Advertisement

ಕೆಟ್ಟು ಹೋದ ತಪಾಸಣೆ ಯಂತ್ರ

08:00 PM Nov 29, 2019 | mahesh |

ಮಹಾನಗರ: ಕಪ್ಪು ಹೊಗೆ ಉಗುಳುವ ವಾಹನಗಳ ವಿರುದ್ಧ ಕಾರ್ಯಾಚರಣೆ ನಡೆಸಲು ದಕ್ಷಿಣ ಕನ್ನಡ ಜಿಲ್ಲಾ ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿದ್ದ ಹೊಗೆ ಪರೀಕ್ಷಣಾ ವಾಹನ ಕೆಟ್ಟು ಹೋಗಿದ್ದು, ಆರು ತಿಂಗಳಿನಿಂದ ಕಾರ್ಯಾಚರಣೆ ನಡೆಸುತ್ತಿಲ್ಲ.

Advertisement

ಹೊಗೆ ಪರೀಕ್ಷಣಾ ಸಂಚಾರಿ ವಾಹನಕ್ಕೆ 2017ರ ಜನವರಿಯಲ್ಲಿ ಅಂದಿನ ಉಸ್ತುವಾರಿ ಸಚಿವ ರಮಾನಾಥ ರೈ ಅವರು ಚಾಲನೆ ನೀಡಿದ್ದರು. ಇದಾದ ಬಳಿಕ ಮಾಲಿನ್ಯ ನಿಯಂತ್ರಣ ಮಂಡಳಿಯ ಸಹಯೋಗದೊಂದಿಗೆ ಪೊಲೀಸ್‌ ಇಲಾಖೆ ಮತ್ತು ಸಾರಿಗೆ ಇಲಾಖೆ ಅಧಿಕಾರಿಗಳು ಅಧಿಕ ಹೊಗೆ ಉಗುಳುವ ವಾಹನಗಳ ವಿರುದ್ಧ ಕಾರ್ಯಾಚರಣೆ ನಡೆಸಿ ದಂಡ ವಿಧಿಸುತ್ತಿದ್ದರು.

ಮಾಲಿನ್ಯ ನಿಯಂತ್ರಣ ಅಗತ್ಯ
ಹೊಸದಿಲ್ಲಿಯಲ್ಲಿ ಒಂದೆಡೆ ವಾಯುಮಾಲಿನ್ಯ ಪ್ರಮಾಣ ಹೆಚ್ಚಾಗಿದ್ದು, ಇತ್ತ ಮಂಗಳೂರು ನಗರದಲ್ಲಿ ಸದ್ಯಕ್ಕೆ ಯಾವುದೇ ಅಪಾಯವಿಲ್ಲ. ಆದರೂ ಭವಿಷ್ಯದ ದೃಷ್ಟಿಯಿಂದ ನಗರದಲ್ಲಿ ವಾಯು ಮಾಲಿನ್ಯ ನಿಯಂತ್ರಣ ಮಾಡಲೇಬೇಕಾದ ಅನಿವಾರ್ಯವಿದೆ. ಅದರಲ್ಲಿಯೂ ಮಂಗಳೂರು ನಗರದಲ್ಲಿ ವರ್ಷದಿಂದ ವರ್ಷಕ್ಕೆ ವಾಹನಗಳ ಸಂಖ್ಯೆ ಹೆಚ್ಚಾಗುತ್ತಿದೆ. ವರ್ಷಕ್ಕೆ 37,000ಗಳಷ್ಟು ವಾಹನಗಳು ರಸ್ತೆಗಿಳಿಯುತ್ತಿವೆ. ಸಾರಿಗೆ ಇಲಾಖೆಯ ಮಾಹಿತಿಯ ಪ್ರಕಾರ ವರ್ಷಕ್ಕೆ ಸುಮಾರು 27 ಸಾವಿರಕ್ಕೂ ಹೆಚ್ಚಿನ ದ್ವಿಚಕ್ರ ವಾಹನಗಳು ಮಂಗಳೂರು ಸಾರಿಗೆ ಇಲಾಖೆಯಲ್ಲಿ ನೋಂದಣಿಯಾಗುತ್ತಿದೆ.

ಇನ್ನು ಒಂದು ಸಾವಿರ ಮೂರು ಚಕ್ರದ ವಾಹನ, 8 ಸಾವಿರ ಲಘು ವಾಹನ, ಒಂದು ಸಾವಿರ ಲಘು ಸರಕು ವಾಹನಗಳು ನೋಂದಣಿಯಾಗುತ್ತಿದೆ. ರಾಜ್ಯದಲ್ಲಿ 15 ವರ್ಷ ಮೀರಿದ ಪ್ರಯಾಣಿಕ ವಾಹನಗಳನ್ನು ನಿಷೇಧಿಸಿ ರಾಜ್ಯ ಸರಕಾರ ಈಗಾಗಲೇ ಸುತ್ತೋಲೆ ಹೊರಡಿಸಿದೆ. ಅದರಲ್ಲಿಯೂ 15 ವರ್ಷ ಮೀರಿದ ವಾಹನಗಳು ಹೆಚ್ಚಾಗಿ ಹೊಗೆ ಉಗುಳುತ್ತಿದ್ದು, ಇದರಿಂದ ಪರಿಸರಕ್ಕೆ ಮಾರಕ.

