ಶ್ರೀರಂಗಪಟ್ಟಣ: ಕೆಆರ್‌ಎಸ್ ಜಲಾಶಯದಿಂದ ಕಾವೇರಿ ನದಿಗೆ ಅಧಿಕ ಪ್ರಮಾಣದಲ್ಲಿ ನೀರು ಬಿಟ್ಟ ಹಿನ್ನೆಲೆಯಲ್ಲಿ ಪ್ರವಾಹದಲ್ಲಿ ಶೇಕಡಾ ಅರ್ಧದಷ್ಟು ರಂಗನತಿಟ್ಟು ಪಕ್ಷಿಧಾಮ ಹಾನಿಗೊಳಗಾಗಿದೆ.
ಸುಮಾರು 1.80 ಲಕ್ಷ ಕ್ಯೂಸೆಕ್‌ಗೂ ಅಧಿಕ ನೀರು ಕಾವೇರಿ ನದಿ ಮೂಲಕ ಜಲಾಶಯದಿಂದ ಹೊರಬಿಡಲಾಯಿತು. ಇದರಿಂದ ಪಕ್ಷಿಧಾಮದ ಪ್ರವಾಸಿಗರ ದೋಣಿವಿಹಾರ ಹಾಗೂ ಪ್ರವೇಶವನ್ನು ನಿಷೇಧಿಸಲಾಯಿತು. ಈ ಬಾರಿ 20 ದಿನಗಳಿಗೂ ಹೆಚ್ಚು ದಿನ ಕಾವೇರಿ ನದಿ ಕಣಿವೆಯಲ್ಲಿ ಪ್ರವಾಹದ ಭೀತಿ ಎದುರಾದ ಪರಿಣಾಮ ಹಿಂದೆ ಎಂದು ಕಾಣದಷ್ಟು ಪಕ್ಷಿಧಾಮದ ಐಲ್ಯಾಂಡ್‌ಗಳು ಸಂಪೂರ್ಣ ಜಲಾವೃತವಾಗಿದ್ದವು.
ಕಾವೇರಿ ನದಿ ಮಧ್ಯೆಯಿರುವ ಒಟ್ಟು ಪಕ್ಷಿಧಾಮದಲ್ಲಿ 40ಕ್ಕೂ ಹೆಚ್ಚು ತಿಟ್ಟುಗಳಿದ್ದು ಇವುಗಳ ಕೆಲವು ಅತಿ ಎತ್ತರದ ಐ ಲ್ಯಾಂಡ್ ಮುಳುಗಡೆಯಾಗಲಿಲ್ಲ ಇನ್ನು ನದಿ ಮಟ್ಟದಲ್ಲಿದ್ದ ಐಲ್ಯಾಂಡ್‌ಗಳು ನೀರಿನಲ್ಲಿ ಮುಳುಗಡೆಯಾಗಿದ್ದವು. ಅಲ್ಲಿ ವಾಸ ಮಾಡುವ ಪಕ್ಷಿಗಳು ಇತರ ಎತ್ತರ ಪ್ರದೇಶವನ್ನು ಹುಡುಕಿ ವಾಸ ಮಾಡಿರುವುದು ಕಂಡು ಬಂದಿವೆ. ಕೆಲವು ಕಲ್ಲು ಬಂಡೆಯಿಂದ ರಕ್ಷಣೆ ಮದ್ಯೆ ಇರುವ ತಿಟ್ಟುಗಳು ಹೆಚ್ಚಿನದಾಗಿ ಹಾನಿ ಕಂಡು ಬಂದಿಲ್ಲ ಉಳಿದ ಕೆಲವು ಐ ಲ್ಯಾಂಡ್‌ಗಳನ್ನು ಪ್ರವಾಹದ ನೀರು ಕೊರೆದು ಹಾಕಿದೆ. ಸಣ್ಣ ಪುಟ್ಟ ಪಕ್ಷಿಗಳ ಗೂಡುಗಳು ಕೊಚ್ಚಿ ಹೋಗಿವೆ. ಇತರ ಜಲಚರಗಳು ಸಹ ನೀರಲ್ಲಿಕೊಚ್ಚಿಹೋಗಿವೆ. ಈ ಬಾರಿ ಬಂದ ಪ್ರವಾಹದ ತೀವ್ರತೆ ರಂಗನ ತಿಟ್ಟು ಪಕ್ಷಿಧಾಮ ಈ ಬಾರಿ ಸಂಪೂರ್ಣ ಮುಳುಗಡೆಯಾಗಿತ್ತು.
