Advertisement

ನಿರ್ವಹಣೆ ಇಲ್ಲದೆ ಹದಗೆಟ್ಟ ಜಿಲ್ಲೆಯ ರಸ್ತೆಗಳು

10:07 AM Jul 29, 2019 | Suhan S |

ಕೋಲಾರ: ನಗರ ಸೇರಿ ಜಿಲ್ಲೆಯ ಬಹುತೇಕ ರಸ್ತೆಗಳು ಸಂಚಾರಕ್ಕೆ ಯೋಗ್ಯವಿಲ್ಲದಂತೆ ಹಾಳಾಗಿವೆ. ಮೊಣಕಾಲುದ್ದ ಗುಂಡಿಗಳು ಬಿದ್ದು ವಾಹನ ಸವಾರರಿಗೆ ಮೃತ್ಯುಕೂಪವಾಗಿವೆ.

Advertisement

ನಗರದಲ್ಲಿ ಹಾದು ಹೋಗಿರುವ ಲೋಕೋಪಯೋಗಿ ಇಲಾಖೆ ವ್ಯಾಪ್ತಿಯ ರಸ್ತೆಯಲ್ಲಿ ಹೆಜ್ಜೆ ಹೆಜ್ಜೆಗೂ ಗುಂಡಿಗಳು ಬಿದ್ದಿವೆ. ವಾಹನ ಸವಾರರು ಈ ಹೊಂಡಗಳನ್ನು ತಪ್ಪಿಸಿ ಸಂಚರಿಸುವುದೇ ದೊಡ್ಡ ಸವಾಲಾಗಿದೆ. ಜಿಲ್ಲಾ ಕೇಂದ್ರ ಮಾತ್ರವಲ್ಲದೆ, ಜಿಲ್ಲೆಯ ಬಹುತೇಕ ರಸ್ತೆಗಳು ಗುಂಡಿ ಬಿದ್ದು ಪ್ರಾಣಕ್ಕೆ ಕಂಟಕ ತರುತ್ತಿವೆ.

ರಸ್ತೆಯ ಅವ್ಯವಸ್ಥೆಯು ಪ್ರತಿ ನಿತ್ಯವೂ ಅಪಘಾತಗಳಿಗೆ ಕಾರಣವಾಗುತ್ತಿದೆ. ಕೆಲವು ಅಪಘಾತಗಳಲ್ಲಿ ಜನರು ಪ್ರಾಣಗಳನ್ನೇ ಕಳೆದುಕೊಳ್ಳುತ್ತಿದ್ದರೆ, ವಾಹನ ಸವಾರರು ಕೈ ಕಾಲು ಮುರಿದುಕೊಂಡು ಅಂಗವಿಕಲರಾಗುತ್ತಿದ್ದಾರೆ. ರಸ್ತೆ ದುರಸ್ತಿಪಡಿಸಲಾಗದೇ, ಗುತ್ತಿಗೆದಾರರಿಂದ ಸಮರ್ಪಕ ರಸ್ತೆ ನಿರ್ವಹಣೆ ಮಾಡಿಸುವಲ್ಲಿ ಲೋಕೋಪಯೋಗಿ ಇಲಾಖೆಯು ವಿಫ‌ಲವಾಗಿದೆ. ಕೆಲವು ರಸ್ತೆಗಳ ಅಗಲೀಕರಣಕ್ಕೆ ಮುಂದಾಗಿರುವುದು ಸಾರ್ವಜನಿಕರ ಟೀಕೆಗೆ ಗುರಿಯಾಗಿದೆ.

