Advertisement

ಡ್ಯಾಂ ಭರ್ತಿ ಆದರಷ್ಟೇ ಲೋಕಾರ್ಪಣೆ

12:34 PM Nov 05, 2021 | Team Udayavani |

ಬಂಗಾರಪೇಟೆ: ಯರಗೋಳ್‌ ಅಣೆಕಟ್ಟು ಕಾಮಗಾರಿ ಸಂಪೂರ್ಣ ಮುಗಿದಿದ್ದು, ಮಳೆರಾಯನ ಕೃಪೆಯಿಂದ ಅಣೆಕಟ್ಟು ತುಂಬಿದ ಬಳಿಕವಷ್ಟೆ ಮುಖ್ಯಮಂತ್ರಿ ಗಳಿಂದ ಉದ್ಘಾಟನೆ ಮಾಡಲಾಗುತ್ತದೆ ಎಂದು ಕೋಲಾರ ಶಾಸಕ ಕೆ.ಶ್ರೀನಿವಾಸಗೌಡ ಹೇಳಿದರು. ತಾಲೂಕಿನ ಬೂದಿಕೋಟೆ ಹೋಬಳಿಯ ಯರಗೋಳ್‌ ಅಣೆಕಟ್ಟು ಬಳಿಗೆ ಬುಧವಾರ ಭೇಟಿ ನೀಡಿ ಮಾತನಾಡಿದ ಅವರು, ಮೊದಲಿನಿಂದಲೂ ಕೋಲಾರ ಜಿಲ್ಲೆಯಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರ ಇತ್ತು.

Advertisement

ಅಂತಹ ಪರಿಸ್ಥಿತಿಯಲ್ಲಿ ಮಾರ್ಕಂಡೇಯ ಡ್ಯಾಂನಿಂದ ನೀರು ಹರಿದು ತಮಿಳುನಾಡಿಗೆ ವ್ಯರ್ಥವಾಗಿ ಹೋಗುತ್ತಿತ್ತು. 2006ರಲ್ಲಿ ನಾನು ಕೃಷಿ ಸಚಿವರಾಗಿದ್ದಾಗ ಈ ಸ್ಥಳಕ್ಕೆ ಭೇಟಿ ನೀಡಿ ಬಂಗಾರಪೇಟೆ, ಕೋಲಾರ, ಮಾಲೂರು ಸೇರಿದ ಮೂರು ನಗರಗಳಿಗೆ ಮತ್ತು ಮಾರ್ಗ ಮಧ್ಯೆ 45 ಹಳ್ಳಿಗಳಿಗೆ ಕುಡಿಯುವ ನೀರನ್ನು ಒದಗಿಸುವ ಉದ್ದೇಶದಿಂದ ಧರ್ಮಸಿಂಗ್‌ ಮಖ್ಯಮಂತ್ರಿಗಳಾಗಿದ್ದಾಗ ಅವರೊಂದಿಗೆ ಚರ್ಚಿಸಿ ಯರಗೋಳ್‌ ಯೋಜನೆ ರೂಪಿಸಲಾಗಿದೆ ಎಂದು ಹೇಳಿದರು. ಅಂದಿನಿಂದ ಇಲ್ಲಿಯವರೆಗೂ ಕಾಮಗಾರಿ ನಡೆಯುತ್ತಾ ಬಂದಿದ್ದು, ಕಾಮಗಾರಿ ಸಹ ಮುಕ್ತಾಯ ಹಂತ ತಲುಪಿದೆ.

ಇದನ್ನೂ ಓದಿ:- ವ್ಯಾಲಿ ನೀರು ಚಿತ್ರಾವತಿ ನದಿಗೆ ಸೇರಿಲ್ಲ

ಈಗ ಮಳೆ ನೀರು ಹಿಡಿದಿಡುವ ಕೆಲಸ ನಡೆಯುತ್ತಿದ್ದು, ಮುಂದಿನ ಆರು ತಿಂಗಳಲ್ಲಿ ಎಲ್ಲಾ ಕಾಮಗಾರಿ ಸಂಪೂರ್ಣ ಮುಗಿಯಲಿದೆ. ಕಾಮಗಾರಿ ಮುಗಿದ ಮೇಲೆ ಎಲ್ಲೆಲ್ಲಿ ಪೈಪ್‌ ಲೈನ್‌ ಅಳವಡಿಸಲಾಗಿದೆ, ಎಲ್ಲಿ ಬಾಕಿ ಇದೆ ಎಂಬುದನ್ನು ಅಧಿಕಾರಿಗಳಿಂದ ಮಾಹಿತಿ ಪಡೆದು ಎಲ್ಲೆಲ್ಲಿ ನೀರು ಹರಿಸಬೇಕು ಎಂಬುದರ ಕಡೆ ಗಮನ ಹರಿಸಲಾಗುತ್ತದೆ ಎಂದರು. ಈಗಾಗಲೇ ಹಲವು ಬಾರಿ ಯರಗೋಳ್‌ ಅಣೆಕಟ್ಟು ಲೋಕಾರ್ಪಣೆಗೆ ದಿನಾಂಕ ನಿಗದಿ ಮಾಡಿ ಅಣೆಕಟ್ಟು ತುಬುವ ವರೆಗೂ ಲೋಕಾರ್ಪಣೆ ಬೇಡ ಎಂದು ಮುಂದೂಡಲಾಗಿದೆ.

