳೆದಿದ್ದರೂ, ಇತ್ತ ತಲೆಹಾಕದೆ ಮೌನಕ್ಕೆ ಶರಣಾಗಿರುವ ಜತೆಗೆ ನಿರ್ಲಕ್ಷ್ಯ ವಹಿಸಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ.
ಕೆಸರುಗದ್ದೆಯಾದ ರಸ್ತೆ: ಕಳೆದ ಹಲವು ದಿನದಿಂದ ಸುರಿದ ಮಳೆಯಿಂದ ರಸ್ತೆಯು ಕೆಸರುಗದ್ದೆ ಯಂತಾಗಿದ್ದು, ಪಿಕಪ್ ನಾಲೆಯ ನೀರು ರಸ್ತೆ ಯುದ್ಧಕ್ಕೂ ಹರಿಯುತ್ತಿದೆ. ಇದರಿಂದ ಆಳೆತ್ತರದ ಗುಂಡಿಗಳು ಬಿದ್ದು, ಸಂಚಾರಕ್ಕೂ ತೊಂದರೆಯಾಗಿದೆ. ಈ ಮಾರ್ಗದ ರಸ್ತೆಯಲ್ಲಿ ಸಂಚರಿಸಲು ಹೆಣಗಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಈ ಮಾರ್ಗದ ರಸ್ತೆಯಲ್ಲೇ ರೈತರು ಕಬ್ಬು, ಭತ್ತ, ರಾಗಿ ಬೆಳೆಗಳನ್ನು ಸಾಗಿಸುವ ಜತೆಗೆ ಮತ್ತು ಜಮೀನುಗಳಿಗೆ ತೆರಳುವ ಪ್ರಮುಖ ರಸ್ತೆಯಾಗಿದೆ. ಹಾಳಾಗಿರುವ ರಸ್ತೆಯಲ್ಲೇ ಜನ, ಜಾನುವಾರುಗಳು ಸಂಚರಿಸುವುದನ್ನು ಕಂಡಲ್ಲಿ ಎಂತಹವರಿಗೂ ಮನ ಕಲಕುವಂತಹ ಸ್ಥಿತಿ ನಿರ್ಮಾಣಗೊಂಡಿದೆ.
ಕ್ರಮ ಕೈಗೊಂಡಿಲ್ಲ: ರಸ್ತೆಯಲ್ಲಿ ಕಿತ್ತು ನಿಂತಿರುವ ಜಲ್ಲಿಕಲ್ಲು, ಆಳೇತ್ತೆರದ ಗುಂಡಿಗಳು, ರಸ್ತೆಯುದ್ದಕ್ಕೂ ಬೆಳೆದು ನಿಂತಿರುವ ಗಿಡಗಂಟೆಗಳು, ಎರಡೂ ಬದಿಯಲ್ಲಿ ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿರುವ ರೈತರಿಂದ ಕಿರಿದಾದ ರಸ್ತೆಯಲ್ಲೇ ಜಮೀನುಗಳಿಗೆ ತೆರಳಬೇಕಾದ ಸ್ಥಿತಿ ಬಂದಿದೆ. ಈ ಸಂಬಂಧ ರೈತರು ರಸ್ತೆ ದುರಸ್ತಿಗೊಳಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಮತ್ತು ಚುನಾಯಿತ ಪ್ರತಿನಿಧಿಗಳ ಗಮನಕ್ಕೆ ತಂದಿದ್ದರೂ ಕ್ರಮ ಕೈಗೊಂಡಿಲ್ಲ ಎಂಬ ಆರೋಪ ಕೇಳಿಬರುತ್ತಿದೆ. ಈ ಮಾರ್ಗದಲ್ಲಿ ಇತಿಹಾಸ ಪ್ರಸಿದ್ಧ ಪುರಾತನ ಬಸವನಗುಡಿ, ಶನಿಮಹಾತ್ಮ ದೇವಾಲಯಗಳಿದ್ದು ಹಾಗೂ ಮೊಬ್ಬಳಗೆರೆ ಮಾರ್ಗವಾಗಿ ಗೆಜ್ಜಲಗೆರೆ ಕೈಗಾರಿಕಾ ಪ್ರದೇಶಕ್ಕೂ ತೆರಳುವ ರಸ್ತೆಯು ಹಲವು ಅದ್ವಾನಗಳ ಜತೆಗೆ ಸಮಸ್ಯೆಗಳೊಟ್ಟಿಗೆ ಹಾಸಿ ಮಲಗಿದ್ದು, ಇಂತಹ ಪರಿಸ್ಥಿತಿಯಲ್ಲೇ ಸ್ಥಳೀಯ ರೈತರು ದಿನನಿತ್ಯ ಸಂಚರಿಸಬೇಕಾದ ದುಸ್ಥಿತಿ ಕಾಣಸಿಗುತ್ತಿದೆ.
