Advertisement

ಹದಗೆಟ್ಟ ರಸ್ತೆ: ಅಪಘಾತಕ್ಕೆ ಆಹ್ವಾನ

09:32 PM Oct 15, 2019 | Lakshmi GovindaRaju |

ದೇವನಹಳ್ಳಿ: ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ನಿರ್ಮಿಸಿದ ರಸ್ತೆಗಳು ಹದಗೆಟ್ಟು ಮಾರ್ಗ ಮಧ್ಯ ಗುಂಡಿಗಳು ಬಿದ್ದಿರುವುದರಿಂದ ನಗರದ ಜನ ಸಂಚರಿಸಲು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ನಗರದ ರಾಣಿ ಸರ್ಕಲ್‌ನಿಂದ ಹೊಸ ಬಸ್‌ ನಿಲ್ದಾಣದ ಗಿರಿಯಮ್ಮ ವೃತ್ತದ ವರೆಗೆ ಹಾಗೂ ಮಿನಿ ವಿಧಾನಸೌಧ ಮುಂಭಾಗ, ಹಳೇ ಬಸ್‌ ನಿಲ್ದಾಣ, ಶಿವ ಕುಮಾರಸ್ವಾಮಿ ವೃತ್ತ, ಡಿಮಾರ್ಟ್‌ ಮುಂಭಾಗ, ದೊಡ್ಡಬಳ್ಳಾಪುರ ರಸ್ತೆ ಹೀಗೆ ನಗರದ ಪ್ರಮುಖ ರಸ್ತೆಗಳಲ್ಲಿ ಗುಂಡಿಗಳು ಬಿದ್ದಿರುವುದುದರಿಂದ ವಾಹನ ಸವಾರರು ಪರಿತಪಿಸುವಂತಾಗಿದೆ.

Advertisement

ವಾಹನ ದಟ್ಟಣೆ: ಇತ್ತೀಚಿಗೆ ದೇವನಹಳ್ಳಿ ಹೆಚ್ಚು ಅಭಿವೃದ್ಧಿ ಹೊಂದುತ್ತಿದ್ದು, ಇಲ್ಲಿನ ಮೂಲ ಸೌಕರ್ಯಗಳ ಬಗ್ಗೆ ಅಧಿಕಾರಿಗಳು ಎಚ್ಚೆತ್ತುಕೊಂಡು ಜನ ಸಾಮಾನ್ಯರಿಗೆ ಅನುಕೂಲ ಮಾಡಿಕೊಡಬೇಕು. ರಸ್ತೆಗಳಲ್ಲಿ ವಾಹನ ದಟ್ಟಣೆ ಹೆಚ್ಚಾಗುತ್ತಿದ್ದು, ಬೈಪಾಸ್‌ ರಸ್ತೆ ನಿರ್ಮಿಸಬೇಕಾಗಿದೆ.

ಧೂಳಿನಿಂದ ಕೂಡಿರುವ ರಸ್ತೆ: ರಸ್ತೆಯ ಗುಂಡಿಯ ಅಕ್ಕಪಕ್ಕದಲ್ಲಿ ಧೂಳಿನಿಂದ ಕೂಡಿರುವ ರಸ್ತೆಯಲ್ಲಿ ದ್ವಿಚಕ್ರ ವಾಹನ ಸವಾರರ ಮೈಯೆಲ್ಲಾ ಧೂಳಾಗುತ್ತಿದ್ದು, ಕಣ್ಣಿಗೆ ಧೂಳಿನ ಕಣಗಳು ಬೀಳುವುದರಿಂದ ವಾಹನ ಸವಾರರು ಆಯಾ ತಪ್ಪಿ ಬೀಳುವ ಪರಿಸ್ಥಿತಿ ಉಂಟಾಗಿದೆ. ಈಗಾಗಲೇ ಹಲವಾರು ಬಾರಿ ಗುಂಡಿಗಳನ್ನು ಮುಚ್ಚಿಸುವಂತೆ ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತರಲಾಗಿದ್ದು, ಅಲ್ಲಲ್ಲಿ ಒಂದೆರಡು ಗುಂಡಿಗಳನ್ನು ಮುಚ್ಚಿ ಹಾಗೆ ಬಿಡುವುದರಿಂದ 2-3 ದಿನಗಳಲ್ಲಿ ಮುಚ್ಚಿಸಿರುವ ಗುಂಡಿಗಳು ಮತ್ತೇ ಕಿತ್ತು ಹೋಗುತ್ತಿವೆ. ಸದ್ಯ ಮಳೆ ಬೀಳುತ್ತಿರುವುದರಿಂದ ಗುಂಡಿಗಳಲ್ಲಿ ನೀರು ತುಂಬಿದ್ದು, ಒಂದು ವೇಳೆ ಗುಂಡಿಗೆ ವಾಹನದ ಚಕ್ರ ಇಳಿದರೆ ಸವಾರರು ಬಿದ್ದು ಆಸ್ಪತ್ರೆ ಸೇರುವುದು ಖಚಿತ ಎಂದು ಸ್ಥಳೀಯ ನಾಗರೀಕರು ಹೇಳುತ್ತಾರೆ.

ಅಧಿಕಾರಿಗಳ ನಿರ್ಲಕ್ಷ್ಯ: ರಾಣಿ ಸರ್ಕಲ್‌ ನಿಂದ ಮಿನಿ ವಿಧಾನಸೌಧದವರೆಗೆ ಬಹುತೇಕ ಕಚೇರಿಗಳು ಇಲ್ಲೇ ಇರುವುದರಿಂದ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಸೇರಿದಂತೆ ಎಲ್ಲಾ ಇಲಾಖೆಯ ಅಧಿಕಾರಿಗಳು ಈ ರಸ್ತೆಯನ್ನೇ ಅವಲಂಬಿಸಿದ್ದು, ರಸ್ತೆಯ ಗುಂಡಿಗಳನ್ನು ಮುಚ್ಚದಿರುವುದು ವಿಪರ್ಯಾಸವಾಗಿದೆ. ಈ ಬಗ್ಗೆ ಲೋಕೋಪಯೋಗಿ ಇಲಾಖೆಯ ಸಹಾಯಕ ಅಭಿಯಂತರ ಕೃಷ್ಣಪ್ಪ ಅವರನ್ನು ಸಂಪರ್ಕಿಸಿದರೆ, ನಮ್ಮ ಇಂಜಿನೀಯರ್‌ ಗಮನಕ್ಕೆ ತನ್ನಿ ಎಂದು ತಿಳಿಸುತ್ತಾರೆ. ಆದರೆ ಇಂಜಿನೀಯರ್‌ ನಾರಾಯಣಸ್ವಾಮಿ ಅವರು ಸಂಪರ್ಕಕ್ಕೆ ಸಿಗುತ್ತಿಲ್ಲ.

ಪೂರ್ಣಗೊಳ್ಳದ ಕಾಮಗಾರಿ: ಹತ್ತಾರು ವರ್ಷಗಳಿಂದ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ 2009-10ನೇ ಸಾಲಿನಲ್ಲಿ ರಾಷ್ಟ್ರೀಯ ಹೆದ್ದಾರಿ 4ರ ದಾಬಾಸ್‌ ಪೇಟೆಯಿಂದ ದೊಡ್ಡಬಳ್ಳಾಪುರ-ಸೂಲಿಬೆಲೆ ಮಾರ್ಗವಾಗಿ ಹೊಸಕೋಟೆ ವರೆಗೆ ನಾಲ್ಕು ಪಥದ ರಸ್ತೆ ನಿರ್ಮಾಣ ಮಾಡಲು ಕಾಮಗಾರಿ ಪ್ರಾರಂಭಿಸಿತ್ತು. ಆದರೆ ಇನ್ನೂ ಕಾಮಗಾರಿ ಪೂರ್ಣಗೊಳ್ಳದ ಕಾರಣ ಸಂಚಾರ ದಟ್ಟಣೆ ಹೆಚ್ಚಾಗಿದೆ.

Advertisement

ವರ್ತುಲ ರಸ್ತೆ ಕಾಮಗಾರಿ ಸ್ಥಗಿತ: ದೊಡ್ಡಬಳ್ಳಾಪುರ ರಸ್ತೆಯ ಶೆಟ್ಟೇರಹಳ್ಳಿಯಿಂದ ಸಾವಕನಹಳ್ಳಿ ಗ್ರಾಮದ ಮೂಲಕ ಸಹಾಯಕ ಸಾರಿಗೆ ಕಚೇರಿ ಹಿಂಭಾಗದ ಮಾರ್ಗವಾಗಿ ವಿಜಯಪುರ ರಸ್ತೆಯಿಂದ ಗೋಕರೆ ಮಾರ್ಗವಾಗಿ ಸೌತೇ ಗೌಡನಹಳ್ಳಿಯಿಂದ ರಾಷ್ಟ್ರೀಯ ಹೆದ್ದಾರಿ 207ರ ರಸ್ತೆ ಸಂಪರ್ಕ ಕಲ್ಪಿಸುವ ವರ್ತುಲ ರಸ್ತೆ (ರಿಂಗ್‌ ರೋಡ್‌) ನಿರ್ಮಾಣವಾದರೆ ಶೇ.50 ರಷ್ಟು ವಾಹನಗಳು ನಗರ ಸಂಪರ್ಕವಿಲ್ಲದೇ ಬೈಪಾಸ್‌ ಮೂಲಕ ಸಂಚಾರಿಸುತ್ತವೆ. ಆದರೆ ಕಾಮಗಾರಿ ಸ್ಥಗಿತಗೊಂಡು ಗಿಡ ಗಂಟೆಗಳು ಬೆಳೆದು ನಿಂತಿವೆ.