ಸರ್ಕಾರದಿಂದ ಬಾರದ ಅನುದಾನ: ಲೋಕೋಪಯೋಗಿ ಇಲಾಖೆ ಹಾಗೂ ಸ್ಥಳೀಯ ಸಂಸ್ಥೆಗಳು ರಸ್ತೆಗಳ ದುರಸ್ತಿಗಾಗಿ ಪ್ರಸ್ತಾವನೆ ಕಳುಹಿಸಿದ್ದರೂ ಸರ್ಕಾರ ಅನುದಾನ ಬಿಡುಗಡೆ ಮಾಡಲು ಮೀನಮೇಷ ಎಣಿಸುತ್ತಿರುವುದು ರಸ್ತೆಗಳ ಅವ್ಯವಸ್ಥೆಗೆ ಪ್ರಮುಖ ಕಾರಣ ಎನ್ನಲಾಗಿದೆ. ಕೆಲವು ರಸ್ತೆಗಳನ್ನು ಗುತ್ತಿಗೆದಾರರು ಮೂರು ನಾಲ್ಕು ವರ್ಷ ನಿರ್ವಹಣೆ ಮಾಡಬೇಕೆಂಬ ಕರಾರಿದ್ದರೂ, ಲೋಕೋಪಯೋಗಿ ಇಲಾಖೆಯ ಎಂಜಿನಿಯರ್‌ಗಳು ಗುತ್ತಿಗೆದಾರರ ಬಿಲ್ ಪಾಸಾಗುತ್ತಿದ್ದಾರೆ ಎಂಬ ದೂರುಗಳಿವೆ. ಇದರಿಂದ ಸಾರ್ವಜನಿಕರಿಗೆ ಸುಗಮ ಸಂಚಾರಕ್ಕೆ ಅಡ್ಡಿಯಾಗಿದೆ.

ಮಳೆಗೆ ಬಹಿರಂಗವಾಯ್ತು ಕಳಪೆ ಕಾಮಗಾರಿ: ಕೋಲಾರ ಜಿಲ್ಲೆಯ ಆರು ತಾಲೂಕುಗಳಲ್ಲಿ ಜಿಲ್ಲೆ, ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿ ವ್ಯಾಪ್ತಿಯ ಕೆಲವು ಮುಖ್ಯ ರಸ್ತೆಗಳನ್ನು ತಕ್ಕ ಮಟ್ಟಿಗೆ ಅಭಿವೃದ್ಧಿ ಪಡಿಸಲಾಗಿದೆ. ಆದರೂ ಜೋರು ಮಳೆ ಬಂದಲ್ಲಿ ಕಾಮಗಾರಿಗಳ ಅಸಲಿ ಬಣ್ಣ ಬಯಲಾಗುತ್ತದೆ. ಜಿಲ್ಲೆಯಲ್ಲಿ ಇತ್ತೀಚಿನ ವರ್ಷಗಳಲ್ಲಿ ಜೋರು ಮಳೆ ಸುರಿದಿಲ್ಲ. ಸುರಿಯುತ್ತಿರುವ ಜಡಿ ಮಳೆಗೆ ರಸ್ತೆಗಳು ಹಾಳಾಗುತ್ತಿರುವುದನ್ನು ಗಮನಿಸಿದರೆ, ರಸ್ತೆಯ ಗುಣಮಟ್ಟ ಇನ್ನೆಂತದ್ದಿರಬಹುದು ಎಂಬ ಅನುಮಾನ ಕಾಡುತ್ತದೆ.

Advertisement

ನಗರದಲ್ಲಿ ರಸ್ತೆ ಹೊಂಡಗಳ ಕುರಿತು ಟೀಕೆ ಟಿಪ್ಪಣಿಗಳು ಕೇಳಿ ಬಂದಾಗ ಮಾತ್ರ ಅಧಿಕಾರಿಗಳು ಎಚ್ಚೆತ್ತುಕೊಂಡವರಂತೆ ಒಂದೆರೆಡು ಟ್ರ್ಯಾಕ್ಟರ್‌ ಜಲ್ಲಿ ಪುಡಿ ತರಿಸಿ ತಾತ್ಕಾಲಿಕವಾಗಿ ಗುಂಡಿ ಮುಚ್ಚುತ್ತಾರೆ. ನಂತರ ಸ್ವಲ್ಪ ಮಳೆ ಮತ್ತು ಗಾಳಿಗೆ ಕೆಲವೇ ದಿನಗಳಲ್ಲಿ ರಸ್ತೆಯಲ್ಲಿ ಹೊಂಡ ಅನಾವರಣಗೊಂಡು ವಾಹನ ಸವಾರರನ್ನು ಕಾಡುತ್ತದೆ.