ವಿಳಂಬ ಧೋರಣೆ: ಚುನಾವಣೆ ಸಂದರ್ಭಗಳಲ್ಲಿ ಗ್ರಾಮದ ರಸ್ತೆಗಳಿಗೆ ಭೇಟಿ ನೀಡಿ, ರೈತರಿಗೆ ಆಶ್ವಾಸನೆ ನೀಡಿ, ತೆರಳುವ ಜನಪ್ರತಿನಿಧಿಗಳು ಬಳಿಕ ಯಾವುದೇ ಕ್ರಮಕ್ಕೆ ಮುಂದಾಗದೆ ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ. ಕೆಲ ನಾಯಕರು ಭೇಟಿ ನೀಡಿ, ರಸ್ತೆ ವೀಕ್ಷಿಸಿ ತೆರಳಿದ್ದರೂ ಅದರ ದುರಸ್ತಿ ಕಾರ್ಯಕ್ಕೆ ಮುಂದಾಗದಿರುವುದು ಹಲವಾರು ಊಹಾಪೋಹಗಳಿಗೆ ಕಾರಣವಾಗಿದೆ. ಕೂಡಲೇ ಕಾವೇರಿ ನೀರಾವರಿ ನಿಗಮ ಮತ್ತು ಜಿಪಂ ಉಪವಿಭಾಗಾಧಿಕಾರಿಗಳು ಭೇಟಿ ನೀಡಿ, ರಸ್ತೆ ಪರಿಶೀಲನೆ ನಡೆಸುವ ಜತೆಗೆ ದುರಸ್ತಿ ಕಾರ್ಯಕ್ಕೆ ಮುಂದಾಗುವ ಮೂಲಕ ಈ ಭಾಗದ ರೈತರಿಗೆ ಅನುಕೂಲ ಕಲ್ಪಿಸಬೇಕಿದೆ. ತಪ್ಪಿದಲ್ಲಿ ಸ್ಥಳೀಯ ರೈತರೊಂದಿಗೆ ಪ್ರತಿಭಟನೆ ಹಾದಿ ಹಿಡಿಯುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಭಾಗದ ಮತ್ತು ಜಮೀನಿಗೆ ತೆರಳುವ ರಸ್ತೆಗಳು ಹಾಳಾಗಿದೆ. ಸರ್ಕಾರದಿಂದ ಅನುದಾನ ಬಿಡುಗಡೆಯಾಗದ ಹಿನ್ನೆಲೆಯಲ್ಲಿ ಕಾಮಗಾರಿ ವಿಳಂಬವಾಗಿದ್ದು, ಅನುದಾನ ಬಿಡುಗಡೆ ಬಳಿಕ ದುರಸ್ತಿ ಕಾರ್ಯಕ್ಕೆ ಕ್ರಮವಹಿಸಲಾಗುವುದು.
– ಶಿವಕುಮಾರ್ ನಾಯಕ್, ಎಇ, ಕಾವೇರಿ ನೀರಾವರಿ ನಿಗಮ, ಮದ್ದೂರು
ಹಲವು ವರ್ಷದಿಂದ ಬಸವನಗುಡಿ ರಸ್ತೆ ಅದ್ವಾನವಾಗಿದೆ. ಈ ಸಂಬಂಧ ಚುನಾಯಿತ ಪ್ರತಿನಿಧಿಗಳು ಮತ್ತು ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದರೂ ಕ್ರಮಕ್ಕೆ ನಿರ್ಲಕ್ಷ್ಯ ಅನುಸರಿಸಿದ್ದು, ಈ ಸಂಬಂಧ ರೈತರೊಂದಿಗೆ ಪ್ರತಿಭಟನೆ ಕೈಗೊಂಡು ಸರ್ಕಾರದ ಗಮನ ಸೆಳೆಯಲಾಗುವುದು
.-ಕೆ.ಪುಟ್ಟಸ್ವಾಮಿ, ಚನ್ನೇಗೌಡನದೊಡ್ಡಿ ಗ್ರಾಮದ ನಿವಾಸಿ
–ಎಸ್.ಪುಟ್ಟಸ್ವಾಮಿ