ಸೆಳೆತಕ್ಕೆ ಸಿಕ್ಕ ಐಲ್ಯಾಂಡ್: ಪ್ರವಾಹದ ನೀರಿನ ಸೆಳೆತ ಅಧಿಕವಾಗಿದ್ದರಿಂದ ಸುಮಾರು 23 ಐಲ್ಯಾಂಡ್ ಗಳಲ್ಲಿ, 10 ಐಲ್ಯಾಂಡ್‌ಗಳು ಸಂಪೂರ್ಣ ಹಾಳಾಗಿದ್ದು, ಇವುಗಳಲ್ಲಿ ಕಾಡು ಉಣಸೆ ಮರದ ಐಲ್ಯಾಂಡ್, ಸ್ಟೋನ್ ಬಿಲ್ ಐಲ್ಯಾಂಡ್, ಸ್ಟೊನ್ ಫ್ಲವರ್ ಐಲ್ಯಾಂಡ್, ನೀರಂಜಿ ಐಲ್ಯಾಂಡ್, ಹತ್ತಿಮರ ಐಲ್ಯಾಂಡ್, ಪರ್ಪಲ್ ಹೆರಾನ್ ಐಲ್ಯಾಂಡ್, ಕಾವೇರಿ ನದಿ ಮಧ್ಯ ನಿರ್ಮಿಸಲಾದ ಮರಳು ಮೂಟೆ ಕಟ್ಟಿದ್ದ ಐಲ್ಯಾಂಡ್, ಬಿದುರಿನ ಐಲ್ಯಾಂಡ್ ಸಂಪೂರ್ಣ ನೀರಲ್ಲಿ ಕೊಚ್ಚಿಹೋಗಿವೆ.
ಪುನರ್ ನಿರ್ಮಾಣ ಕಾರ್ಯ ಶೀಘ್ರ: ಪಕ್ಷಿಧಾಮದಲ್ಲಿನ 10ಕ್ಕೂ ಐಲ್ಯಾಂಡ್‌ಗಳು ಸಂಪೂರ್ಣವಾಗಿ ಹಾನಿಯಾಗಿದ್ದು ಅವುಗಳ ಪುನರ್ ನಿರ್ಮಾಣ ಕಾರ್ಯ ಮಾಡಲಾಗುತ್ತದೆ. ನದಿ ಮಧ್ಯೆ ಉಳಿದಿರುವ ಐಲ್ಯಾಂಡ್‌ಗಳ ಅವಶೇಷಗಳನ್ನು ಗುರುತಿಸಿ, ಸುತ್ತಲೂ ಕಲ್ಲುಗಳ ಜೋಡಣೆ ಮಾಡಿ, ಪ್ಲಾಸ್ಟಿಕ್ ಚೀಲಗಳಲ್ಲಿ ಮರಳು, ಮಣ್ಣು ಮೂಟೆಗಳನ್ನು ಜೋಡಿಸಿ ಮಣ್ಣು ಸುರಿದು ಐಲ್ಯಾಂಡ್‌ಗಳ ಪುನರ್ ನಿರ್ಮಾಣ ಕಾರ್ಯ ಕೈಗೊಳ್ಳಲಾಗುವುದು ವನ್ಯ ಜೀವಿ ವಲಯ ಅರಣ್ಯ ಇಲಾಖೆಯ ರಂಗನತಿಟ್ಟು ಸಹಾಯಕ ಅಧಿಕಾರಿ ಪುಟ್ಟ ಮಾದೇಗೌಡ ಹೇಳಿದರು.
● ಗಂಜಾಂ ಮಂಜು