ಕೆಟ್ಟು ಹೋದ ಪ್ರಿಂಟಿಂಗ್‌ ಯಂತ್ರ
ಮಾಲಿನ್ಯ ನಿಯಂತ್ರಣ ಮಂಡಳಿಯ ಹೊಗೆ ತಪಾಸಣ ಯಂತ್ರದಲ್ಲಿ ಹೊಗೆ ಪ್ರಮಾಣದ ರೀಡಿಂಗ್‌ಗೆ ಅದರಲ್ಲಿರುವ ಡಿಸ್‌ಪ್ಲೇ ಹಾಳಾಗಿದೆ. ಜತೆಗೆ ಪ್ರಿಂಟಿಂಗ್‌ ಯಂತ್ರ ಕೆಟ್ಟುಹೋಗಿದೆ. ಇದೇ ಕಾರಣಕ್ಕೆ ಇದೀಗ ತಗಲುವ ವೆಚ್ಚದ ಬಗ್ಗೆ ಕೊಟೇಶನ್‌ ಹಾಕಲಾಗುತ್ತಿದ್ದು, ಕೆಲವೇ ದಿನಗಳಲ್ಲಿ ಯಂತ್ರ ಸರಿಹೋಗಲಿದೆ ಎನ್ನುತ್ತಾರೆ ಮಾಲಿನ್ಯ ನಿಯಂತ್ರಣ ಮಂಡಳಿತ ಅಧಿಕಾರಿಗಳು.

Advertisement

4 ಜಿಲ್ಲೆಗಳಿಗೆ ಒಂದೇ ವಾಹನ
ಮಾಲಿನ್ಯ ನಿಯಂತ್ರಣ ಮಂಡಳಿಗೆ ಒಳಪಟ್ಟಿರುವ ಹೊಗೆ ಪರೀಕ್ಷಣಾ ವಾಹನದಲ್ಲಿ ಪೆಟ್ರೋಲ್‌, ಡೀಸೆಲ್‌ ವಾಹನಗಳ ಹೊಗೆ ಪ್ರಮಾಣ ಪತ್ತೆ ಮಾಡುವ ವಿಧಾನ ಹೊಂದಿತ್ತು. ವಾರದಲ್ಲಿ ಒಂದು ದಿನ ಚಿಕ್ಕಮಗಳೂರು, ಮಂಗಳೂರು, ಉತ್ತರಕನ್ನಡ, ಉಡುಪಿ ಜಿಲ್ಲೆಗಳಿಗೆ ಈ ವಾಹನ ಸಂಚರಿಸಿ ಆ ವ್ಯಾಪ್ತಿಯ ಆರ್‌ಟಿಒ, ಟ್ರಾಫಿಕ್‌ ಪೊಲೀಸರ ಸಹಯೋಗದಲ್ಲಿ ಹೊಗೆ ತಪಾಸಣೆ ನಡೆಸಲು ನೆರವಾಗುತ್ತಿತ್ತು.

ಶೀಘ್ರ ಸರಿಹೋಗಲಿದೆ
ಜಿಲ್ಲೆಯ ಮಾಲಿನ್ಯ ನಿಯಂತ್ರಣ ಮಂಡಳಿಯ ಹೊಗೆ ಪರೀಕ್ಷಣಾ ವಾಹನ ಆರು ತಿಂಗಳುಗಳಿಂದ ಕೆಟ್ಟು ಹೋಗಿದೆ. ಅದೇ ಕಾರಣಕ್ಕೆ ನಗರದಲ್ಲಿ ವಾಹನಗಳ ಹೊಗೆ ತಪಾಸಣೆ ಮಾಡಲಾಗುತ್ತಿಲ್ಲ. ದುರಸ್ತಿಗೆ ಎಷ್ಟು ಹಣ ವ್ಯಯವಾಗಲಿದೆ ಎಂಬ ಕೊಟೇಶನ್‌ ಸಿದ್ಧವಾಗಿದ್ದು, ಕೆಲವು ದಿನಗಳಲ್ಲೇ ಯಂತ್ರ ಸರಿಹೋಗಲಿದೆ.
– ಜಯಪ್ರಕಾಶ್‌ ನಾಯಕ್‌, ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿ

-ನವೀನ್‌ ಭಟ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next