Advertisement
ಕಣ್ಣಿನೊಳಗೆ ಸಹಜ ಒತ್ತಡವು 10ರಿಂದ 20 ಎಂಎಂ ಎಚ್‌ಜಿಗಳಷ್ಟಿರುತ್ತದೆ. ಒತ್ತಡವು 20 ಎಂಎಂ ಎಚ್‌ಜಿಗಿಂತ ಹೆಚ್ಚಾದರೆ ಆಗ ದೃಷ್ಟಿ ನರಗಳಲ್ಲಿ ಬದಲಾವಣೆಗಳು ಉಂಟಾಗಿ ಕುರುಡುತನಕ್ಕೆ ಕಾರಣವಾಗಬಹುದು. ದೃಷ್ಟಿ ನರವು ಕಣ್ಣಿನ ಭಾಗವಾಗಿದ್ದು, ಕಣ್ಣುಗಳು ಗ್ರಹಿಸಿದ ದೃಷ್ಟಿ ಸಂದೇಶಗಳನ್ನು ಮೆದುಳಿಗೆ ರವಾನಿಸುತ್ತದೆ.
Related Articles
Advertisement
ಆರಂಭಿಕ ಹಂತಗಳಲ್ಲಿ ಗ್ಲುಕೋಮಾ ವನ್ನು ಪತ್ತೆಹಚ್ಚಿದರೆ ಇದನ್ನು ತಡೆಗಟ್ಟಬಹುದು ಅಥವಾ ರೋಗ ಉಲ್ಬಣಗೊಳ್ಳುವುದನ್ನು ನಿಧಾನಗೊಳಿಸಬಹುದು. ಗ್ಲುಕೋಮಾ ದ ವಿಧ ಮತ್ತು ಯಾವ ಹಂತದಲ್ಲಿದೆ ಎಂಬುದನ್ನು ಆಧರಿಸಿ ಸಾಮಾನ್ಯವಾಗಿ ಕಣ್ಣುಗಳಿಗೆ ಬಿಡುವ ಡ್ರಾಪ್‌ಗಳ ಮೂಲಕ ಅಥವಾ ಶಸ್ತ್ರಚಿಕಿತ್ಸೆಯ ಮೂಲಕ ನಿರ್ವಹಿಸಲಾಗುತ್ತದೆ.
ಗ್ಲುಕೋಮಾದಿಂದ ಸರಿಪಡಿಸಲಾಗದ ಹಾನಿ ಉಂಟಾಗುವುದನ್ನು ತಡೆಗಟ್ಟಲು ಅತ್ಯುತ್ತಮ ವಿಧಾನ ಎಂದರೆ ತೊಂದರೆಯನ್ನು ಆದಷ್ಟು ಬೇಗನೆ ಪತ್ತೆಹಚ್ಚುವುದು ಮತ್ತು ಸರಿಯಾದ ಚಿಕಿತ್ಸೆಯನ್ನು ಒದಗಿಸುವುದು. ಆದ್ದರಿಂದ 40 ವರ್ಷಕ್ಕಿಂತ ಮೇಲ್ಪಟ್ಟ ಮತ್ತು ಅಪಾಯ ಸಾಧ್ಯತೆಯುಳ್ಳ ಪ್ರತಿಯೊಬ್ಬರೂ ನಿಯಮಿತವಾಗಿ ವಾರ್ಷಿಕ ನೇತ್ರ ತಪಾಸಣೆಯನ್ನು ಮಾಡಿಸಿಕೊಳ್ಳಬೇಕು.ಈ ನೇತ್ರ ತಪಾಸಣೆಯ ಸಂದರ್ಭದಲ್ಲಿ ನೇತ್ರ ಒತ್ತಡ ಪರೀಕ್ಷೆ ಮತ್ತು ನೇತ್ರ ಒತ್ತಡದಲ್ಲಿ ವ್ಯತ್ಯಾಸ ಉಂಟಾಗಿರುವುದು ಪತ್ತೆಯಾದರೆ ಇನ್ನಷ್ಟು ನಿಖರ ವಿವರಗಳನ್ನು ಪಡೆಯಲು ಮತ್ತು ಎಷ್ಟು ಪ್ರಮಾಣದಲ್ಲಿ ಹಾನಿ ಉಂಟಾಗಿದೆ ಎಂಬುದನ್ನು ತಿಳಿಯಲು ಇನ್ನಷ್ಟು ತಪಾಸಣೆಗಳನ್ನು ನಡೆಸಲಾಗುತ್ತದೆ. ನೇತ್ರ ಒತ್ತಡ ಹೆಚ್ಚಿರುವುದು ಪತ್ತೆಯಾದರೆ ತೊಂದರೆಗೆ ತುತ್ತಾಗಿರುವ ಕಣ್ಣಿನ ದೃಷ್ಟಿ ಕ್ಷೇತ್ರವನ್ನು ವಿಶ್ಲೇಷಿಸುವ ಪೆರಿಮೆಟ್ರಿ, ಹಾನಿ ಎಷ್ಟು ಪ್ರಮಾಣದಲ್ಲಿ ಉಂಟಾಗಿದೆ ಎಂಬುದನ್ನು ತಿಳಿಯಲು ರೆಟಿನಲ್ ಫೈಬರ್ ಲೇಯರ್‌ನ ಸಿಟಿ ಸ್ಕ್ಯಾನ್, ನೇತ್ರಗಳ ಒಳಗಿನ ಒತ್ತಡಕ್ಕೂ ತೊಂದರೆಗೂ ಇರುವ ಸಂಬಂಧವನ್ನು ತಿಳಿಯಲು ಸೆಂಟ್ರಲ್ ಕಾರ್ನಿಯಲ್ ತಿಕ್‌ನೆಸ್ ವಿಶ್ಲೇಷಣೆಗಳನ್ನು ನಡೆಸಲಾಗುತ್ತದೆ. ಜನಸಾಮಾನ್ಯರಲ್ಲಿ ಗ್ಲುಕೋಮಾ ಕಾಯಿಲೆಯ ಬಗ್ಗೆ ಅರಿವಿನ ಕೊರತೆ ಇರುವುದರಿಂದಾಗಿ ಗ್ಲುಕೋಮಾ ಪತ್ತೆಯಾಗುವುದು ಸಾಮಾನ್ಯವಾಗಿ ತೀರಾ ವಿಳಂಬವಾಗಿರುತ್ತದೆ. ಹೀಗಾಗಿ 40 ವರ್ಷ ವಯಸ್ಸಿನ ಬಳಿಕ ವರ್ಷಕ್ಕೊಂದು ಬಾರಿಯಾದರೂ ನಿಯಮಿತವಾಗಿ ನೇತ್ರ ತಪಾಸಣೆಯನ್ನು ಮಾಡಿಸಿಕೊಳ್ಳಬೇಕು. ಅಲ್ಲದೆ ಗ್ಲುಕೋಮಾಕ್ಕೆ ತುತ್ತಾಗುವ ಅಪಾಯ ಹೊಂದಿರುವವರು ಹೆಚ್ಚು ಜಾಗರೂಕರಾಗಿರಬೇಕು ಮತ್ತು ತಮ್ಮ ನೇತ್ರತಜ್ಞರು ಶಿಫಾರಸು ಮಾಡಿರುವಂತೆ ನಿಯಮಿತವಾಗಿ ತಪಾಸಣೆ ಮತ್ತು ಮರುಭೇಟಿಗಳನ್ನು ನಡೆಸಬೇಕು. ಜನಸಾಮಾನ್ಯರಲ್ಲಿ ಗ್ಲುಕೋಮಾ ತೊಂದರೆಯ ಬಗ್ಗೆ ಅರಿವನ್ನು ಹೆಚ್ಚಿಸುವ ಉದ್ದೇಶದಿಂದ ಪ್ರತೀ ವರ್ಷ ಜನವರಿ ತಿಂಗಳನ್ನು ಗ್ಲುಕೋಮಾ ಮಾಸವಾಗಿ ಆಚರಿಸಲಾಗುತ್ತದೆ. ಹೀಗಾಗಿ ದೃಷ್ಟಿ ಶಕ್ತಿಯ ನಿಶ್ಶಬ್ದ ಕೊಲೆಗಾರನಾಗಿರುವ ಗ್ಲುಕೋಮಾ ಕಾಯಿಲೆ ವಿರುದ್ಧ ಹೋರಾಟ ಸಂಘಟಿಸುವ ಬಗ್ಗೆ ನಾವೆಲ್ಲರೂ ನಮ್ಮ ಆಪ್ತರು, ಗೆಳೆಯ-ಗೆಳತಿಯರು, ನೆರೆಹೊರೆಯವರು, ಸಹೋದ್ಯೋಗಿಗಳ ನಡುವೆ ತಿಳಿವಳಿಕೆಯನ್ನು ಹೆಚ್ಚಿಸಲು ಶ್ರಮಿಸೋಣ. –ಡಾ| ಕೀರ್ತನ್ ರಾವ್, ಕನ್ಸಲ್ಟಂಟ್ ಆಪ್ತಮಾಲಜಿಸ್ಟ್, ಕೆಎಂಸಿ ಆಸ್ಪತ್ರೆ, ಮಂಗಳೂರು (ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಮುಖ್ಯಸ್ಥರು, ಆಪ್ತಮಾಲಜಿ ವಿಭಾಗ, ಕೆಎಂಸಿ ಆಸ್ಪತ್ರೆ, ಮಂಗಳೂರು)