ವಿಐಪಿಗಳು ಬಂದಾಗ ಮಾತ್ರ ರಸ್ತೆ ದುರಸ್ತಿ: ಜಿಲ್ಲೆಗೆ ಅದರಲ್ಲೂ ನಗರ-ಪಟ್ಟಣ ಪ್ರದೇಶಕ್ಕೆ ವಿಐಪಿಗಳು ಬಂದಾಗ ಮಾತ್ರ ಅಧಿಕಾರಿಗಳು ಗುಂಡಿಗಳನ್ನು ಮುಚ್ಚಲು ಆಸಕ್ತಿ ತೋರುತ್ತಾರೆ. ಮೈತ್ರಿ ಸರ್ಕಾರ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯನ್ನು ಗ್ರಾಮ ವಾಸ್ತವ್ಯಕ್ಕೆ ಜನತೆ ಆಹ್ವಾನಿಸಿದ್ದರು. ಆದರೆ, ಅವರು ಈಗ ಅಧಿಕಾರ ಕಳೆದುಕೊಂಡಿರುವುದರಿಂದ ರಸ್ತೆಗಳ ದುರಸ್ತಿ ಭಾಗ್ಯ ಇಲ್ಲದಂತಾಗಿದೆ. ಉಸ್ತುವಾರಿ ಸಚಿವರಾಗಿದ್ದ ಕೃಷ್ಣಬೈರೇಗೌಡ ಜಿಲ್ಲೆಗೆ ಆಗಮಿಸುತ್ತಿದ್ದರಾದರೂ, ರಾಷ್ಟ್ರೀಯ ಹೆದ್ದಾರಿಯಲ್ಲಿ ಡಿ.ಸಿ. ಕಚೇರಿಗೆ ಬಂದು ತೆರಳುತ್ತಿದ್ದರಿಂದ ರಸ್ತೆಗಳ ಅವ್ಯವಸ್ಥೆ ಅವರ ಗಮನಕ್ಕೂ ಬರುತ್ತಿರಲಿಲ್ಲ.

ಗ್ರಾಮೀಣ ರಸ್ತೆಗಳ ಸ್ಥಿತಿ ಅಧೋಗತಿ: ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಗ್ರಾಮೀಣ ರಸ್ತೆಗಳ ಸಮಗ್ರ ಅಭಿವೃದ್ಧಿಗೆ ಕಿಂಚಿತ್ತು ಕಾಳಜಿ ತೋರುತ್ತಿಲ್ಲ, ಇದಕ್ಕೆ ಸರ್ಕಾರದ ಕುಂಭಕರ್ಣ ನಿದ್ರೆಯ ಧೋರಣೆ ಕಾರಣವಾಗಿದೆ. ಇದರಿಂದ ಗ್ರಾಮೀಣ ರಸ್ತೆಗಳ ಸ್ಥಿತಿಯಂತು ಶೋಚನೀಯವಾಗಿದೆ.

ಕಳೆದ ಆರೇಳು ವರ್ಷಗಳಿಂದ ಜಿಲ್ಲೆಯ ರಸ್ತೆಗಳಿಗೆ ಮೋಕ್ಷ ಸಿಕ್ಕಿಲ್ಲ. ರಸ್ತೆಗಳ ಅಧೋಗತಿಗೆ ಮಳೆಗಿಂತ ಕಳಪೆ ಕಾಮಗಾರಿಯೇ ಕಾರಣ. ಸರ್ಕಾರ ಲೋಪ ಸರಿಪಡಿಸುವ ಬದಲು ಗುತ್ತಿಗೆದಾರರ ಉದ್ದಾರಕ್ಕೆ, ಕಮಿಷನ್‌ ದಂಧೆಗೆ ಅವಕಾಶ ಕಲ್ಪಿಸಿರುವುದರಿಂದ ರಸ್ತೆಗಳು ಪಾಳು ಬೀಳುವಂತಾಗಿದೆ.

