Advertisement

ಡ್ಯಾಂ ಭರ್ತಿಯಾದರೂ ಕೊನೆಯಾಗದ ರೈತರ ಕಷ್ಟ

01:37 PM Aug 18, 2019 | Suhan S |

ಗಂಗಾವತಿ: ಮುಂಗಾರು ಮಳೆ ತಡವಾಗಿ ಬಂದಿದ್ದರೂ ಜೀವನಾಡಿ ತುಂಗಭದ್ರಾ ಡ್ಯಾಂ ಭರ್ತಿಯಾಗಿ ಹೆಚ್ಚುವರಿ ನೀರನ್ನು ನದಿ ಮೂಲಕ ಹೊರಗೆ ಬಿಡಲಾಗುತ್ತಿದೆ. ಅಧಿಕಾರಿಗಳ ಮತ್ತು ಜನಪ್ರತಿನಿಧುಗಳ ನಿರ್ಲಕ್ಷ್ಯದಿಂದ ಎಡದಂಡೆ ಕಾಲುವೆ ವ್ಯಾಪ್ತಿಯ ರೈತರು ಇನ್ನೂ ಯಾವುದೇ ಕೃಷಿ ಚಟುವಟಿಕೆ ನಡೆಸದೇ ಕಾಲುವೆಗೆ ಯಾವಾಗ ನೀರು ಹರಿಸುತ್ತಾರೆಂದು ಕಾಯುತ್ತಿದ್ದಾರೆ.

Advertisement

ಆಗಸ್ಟ್‌ ಮೊದಲ ವಾರದಲ್ಲಿ ಡ್ಯಾಂನ ಬಲ ಮತ್ತು ಎಡದಂಡೆ ಮೇಲ್ಮಟ್ಟ ಮತ್ತು ಕೆಳಮಟ್ಟದ ಕಾಲುವೆಗಳಿಗೆ ನೀರು ಹರಿಸಲಾಗಿತ್ತು. ದುರದೃಷ್ಟವಶಾತ್‌ ಎಡದಂಡೆ ಕಾಲುವೆ ಗಂಗಾವತಿ ತಾಲೂಕಿನ ಮಸಾರಿ ಕ್ಯಾಂಪ್‌ 23ನೇ ವಿತರಣಾ ಕಾಲುವೆ ಹತ್ತಿರ ಬೋಂಗಾ ಬಿದ್ದ ಪರಿಣಾಮ ಕಾಲುವೆಯಲ್ಲಿ ನೀರು ನಿಲ್ಲಿಸಿ ದುರಸ್ತಿ ಕಾರ್ಯ ಮಾಡಿ ಪುನಃ ನೀರು ಹರಿಸಲಾಯಿತು. ಮತ್ತೂಂದು ಆಘಾತ ಎಂಬಂತೆ ಡ್ಯಾಂ ಹತ್ತಿರ ಎಡದಂಡೆ ಕಾಲುವೆಯ ಮೇಲ್ಮಟ್ಟದ ಕಾಲುವೆ ಗೇಟ್ ಕಿತ್ತು ಹೋಗಿದ್ದರಿಂದ ಎಡದಂಡೆ ಕಾಲುವೆಯಲ್ಲಿ ನೀರು ಪುನಃ ನಿಲ್ಲಿಸಲಾಯಿತು. ಈಗಾಗಲೇ ಬಲದಂಡೆ ಕಾಲುವೆ ರೈತರು ನಾಟಿ ಮಾಡಿದ ಭತ್ತದ ಬೆಳೆ ಉತ್ತಮವಾಗಿ ಬೆಳೆದಿದ್ದು ಎಡದಂಡೆ ಕಾಲುವೆ ರೈತರು ಇನ್ನೂ ತೊಂದರೆ ಅನುಭವಿಸುತ್ತಿದ್ದಾರೆ.

ಡ್ಯಾಂನಲ್ಲಿ ಒಟ್ಟು 105 ಟಿಎಂಸಿ ಅಡಿ ನೀರು ಸಂಗ್ರಹವಾಗಿದ್ದು, ಹೆಚ್ಚುವರಿ ನೀರನ್ನು ನದಿಗೆ ಹರಿಸಲಾಗುತ್ತಿದೆ. ಡ್ಯಾಂ ಒಳಹರಿವು ಒಂದು ಲಕ್ಷ ಕ್ಯೂಸೆಕ್‌ ಇದ್ದು ಎಡದಂಡೆ ಕಾಲುವೆಯನ್ನು ಶೀಘ್ರ ದುರಸ್ತಿ ಮಾಡಿ ನೀರು ಹರಿಸಬೇಕಾಗಿದೆ. ಎಡದಂಡೆ ಕಾಲುವೆ ವ್ಯಾಪ್ತಿಯಲ್ಲಿ ಸುಮಾರು 4.5 ಲಕ್ಷ ಎಕರೆ ಪ್ರದೇಶ ನೀರಾವರಿಗೆ ಒಳಪಟ್ಟಿದ್ದು, ಕಳೆದ ನಾಲ್ಕೈದು ವರ್ಷಗಳಿಂದ ಮಳೆಯ ಕೊರತೆಯಿಂದ ಒಂದೇ ಬೆಳೆಯನ್ನು ಬೆಳೆದಿದ್ದು ಆರ್ಥಿಕ ಸಂಕಷ್ಟದಲ್ಲಿದ್ದಾರೆ. ನಾಲ್ಕೈದು ವರ್ಷಗಳಿಂದ ಡ್ಯಾಂಗೆ ನೀರು ಹರಿದು ಬಂದಿಲ್ಲ. ಕಾಲುವೆಗಳಿಗೆ ನೀರು ಹರಿಸಿಲ್ಲ. ಇದರಿಂದಾಗಿ ಕಾಲುವೆಯಲ್ಲಿ ಉಡಾ, ಇಲಿ ಹೆಗ್ಗಣ ರಂಧ್ರ ಮಾಡಿರುತ್ತವೆ, ಜತೆಗೆ ನೀರು ಹರಿಸುವ ಗೇಟ್‌ಗಳು ಸಹ ದುರಸ್ತಿಯಾಗಿದ್ದು ಇವುಗಳನ್ನು ಸರಿಪಡಿಸದೇ ಇರುವ ಕಾರಣ ಕಾಲುವೆಯಲ್ಲಿ ಬೋಂಗಾ ಬಿಳುತ್ತಿವೆ. ಈ ಬಗ್ಗೆ ನಿರ್ಲಕ್ಷ್ಯ ವಹಿಸಿರುವ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕಿದೆ.

