ಬೆಂಗಳೂರು: ಕೊಡಗಿನಲ್ಲಿ ವಾರದಿಂದೀಚೆಗೆ ಸುರಿದ ಭಾರೀ ಮಳೆಗೆ 55ಕ್ಕೂ ಹೆಚ್ಚು ಟ್ರಾನ್ಸ್‌ಫಾರ್ಮರ್‌ಗಳು ಹಾಳಾಗಿದ್ದರೆ, 550ಕ್ಕೂ ಅಧಿಕ ವಿದ್ಯುತ್ ಕಂಬಗಳು ಮುರಿದಿವೆ. ಗುಡ್ಡ ಪ್ರದೇಶ ಸೇರಿ ದುರ್ಗಮ ಪ್ರದೇಶಗಳಲ್ಲಿನ ಕೆಲ ಗ್ರಾಮಗಳಿಗೆ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ರಸ್ತೆ ಸಂಪರ್ಕ ಕಡಿತಗೊಂಡಿರುವ ಕಡೆ ದುರಸ್ತಿ ಕಾರ್ಯಕ್ಕೆ ಅಡ್ಡಿಯಾಗಿದ್ದು, ಸ್ಥಳೀಯರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಈಗಾಗಲೇ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮವು (ಸೆಸ್ಕ್) ಅಧಿಕಾರಿ, ನೌಕರರ ವಿಶೇಷ ತಂಡ ರಚಿಸಿ ಕಾರ್ಯಾಚರಣೆಗಿಳಿದಿದ್ದು, ಮಳೆ ಪ್ರಮಾಣ ತಗ್ಗಿದ ಕೂಡಲೇ ದುರಸ್ತಿ ಕಾರ್ಯಕ್ಕೆ ಸಿದ್ಧರಾಗಿದ್ದಾರೆ. ಮಳೆ ನಿಂತ ಬಳಿಕ ವಾರದಲ್ಲಿ ಮುರಿದ ಕಂಬಗಳು, ಹಾಳಾದ ಟ್ರಾನ್ಸ್‌ಫಾರ್ಮರ್‌ಗಳನ್ನು ಬದಲಾಯಿಸಲು ವ್ಯವಸ್ಥೆ ಮಾಡಿಕೊಳ್ಳಲಾಗಿದೆ.
ಕೊಡಗಿನಲ್ಲಿ ಏಪ್ರಿಲ್‌ನಿಂದ ಈವರೆಗೆ ಸುರಿದ ಮಳೆಗೆ 3,500 ವಿದ್ಯುತ್ ಕಂಬಗಳಿಗೆ ಹಾನಿಯಾಗಿದ್ದು, 282 ಟ್ರಾನ್ಸ್‌ಫಾರ್ಮರ್ ಹಾಳಾಗಿವೆ. ಇದರಲ್ಲಿ ಶೇ.80ರಷ್ಟು ದುರಸ್ತಿ ಕಾರ್ಯ ಪೂರ್ಣಗೊಂಡಿತ್ತು. ವಾರದಿಂದೀಚೆಗೆ ಸುರಿದ ಭಾರಿ ಮಳೆಗೆ 550 ವಿದ್ಯುತ್ ಕಂಬ ಹಾಗೂ 50ಕ್ಕೂ ಅಧಿಕ ಟ್ರಾನ್ಸ್‌ಫಾರ್ಮರ್‌ಗಳಿಗೆ ಹಾನಿಯಾಗಿದೆ. ಇತ್ತೀಚೆಗೆ ಬದಲಾಯಿಸಿದ್ದ ಕಂಬಗಳು ಮತ್ತೆ ಹಾನಿಗೊಳಗಾಗಿವೆ ಎಂದು ಸೆಸ್ಕ್ ನಿರ್ದೇಶಕ (ತಾಂತ್ರಿಕ) ಎನ್. ನರಸಿಂಹೇಗೌಡ “ಉದಯವಾಣಿ’ಗೆ ತಿಳಿಸಿದರು.
ಈಗಾಗಲೇ ಮೈಸೂರು, ಮಂಡ್ಯ, ಹಾಸನದಿಂದ ವಿಶೇಷ ತಂಡಗಳನ್ನು ರಚಿಸಿ ಕಾರ್ಯಾಚರಣೆಗೆ ನಿಯೋಜಿಸಲಾಗಿದೆ. ಟ್ರಾನ್ಸ್‌ಫಾರ್ಮರ್‌ಗಳು, ವಿದ್ಯುತ್ ಕಂಬ ಸೇರಿದಂತೆ ಇತರೆ ಸಲಕರಣೆಗಳು ಅಗತ್ಯ ಪ್ರಮಾಣದಲ್ಲಿ ಯಾವುದಕ್ಕೂ ಕೊರತೆ ಇಲ್ಲ ಎಂದು ಹೇಳಿದರು.
ವಾರದಲ್ಲಿ ಸಂಪೂರ್ಣ ದುರಸ್ತಿ: ಗುಡ್ಡ ಕುಸಿತದಿಂದಾಗಿ ಕೆಲವೆಡೆ ರಸ್ತೆ ಸಂಪರ್ಕ ಕಡಿತಗೊಂಡಿದ್ದು, ದುರಸ್ತಿ ಕಾರ್ಯಕ್ಕೆ ಅಡ್ಡಿಯಾಗಿದೆ. ಮುಕ್ಕಂದೂರು, ಕರ್ವಾಲೆ, ಸುರ್ಲಬ್ಬಿ ಸೇರಿದಂತೆ ಇತರೆ ಕೆಲ ಗ್ರಾಮಗಳಿಗೆ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಉಳಿದಂತೆ ಜಿಲ್ಲೆಯಾದ್ಯಂತ ವಿದ್ಯುತ್ ಪೂರೈಕೆ ವ್ಯವಸ್ಥೆ ಇದೆ. ಮಳೆ ನಿಂತರೆ ವಾರದಲ್ಲಿ ಇತರೆಡೆಗಳಲ್ಲೂ ದುರಸ್ತಿ ಕಾರ್ಯ ಪೂರ್ಣಗೊಳಿಸಲಾಗುವುದು ಎಂದು ತಿಳಿಸಿದರು.