ಕೋಲಾರ ನಗರದ ರಸ್ತೆಗಳ ದುಸ್ಥಿತಿ:

ಕೋಲಾರ ನಗರದ ಕೋಲಾರ- ಬೆಂಗಳೂರು ಮುಖ್ಯ ರಸ್ತೆಯಲ್ಲಿ ಅಲ್ಲಲ್ಲಿ ಹಳ್ಳ ಬಿದ್ದಿದೆ. ಗಡಿಯಾರ ಗೋಪುರದಿಂದ ಬಸ್‌ ನಿಲ್ದಾಣದವರೆಗೂ ರಸ್ತೆಯಲ್ಲಿ ಸಾಕಷ್ಟು ಹಳ್ಳಗಳಿವೆ. ಜೋಡಿ ಟ್ಯಾಂಕ್‌ ಇರುವೆಡೆ ರಸ್ತೆ ದೊಡ್ಡ ಗಾತ್ರದ ಹೊಂಡವಾಗಿದ್ದು, ಜಲ್ಲಿ ಕಲ್ಲುಗಳು ಕಿತ್ತು ಬಂದಿದ್ದರೂ ದುರಸ್ತಿಗೆ ಅಧಿಕಾರಿಗಳು ಮನಸ್ಸು ಮಾಡುತ್ತಿಲ್ಲ. ಡೂಂಲೈಟ್ ವೃತ್ತದಿಂದ ಗಡಿಯಾರ ಗೋಪುರ ವೃತ್ತದವರೆಗೂ ಅಲ್ಲಲ್ಲಿ ಹಳ್ಳ ಬಿದ್ದಿದೆ. ನಚಿಕೇತ ನಿಲಯದ ಮುಂಭಾಗ ರಸ್ತೆ ಹೊಂಡ ಇರಲೇಬೇಕು ಎಂಬಂತಾಗಿದೆ. ಇದೇ ರಸ್ತೆಯಲ್ಲಿ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಂತು ರಸ್ತೆ ಎಲ್ಲಿದೆ ಎಂದೆ ಹುಡುಕುವಂತಾಗಿದೆ. ಈ ಹೊಂಡಗಳಲ್ಲಿ ಸ್ವಲ್ಪ ಮಳೆಗೂ ನೀರು ನಿಂತರೆ ವಾಹನ ಸವಾರರ ಪಾಲಿಗೆ ಅಪಾಯಕಾರಿಯಾಗಿ ಬಿಡುತ್ತದೆ.
ಶೀಘ್ರವೇ ಟೆಂಡರ್‌ ಕರೆದು ಕಾಮಗಾರಿಗೆ ಕಾರ್ಯಾದೇಶ:

ಜಿಲ್ಲೆಯಲ್ಲಿ ಜಿಲ್ಲಾ ಮುಖ್ಯ ರಸ್ತೆ 1223.75 ಕಿ.ಮೀ., ರಾಜ್ಯ ಹೆದ್ದಾರಿ 305 ಕಿ.ಮೀ. ಹಾದು ಹೋಗಿದೆ. ಪಿಡಬ್ಲ್ಯೂಡಿ ಇಲಾಖೆ 6 ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 271.67 ಕಿ.ಮೀ. ರಸ್ತೆಗಳ ಸುಧಾರಣೆಗೆ 15310 ಲಕ್ಷ ರೂ. ಯೋಜನೆ ಸಿದ್ಧಪಡಿಸಿದೆ. ಶೀಘ್ರವೇ ಟೆಂಡರ್‌ ಕರೆದು ಗುತ್ತಿಗೆದಾರರಿಗೆ ಕಾರ್ಯಾದೇಶ ನೀಡಲು ಉದ್ದೇಶಿಸಿದೆ. ಈ ಕಾಮಗಾರಿಗಳನ್ನು ಮಳೆಗಾಲಕ್ಕೆ ಮುಂಚೆ ಕೈಗೆತ್ತಿಕೊಂಡು ಗುಣಮಟ್ಟದ ಕಾಮಗಾರಿ ನಡೆಸದಿದ್ದರೆ ರಸ್ತೆಗಳು ಹಲವರನ್ನು ಬಲಿ ಪಡೆಯುತ್ತವೆ.
● ಕೆ.ಎಸ್‌.ಗಣೇಶ್‌
Advertisement

Udayavani is now on Telegram. Click here to join our channel and stay updated with the latest news.

Next