ಕಾಮಗಾರಿ ಸಂಪೂರ್ಣ ಮುಗಿದು ನೀರು ತುಂಬಿ ದ ಬಳಿಕ ಮುಖ್ಯಮಂತ್ರಿಗಳನ್ನು ಕರೆಯಿಸಿ ಅವರಿಂದ ಉದ್ಘಾಟನೆ ಮಾಡಲಾಗುತ್ತದೆ. ಕೋಲಾರ ಹಾಗೂ ಮಾಲೂರು ಭಾಗದಲ್ಲಿ ಈಗಾಗಲೇ ಬಹಳಷ್ಟು ಕೆ.ಸಿ. ವ್ಯಾಲಿ ನೀರು ಹರಿಯುತ್ತಿದ್ದು, ಆದಷ್ಟು ಬೇಗ ಮಾರ್ಕಂಡೇಯ ಡ್ಯಾಂಗೂ ನೀರನ್ನು ಹರಿಸಿ ಅಲ್ಲಿಂದ ಯರಗೋಳ್‌ ಅಣೆಕಟ್ಟು ಸಹ ಭರ್ತಿ ಮಾಡಲಾಗುತ್ತದೆ ಎಂದರು. ಕೋಲಾರ ನಗರಸಭೆ ಮಾಜಿ ಸದಸ್ಯ ತ್ಯಾಗರಾಜ್‌ ಜೊತೆಗಿದ್ದರು.

Advertisement

ಎಚ್‌ಡಿಕೆಯನ್ನು ಮರೆತರು: 2006ರಲ್ಲಿ ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್‌ ಸಮ್ಮಿಶ್ರ ಸರ್ಕಾರವು ಅಸ್ತಿತ್ವದಲ್ಲಿದ್ದ ಸಂದರ್ಭದಲ್ಲಿ ಕೋಲಾರದ ಶ್ರೀನಿವಾಸಗೌಡ ಕಾಂಗ್ರೆಸ್‌ ಪಕ್ಷದಲ್ಲಿದ್ದರು. ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿಯಾಗಿದ್ದ ಎಚ್‌.ಡಿ.ಕುಮಾರಸ್ವಾಮಿ ಸ್ವತಃ ಕೋಲಾರಕ್ಕೆ ಬಂದು ಅಲ್ಲಿಂದಲೇ 240 ಕೋಟಿ ರೂ. ವೆಚ್ಚದ ಯರಗೋಳ್‌ ಅಣೆಕಟ್ಟು ನಿರ್ಮಾಣಕ್ಕೆ ಮೊದಲ ಕಂತಾಗಿ 50 ಕೋಟಿ ರೂ. ಬಿಡುಗಡೆ ಮಾಡಿ ಉದ್ಘಾಟನೆ ಮಾಡಿದ್ದರು. ಆದರೆ, ಶ್ರೀನಿವಾಸಗೌಡರು ಇದೀಗ ಜೆಡಿಎಸ್‌ನಿಂದ ಗೆದ್ದಿದ್ದರೂ ಕಾಂಗ್ರೆಸ್‌ ಸೇರುವ ಬಗ್ಗೆ ಘೋಷಣೆ ಮಾಡಿದ ಬೆನ್ನಲ್ಲೆ ಎಚ್‌.ಡಿ.ಕುಮಾರಸ್ವಾಮಿ ಅವರನ್ನು ಮರೆತು ಯಾವುದೇ ಸಂಬಂಧವಿಲ್ಲದ ಕಾಂಗ್ರೆಸ್‌ನ ಮಾಜಿ ಮುಖ್ಯಮಂತ್ರಿ ದಿವಂಗತ ಧರ್ಮಸಿಂಗ್‌ ಹೆಸರೇಳಿ ರುವುದು ಗೊಂದಲಕ್ಕೆ ಎಡೆಮಾಡಿಕೊಟ್ಟಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next