Advertisement

ವಿವಿಧೆಡೆ ಮರ, ತಡೆಗೋಡೆ ಬಿದ್ದು ಹಾನಿ

09:19 PM Jul 10, 2019 | Team Udayavani |

ಮಹಾನಗರ: ನಗರದ ಜನರು ಬಹು ದಿನಗಳಿಂದ ನಿರೀಕ್ಷಿಸುತ್ತಿದ್ದ ಧಾರಾಕಾರ ಮಳೆ ಮಂಗಳವಾರ ರಾತ್ರಿಯಿಂದ ಆರಂಭವಾಗಿದ್ದು, ಪರಿಣಾಮವಾಗಿ ನಗರದ ಕೆಲವು ಪ್ರದೇಶಗಳಲ್ಲಿ ಮರ ಬಿದ್ದು ಮನೆಗೆ ಹಾನಿ, ತಡೆ ಗೋಡೆ ಕುಸಿದು ಕೆಳ ಭಾಗದ ಮನೆಯ ಕೊಠಡಿಗೆ ಹಾನಿ, ರಸ್ತೆಗೆ ಮಣ್ಣು ಬಿದ್ದು ಟ್ರಾಫಿಕ್‌ ಜಾಮ್‌, ಮರ ಬಿದ್ದು ವಿದ್ಯುತ್‌ ಕಂಬಗಳಿಗೆ ಹಾನಿ ಮತ್ತಿತರ ಹಲವು ಅಹಿತಕರ ಘಟನೆಗಳು ಸಂಭವಿಸಿವೆ.

Advertisement

ಆಕಾಶಭವನದ ಆನಂದನಗರದಲ್ಲಿ ಮಂಗಳ ವಾರ ರಾತ್ರಿ ಜಯಶ್ರೀ ಅವರ ಮನೆ ಮೇಲೆ ಪಕ್ಕದ ಮನೆಯ ಆವರಣದಲ್ಲಿದ್ದ ಮರ ಬಿದ್ದು, ಅಡುಗೆ ಕೋಣೆ, ಬೆಡ್‌ ರೂಂಗಳಿಗೆ ಹಾನಿಯಾಗಿದೆ. ಯಾರಿಗೂ ಅಪಾಯ ಸಂಭವಿಸಿಲ್ಲ. ಅಗ್ನಿಶಾಮಕ ದಳದವರು ತೆರಳಿ ಮರವನ್ನು ತೆರವುಗೊಳಿಸಿದರು.

ಬುಧವಾರ ಬೆಳಗ್ಗೆ ಆಕಾಶಭವನದ ಪರಪಾದೆಯಲ್ಲಿ ಶುಭಾ ಅವರ ಮನೆಗೆ ಪಕ್ಕದ (ಹಿಂಬದಿ) ಗುಡಿಯೊಂದರ ತಡೆಗೋಡೆ ಕುಸಿದು ಬಿದ್ದು, ಶೌಚಾಲಯ ಕೊಠಡಿ ಮತ್ತು ಬೆಡ್‌ರೂಂಗೆ ಹಾನಿಯಾಗಿದೆ. ಈ ಎರಡೂ ಘಟನೆಗಳ ಸುದ್ದಿ ತಿಳಿದು ಸ್ಥಳೀಯ ಮಾಜಿ ಕಾರ್ಪೊರೇಟರ್‌ ದೀಪಕ್‌ ಪೂಜಾರಿ ಸ್ಥಳಕ್ಕೆ ತೆರಳಿ ಪಾಲಿಕೆಯ ಅಧಿಕಾ ರಿಗಳನ್ನು ಕರೆಸಿ ಪರಿಹಾರ ಕ್ರಮಗಳನ್ನು ಕೈಗೊಳ್ಳಲು ನೆರವಾದರು. ಅಗ್ನಿಶಾಮಕ ದಳದವರೂ ರಕ್ಷಣಾ ಕಾರ್ಯದಲ್ಲಿ ಸಹಕರಿಸಿದರು. ಎನ್‌ಡಿಆರ್‌ಎಫ್‌ ತಂಡ, ಪಾಲಿಕೆ ಕಂದಾಯ ಅಧಿಕಾರಿಗಳು, ಜೂ. ಎಂಜಿನಿಯರ್‌ ಯಶವಂತ್‌ ಸ್ಥಳಕ್ಕೆ ತೆರಳಿದ್ದರು.

