ಬೆಂಗಳೂರು: ನಗರದಲ್ಲಿ ಪಟಾಕಿಯಿಂದ ಹಾನಿ ಹೆಚ್ಚಾಗುತ್ತಿದ್ದು, ದೀಪಾವಳಿ ಹಬ್ಬದ ಕೊನೆಯ ದಿನವಾದ ಮಂಗಳವಾರ ಒಂದೇ ದಿನ 50ಕ್ಕೂ ಹೆಚ್ಚು ಮಂದಿಯು ಪಟಾಕಿಯಿಂದ ಕಣ್ಣು ಹಾಗೂ ಮುಖ ಕೈಕಾಲುಗಳಿಗೆ ಹಾನಿ ಮಾಡಿಕೊಂಡಿದ್ದಾರೆ. ಈ ಮೂಲಕ ಈ ಬಾರಿ ದೀಪಾವಳಿ ಪಟಾಕಿಯಿಂದ ಹಾನಿಗೊಳಗಾದವರ ಸಂಖ್ಯೆ ನೂರಕ್ಕೆ ಏರಿಕೆಯಾಗಿದೆ.
ಮಂಗಳವಾರ ಮಿಂಟೋ ಕಣ್ಣಿನ ಆಸ್ಪತ್ರೆಯಲ್ಲಿ 14 ಮಂದಿ, ನಾರಾಯಣ ನೇತ್ರಾಲಯ ವಿವಿಧ ಶಾಖೆಗಳಲ್ಲಿ 15, ಶಂಕರ ಕಣ್ಣಿನ ಆಸ್ಪತ್ರೆಯಲ್ಲಿ 15 ಮಂದಿ, ನೇತ್ರದಾಮ ಆಸ್ಪತ್ರೆಯಲ್ಲಿ 3 ಮಂದಿ, ಶೇಖರ ಆಸ್ಪತ್ರೆಯಲ್ಲಿ ಇಬ್ಬರು ಚಿಕಿತ್ಸೆ ಪಡೆದಿದ್ದಾರೆ. ಸೋಮವಾರ ಒಬ್ಬರಿಗೆ ಹಾಗೂ ಮಂಗಳವಾರ ಮೂವರ ಕಣ್ಣಿಗೆ ತೀವ್ರ ಹಾನಿಯಾಗಿದೆ. ನಾಲ್ವರಲ್ಲಿ ಮೂರು ಮಂದಿ ಮಿಂಟೋದಲ್ಲಿ ದಾಖಲಾಗಿದ್ದು, ಒಬ್ಬ ಶಂಕರ ಕಣ್ಣಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.
ಈ ಮೂವರಿಗೂ ಕಣ್ಣಿಗೆ ಗಂಭೀರ ಗಾಯವಾಗಿರುವ ಪರಿಣಾಮ ಶಸ್ತ್ರಚಿಕಿತ್ಸೆ ನಡೆಸಲಾಗಿದೆ ಎಂದು ಆಸ್ಪತ್ರೆಗಳ ವೈದ್ಯರು ತಿಳಿಸಿದ್ದಾರೆ. ಪಟಾಕಿಯಿಂದ ಮುಖ ಮೈ ಕೈಕಾಲುಗಳಿಗೆ 10 ಮಂದಿ ವಿಕ್ಟೋರಿಯಾದ ಸುಟ್ಟಗಾಯಗಳ ಕೇಂದ್ರದಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಈ ಪೈಕಿ ಇಬ್ಬರ ಸ್ಥಿತಿ ಗಂಭೀರವಾಗಿದೆ. ಮಂಗಳವಾರವೂ ಹಾನಿಯಾದವರಲ್ಲಿ ಶೇ.80 ಮಕ್ಕಳೇ ಇದ್ದಾರೆ.
