Advertisement

ದಲಿತರಿಗೆ ದೇಗುಲ ಪ್ರವೇಶವಿಲ್ಲ, ಕ್ಷೌರವೂ ಇಲ್ಲ!

09:26 PM May 06, 2019 | Lakshmi GovindaRaj |

ಹುಣಸೂರು: ತಾಲೂಕಿನ ಬಿಳಿಗೆರೆ, ಯಮಗುಂಬ, ಮುಳ್ಳೂರು ಹಾಗೂ ಬಿಳಿಕೆರೆ ಹೋಬಳಿಯ ಕೆಲ ಗ್ರಾಮಗಳಲ್ಲಿ ಮುಜರಾಯಿ ಇಲಾಖೆಗೆ ಸೇರಿದ ದೇವಾಲಯದಲ್ಲಿ ದಲಿತರಿಗೆ ಪ್ರವೇಶ ಸಿಗುತ್ತಿಲ್ಲ. ಈ ಕುರಿತು ಪೊಲೀಸ್‌, ಸಮಾಜಕಲ್ಯಾಣ ಇಲಾಖೆ ಸಂಯುಕ್ತಾಶ್ರಯದಲ್ಲಿ ಸಭೆ ನಡೆಸಿ ಸಮಸ್ಯೆ ಇತ್ಯರ್ಥ ಪಡಿಸಬೇಕು ಎಂದು ದಲಿತ ಮುಖಂಡ ನಿಂಗರಾಜ ಮಲ್ಲಾಡಿ ಆಗ್ರಹಿಸಿದರು.

Advertisement

ನಗರದ ವೃತ್ತ ನಿರೀಕ್ಷಕರ ಕಚೇರಿ ಆವರಣದಲ್ಲಿ ವೃತ್ತ ನಿರೀಕ್ಷಕ ಶಿವಕುಮಾರ್‌ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ತಾಲೂಕು ಮಟ್ಟದ ಎಸ್ಸಿ, ಎಸ್ಟಿ ಕುಂದುಕೊರತೆ ಸಭೆಯಲ್ಲಿ ಅವರು ಅವಲತ್ತುಕೊಂಡರು.

ಕ್ಷೌರ ನಿರಾಕರಣೆ: ತಾಲೂಕಿನಾದ್ಯಂತ ಮುಜರಾಯಿ ಇಲಾಖೆಗೆ ಸೇರಿದ ದೇವಾಲಯಗಳಲ್ಲಿ ಮುಕ್ತ ಪ್ರವೇಶ ಸಾರುವ ನಾಮಫಲಕ ಅಳವಡಿಸಬೇಕು. ತಾಲೂಕಿನ ಹಿರಿಕ್ಯಾತನಹಳ್ಳಿ ಮತ್ತು ಮುಳ್ಳೂರು ಗ್ರಾಮಗಳಲ್ಲಿ ದಲಿತರಿಗೆ ಸವಿತಾ ಸಮಾಜದವರು ಕ್ಷೌರ ಮಾಡುತ್ತಿಲ್ಲ.

ಈ ಕುರಿತು ಹಲವಾರು ಬಾರಿ ತಾಲೂಕು ಆಡಳಿತಕ್ಕೆ ಮನವಿ ಸಲ್ಲಿಸಲಾಗಿದ್ದರೂ ಪ್ರಯೋಜನವಾಗಿಲ್ಲ. ಮಾದಳ್ಳಿ ಮಠ ವ್ಯಾಪ್ತಿಯಲ್ಲಿ 7 ಬೋವಿ ಸಮುದಾಯದ ಕುಟುಂಬಗಳು ನಿರಾಶ್ರಿತರಾಗಿ ಬದುಕುತ್ತಿದ್ದು, ನಿವೇಶನ ಮತ್ತು ವಸತಿ ಒದಗಿಸಬೇಕೆಂದು ಮನವಿ ಮಾಡಿದರು.