ರಸ್ತೆಗಳಲ್ಲಿ ಹೆಚ್ಚು ಗುಂಡಿ ಬಿದ್ದಿರುವುದರಿಂದ ವಾಹನ ಸಂಚಾರಕ್ಕೆ ಹೆಚ್ಚು ಸಮಸ್ಯೆಯಾಗುತ್ತಿದೆ. ಗುಂಡಿಗಳನ್ನು ತಪ್ಪಿಸಲು ಹೋದರೆ ಮತ್ತೂಂದು ವಾಹನ ಎಲ್ಲಿ ಬಂದು ಬಿಡುತ್ತದೆಯೋ ಎಂಬ ಭಯದಲ್ಲಿ ವಾಹನ ಚಾಲಾಯಿಸುವಂತಾಗಿದೆ. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಇದ್ದರೂ ದೇವನಹಳ್ಳಿ ಅಭಿವೃದ್ದಿಯಲ್ಲಿ ಹಿಂದುಳಿದಿದೆ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು.
-ಎ.ಎಸ್‌.ಇಬ್ರಾಹಿಂ, ರಾಜ್ಯ ಸಂಚಾಲಕ, ಮಾನವ ಹಕ್ಕುಗಳ ಜಾಗೃತಿ ದಳ

ಮಳೆಗಾಲ ಇರುವುದರಿಂದ ರಸ್ತೆ ಕಾಮಗಾರಿ ಮಾಡಲು ಆಗುತ್ತಿಲ್ಲ. ಮಳೆ ನಿಂತ ಕೂಡಲೇ ರಸ್ತೆ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು. ರಸ್ತೆಗಳಲ್ಲಿ ಗುಂಡಿ ಬಿದ್ದಿರುವುದರಿಂದ ಸಾರ್ವಜನಿಕರಿಗೆ ಹೆಚ್ಚಿನ ತೊಂದರೆಯಾಗುತ್ತಿದೆ. ಭಾರಿ ಗಾತ್ರದ ವಾಹನಗಳು ನಿತ್ಯ ಓಡಾಡುತ್ತಿರುವುದರಿಂದ ಗುಂಡಿಗಳು ಬಿಳುತ್ತಿದ್ದು, ಲೋಕೋಪಯೋಗಿ ಇಲಾಖೆ ರಸ್ತೆ ಅಭಿವೃದ್ಧಿ ಪಡಿಸಬೇಕಾಗಿದೆ.
-ಎಲ್‌.ಎನ್‌.ನಾರಾಯಣಸ್ವಾಮಿ, ಶಾಸಕ, ದೇವನಹಳ್ಳಿ ವಿಧಾನ ಸಭಾ ಕ್ಷೇತ್ರ

ಲೋಕೋಪಯೋಗಿ ಇಲಾಖೆಗೆ ಮೂರು ಬಾರಿ ಪತ್ರ ಬರೆಯಲಾಗಿದೆ. ಮೂರು ಬಾರಿ ಮೌಖೀಕವಾಗಿ ತಿಳಿಸಲಾಗಿದೆ. ಬಾರಿ ಪುರಸಭೆಯಿಂದ ದುರಸ್ಥಿ ಕೈಗೊಳ್ಳಲಾಗಿತ್ತು. ಆದರೆ ಬೈಪಾಸ್‌ ರಸ್ತೆ ಆದರೆ ಈ ಸಮಸ್ಯೆ ಉದ್ಭವಿಸುವುದಿಲ್ಲ.
-ಹನುಮಂತೇಗೌಡ.ಎಚ್‌.ಸಿ, ಪುರಸಭಾ ಮುಖ್ಯಾಧಿಕಾರಿ, ದೇವನಹಳ್ಳಿ

* ಎಸ್‌.ಮಹೇಶ್‌

Advertisement

Udayavani is now on Telegram. Click here to join our channel and stay updated with the latest news.

Next