ಪಡೀಲ್‌ ರಸ್ತೆಯಲ್ಲಿ ಕೆಸರು
ಪಡೀಲ್‌ ರೈಲ್ವೇ ಮೇಲ್ಸೇತುವೆ ಇರುವ ತಾಣ ದಲ್ಲಿ ಮಳೆಯಿಂದಾಗಿ ಮೇಲ್ಭಾಗದ ಮಣ್ಣು ರಸ್ತೆಗೆ ಬಿದ್ದ ಪರಿಣಾಮ ಬುಧವಾರ ಬೆಳಗ್ಗೆ ಸೇತುವೆಯ ಒಳ ಭಾಗದ ರಸ್ತೆಯಲ್ಲಿ ಕೆಸರು ತುಂಬಿತ್ತು.ಇದರಿಂದ ಸೇತುವೆಯ ಒಳಭಾಗದಲ್ಲಿ ಸಂಚರಿಸಲು ದ್ವಿಚಕ್ರ ವಾಹನ ಸವಾರರು ಪರದಾಡಿದರು.

ಬೈಕ್‌ ಸವಾರನಿಗೆ ಗಾಯ
ಪಡೀಲ್‌ ಸಮೀಪದ ಕಣ್ಣೂರಿನಲ್ಲಿ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಮಳೆ ನೀರು ಹರಿದು ಹೋಗಲು ಅವಕಾಶ ಇಲ್ಲದೆ ರಸ್ತೆಯಲ್ಲಿ ನೀರು ನಿಂತ ಕಾರಣ ಲಾರಿಯೊಂದಕ್ಕೆ ಹಿಂಬದಿಯಿಂದ ಬೈಕ್‌ ಢಿಕ್ಕಿ ಹೊಡೆದು ಬೈಕ್‌ ಸವಾರ ಗಾಯಗೊಂಡಿದ್ದಾರೆ.

Advertisement

ಟ್ರಾಫಿಕ್‌ ಜಾಮ್‌
ಬೆಳಗ್ಗಿನ ಹೊತ್ತು ಎಡೆಬಿಡದೆ ಮಳೆ ಬಂದ ಕಾರಣ ವಾಹನಗಳು ಅಧಿಕ ಸಂಖ್ಯೆಯಲ್ಲಿ ರಸ್ತೆಗಿಳಿದ ಹಿನ್ನೆಲೆಯಲ್ಲಿ ಕಂಕನಾಡಿ ಕರಾವಳಿ ವೃತ್ತ ಮತ್ತು ಜ್ಯೋತಿ ಜಂಕ್ಷನ್‌ ಬಳಿ ಟ್ರಾಫಿಕ್‌ ಜಾಮ್‌ ಕಂಡು ಬಂದಿತ್ತು. ಇದರಿಂದಾಗಿ ಪಂಪ್‌ವೆಲ್‌ನಿಂದ ಕಂಕನಾಡಿ ಕರಾವಳಿ ವೃತ್ತದ ಕಡೆಗೆ ಸಂಚರಿಸ ಬೇಕಾದ ಕೆಲವು ಬಸ್ಸುಗಳನ್ನು ಚಾಲಕರು ನಂತೂರು – ಕದ್ರಿ ಮಲ್ಲಿಕಟ್ಟೆ – ಬೆಂದೂರು ಮಾರ್ಗ ದಲ್ಲಿ ಚಲಾಯಿಸಿದರು. ಮಳೆ ತೀವ್ರವಾದಾಗ ಇನ್ನಷ್ಟು ಅನಾಹುತಗಳು ಸಂಭವಿಸಿಸುವ ಎಲ್ಲ ಸಾಧ್ಯತೆಗಳಿವೆ.

ವಿದ್ಯುತ್‌ ವ್ಯತ್ಯಯ
ವಾಮಂಜೂರು ಸಮೀಪದ ಪಚ್ಚನಾ ಡಿಯ ಮಂಗಳ ಜ್ಯೋತಿ ಬಳಿ ಮಂಗಳವಾರ ಎರಡು ಮರಗಳು ಉರುಳಿ ವಿದ್ಯುತ್‌ ಕಂಬಗಳ ಮೇಲೆ ಬಿದ್ದ ಕಾರಣ ವಿದ್ಯುತ್‌ ಕಂಬಗಳೂ ಧರಾಶಾಯಿಯಾಗಿ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next