ಮುಂಗಾರು ಭತ್ತವನ್ನು ಜುಲೈ ಕೊನೆ ಅಥವಾ ಆಗಸ್ಟ್‌ ಮೊದಲ ವಾರದಲ್ಲಿ ನಾಟಿ ಮಾಡಿದರೆ ಉತ್ತಮ ಇಳುವರಿ ಪಡೆಯಲು ಸಾಧ್ಯವಾಗುತ್ತದೆ. ಸೆಪ್ಟೆಂಬರ್‌ ಮಧ್ಯೆದಲ್ಲಿ ಚಳಿಗಾಲ ಆರಂಭವಾಗುವುದರಿಂದ ಕಾಳು ಕಟ್ಟುವ ಹಂತದಲ್ಲಿರುವ ಭತ್ತ ಜೊಳ್ಳಾಗುತ್ತದೆ. ಇದರಿಂದ ರೈತರಿಗೆ ಇಳುವರಿ ಕಡಿಮೆಯಾಗುವ ಸಾಧ್ಯತೆ ಇರುತ್ತದೆ. ಈ ಭಾರಿ ಮುಂಗಾರು ಮಳೆ ತಡವಾಗಿ ಬಂದಿದ್ದರಿಂದ ಚಳಿಯೂ ತಡವಾಗಿ ಬರುವ ಸಾಧ್ಯತೆ ಇದ್ದು, ಕಾಲುವೆಗೆ ನೀರನ್ನು ಬೇಗನೆ ಹರಿಸಬೇಕೆಂಬುದು ರೈತರ ಅಭಿಪ್ರಾಯವಾಗಿದೆ.

• ಮುಂಗಾರು ಕಳೆದರೂ ಆರಂಭಗೊಳ್ಳದ ಕೃಷಿ ಚಟುವಟಿಕೆ

Advertisement

• ಆಗಸ್ಟ್‌ ಕೊನೆವರೆಗೂ ಭತ್ತ ನಾಟಿಗೆ ಅನುಕೂಲ

ಡ್ಯಾಂ ಹತ್ತಿರ ಇರುವ ಮೇಲ್ಮಟ್ಟದ ಕಾಲುವೆ ಗೇಟ್ ಮುರಿದ ಪರಿಣಾಮವಾಗಿ ಎಡದಂಡೆ ಕಾಲುವೆಯ ಅಂಡರ್‌ ಟ್ಯೂನೆಲ್ ಸೋರಿಕೆಯಾಗಿದೆ. ಒಂದೆರಡು ದಿನಗಳಲ್ಲಿ ದುರಸ್ತಿ ಕಾರ್ಯ ಮುಗಿಸಿ ಸೋಮವಾರ ತಡರಾತ್ರಿ ಎಡದಂಡೆ ಕಾಲುವೆಗೆ ನೀರು ಹರಿಸಲಾಗುತ್ತದೆ. ರೈತರು ಆತಂಕಪಡುವ ಅವಶ್ಯವಿಲ್ಲ. ಕೊನೆಭಾಗದ ರೈತರಿಗೂ ನೀರು ತಲುಪಿಸಲು ತುಂಗಭದ್ರಾ ಯೋಜನೆಯ ಅಧಿಕಾರಿಗಳು ಶ್ರಮವಹಿಸಿದ್ದು, ಜನಪ್ರತಿನಿಧಿಗಳ ಸಲಹೆ ಸೂಚನೆ ಪಡೆದು ರೈತರ ಬೆಳೆ ನೀರು ಹರಿಸಲಾಗುತ್ತದೆ. •ಎಚ್.ಎಸ್‌. ಮಂಜಪ್ಪ ಪವಾರ್‌, ಮುಖ್ಯ ಅಭಿಯಂತರ ತುಂಗಭದ್ರಾ ಯೋಜನೆ
•ಕೆ.ನಿಂಗಜ್ಜ
Advertisement

Udayavani is now on Telegram. Click here to join our channel and stay updated with the latest news.

Next