ಗೊಲ್ಲರ ಹಟ್ಟಿಯಲ್ಲಿ ಪವನ್ ಎಂಬುವವನು ಪೇಯಿಂಟ್ ಡಬ್ಬದ ಕೆಳಗೆ ಆಟಂಬಾಂಬ್ ಇಟ್ಟು ಸಿಡಿಸಲು ಮುಂದಾಗಿದ್ದು, ಏಕಾಏಕಿ ಪಟಾಕಿ ಜತೆ ಡಬ್ಬವೂ ಸಿಡಿದು ಬಲಗಣ್ಣಿಗೆ ಗಂಭೀರವಾದ ಗಾಯವಾಗಿದೆ. ಬಾಗಲೂರು ಬಳಿಯ 9 ವರ್ಷದ ಬಾಲಕ ಜೈರಾಮ್ ಮತ್ತು ಭುವನೇಶ್ವರಿ ನಗರದ 8 ವರ್ಷದ ಬಾಲಕ ಮನೋಜ್ ಎಂಬುವರು ಹೂಕುಂಡ ಹಚ್ಚುವಾಗ ಮುಖ ಸುಟ್ಟುಕೊಂಡಿದ್ದಾರೆ. ಈ ಇಬ್ಬರು ಮಕ್ಕಳು ಮುಖವನ್ನು ಸುಟ್ಟುಕೊಂಡು ವಿಕ್ಟೋರಿಯಾದ ಸುಟ್ಟಗಾಯಗಳ ಕೇಂದ್ರದಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕಳೆದ ಬಾರಿಗಿಂತ ಹೆಚ್ಚು: ಕಳೆದ ಬಾರಿ ದೀಪಾವಳಿ ಸಂದರ್ಭದಲ್ಲಿ ಪಟಾಕಿಯಿಂದ 85ಕ್ಕೂ ಹೆಚ್ಚು ಮಂದಿ ಹಾನಿಗೊಳಗಾಗಿದ್ದರು. ಈ ಬಾರಿ ಅದರ ಪ್ರಮಾಣ ಹೆಚ್ಚಾಗಿದ್ದು, 100 ದಾಟಿದೆ. ಅಂತೆಯೇ ಮಕ್ಕಳ ಸಂಖ್ಯೆಯೂ ಕಳೆದ ವರ್ಷಕ್ಕಿಂತ ಹೆಚ್ಚಿದೆ. ಇನ್ನು ಹಬ್ಬ ಮುಗಿದ ನಂತರವು ಕಿರು ದೀಪಾವಳಿ, ತುಳಸಿ ಹಬ್ಬ ಎಂದು ಪಟಾಕಿ ಸಿಡಿಸಲಾಗುತ್ತದೆ. ಈ ವೇಳೆ ಹಾನಿಗೊಳಗಾಗಿ ಆಸ್ಪತ್ರೆಗೆ ಬರುತ್ತಾರೆ ಎಂದು ವೈದ್ಯರು ತಿಳಿಸಿದರು.
ಇಬ್ಬರಿಗೆ ಶಾಶ್ವತ ಅಂಧತ್ವ: ಮಿಂಟೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಆರು ವರ್ಷದ ವೆಂಕಟೇಶ್, 13 ವರ್ಷದ ಗಜೇಂದ್ರ ಎಂಬ ಬಾಲಕರ ಕಣ್ಣುಗಳಿಗೆ ಸಾಕಷ್ಟು ಹಾನಿಯಾಗಿದ್ದು, ದೃಷ್ಟಿ ಕಳೆದುಕೊಂಡಿದ್ದಾರೆ. 22 ವರ್ಷದ ಪವನ್ ಎಂಬ ಯುವಕನಿಗೂ ಸಾಕಷ್ಟು ಹಾನಿಯಾಗಿದ್ದು, ದೃಷ್ಟಿ ಮರಳುವ ಸಾಧ್ಯತೆ ತೀರಕಡಿಮೆ ಎಂದು ಹೇಳುತ್ತಿದ್ದಾರೆ.
ಪಟಾಕಿಯಿಂದ ಗಾಯ: ಚಿಕಿತ್ಸೆ ಪಡೆದವರ ಸಂಖ್ಯೆ
ಮಿಂಟೋ ಕಣ್ಣಿನ ಆಸ್ಪತ್ರೆ – 27
ನಾರಾಯಣ ನೇತ್ರಾಲಯ – 32
ಶಂಕರ ಕಣ್ಣಿನ ಆಸ್ಪತ್ರೆ – 16
ಶೇಖರ್ ಕಣ್ಣಿನ ಆಸ್ಪತ್ರೆ – 07
ಮೋದಿ ಕಣ್ಣಿನ ಆಸ್ಪತ್ರೆ – 4
ನೇತ್ರಧಾಮ – 3
ವಿಕ್ಟೋರಿಯಾದಲ್ಲಿನ ಸುಟ್ಟಗಾಯಗಳ ಕೇಂದ್ರ – 12