ನಿಷೇಧವಿದ್ದರೂ ಸಂಚಾರ: ನಗರದ ಹಳೇ ಸೇತುವೆ ಮೇಲೆ ಭಾರೀ ವಾಹನಗಳ ಸಂಚಾರಕ್ಕೆ ನಿರ್ಬಂಧ ವಿಧಿಸಿದ್ದರೂ ಈ ಸೇತುವೆ ಮೇಲೆ ಸಂಚಾರ ಹೆಚ್ಚಾಗಿದ್ದು, ಅಪಘಾತಕ್ಕೆ ಕಾರಣವಾಗಿದೆ. ಅಲ್ಲದೇ ರಾತ್ರಿ ವೇಳೆ ಎಲ್ಲಾ ಬಸ್‌ಗಳು ಇದೇ ಸೇತುವೆ ಮಾರ್ಗವಾಗಿ ಹೋಗುತ್ತಿವೆ. ಇತ್ತೀಚೆಗೆ ಶಾಲಾ ವಿದ್ಯಾರ್ಥಿ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಈ ಹಿಂದೆ ಈ ರಸ್ತೆಗೆ ಅಡ್ಡಲಾಗಿ ಕಲ್ಲುಗಳನ್ನು ಇಟ್ಟು ಭಾರೀ ವಾಹನಗಳನ್ನು ನಿಯಂತ್ರಿಸಲಾಗಿತ್ತು. ಮತ್ತೆ ಕಲ್ಲುಗಳನ್ನು ಅಳವಡಿಸಬೇಕೆಂದು ಮನವಿ ಮಾಡಿದರು.

Advertisement

ಭಯ ವಾತಾವರಣ: ಕಟ್ಟೆಮಳಲವಾಡಿ ಗ್ರಾಪಂ ಸದಸ್ಯ ಹರೀಶ್‌ ಮಾತನಾಡಿ, ನಗರದ ಬಸ್‌ ನಿಲ್ದಾಣ ಮತ್ತಿತರ ಕಡೆಗಳಲ್ಲಿ ಪುಂಡರ ಹಾವಳಿ ಮಿತಿ ಮೀರಿದೆ. ಬೆಳಗ್ಗಿನ ವೇಳೆ ಮೈಸೂರು ಕಾಲೇಜಿಗೆ ಹೆಣ್ಣುಮಕ್ಕಳು ಹೋಗಲು ಹಿಂಜರಿಯುತ್ತಿದ್ದಾರೆ. ಇನ್ನು ಪ್ರೀತಿ-ಪ್ರೇಮದ ಹೆಸರಿನಲ್ಲಿ ಕಾಲೇಜಿಗೆ ಹಳ್ಳಿಯಿಂದ ಬರುವ ಯುವತಿಯರನ್ನು ಪುಸಲಾಯಿಸಿ ಕರೆದೊಯ್ದು ರಾಮೇನಹಳ್ಳಿಬೆಟ್ಟ, ಪಂಪ್‌ಹೌಸ್‌, ಕಲ್‌ ಬೆಟ್ಟ ಬಳಿಯಲ್ಲಿ ಮೋಜು ಮಸ್ತಿ ಮಾಡಲಾಗುತ್ತಿದ್ದು, ಈ ಬಗ್ಗೆ ಕಠಿಣ ಕ್ರಮವಾಗಬೇಕೆಂದು ಕೋರಿದರು.

ಇದಕ್ಕೆ ಪ್ರತಿಕ್ರಿಯಿಸಿದ ಗ್ರಾಮಾಂತರ ಠಾಣೆ ಪಿಎಸ್ಸೆ„ ಶಿವಪ್ರಕಾಶ್‌, ಬಿಳಿಗೆರೆಯಲ್ಲಿ ಎರಡೂ ಕೋಮಿನ ಮುಖಂಡರ ಸಭೆಯನ್ನು ಮೂರು ಬಾರಿ ಆಯೋಜಿಸಲಾಗಿತ್ತು. ಎರಡೂ ಕೋಮಿನವರು ತಮ್ಮ ತಮ್ಮ ಸಮುದಾಯದ ಹಿರಿಯರು ಹೇಳಿದರೆ ಮಾತ್ರ ಸಭೆಗೆ ಬರುವುದಾಗಿ ತಿಳಿಸುತ್ತಿದ್ದಾರೆ ಎಂದರು.

ವೃತ್ತನಿರೀಕ್ಷಕ ಶಿವಕುಮಾರ್‌ ಪ್ರತಿಕ್ರಿಯಿಸಿ, ದಲಿತ ಮುಖಂಡರೇ ದಿನಾಂಕ ನಿಗದಿಪಡಿಸಿ ನಗರದ ವೃತ್ತ ನಿರೀಕ್ಷಕರ ಕಚೇರಿಯಲ್ಲೇ ಎಲ್ಲರನ್ನೂ ಕರೆತಂದರೆ ಸಭೆ ನಡೆಸಿ ಸಮಸ್ಯೆ ಪರಿಹರಿಸಬಹುದು ಎಂದು ಹೇಳಿದರು.

ರೌಡಿಶೀಟರ್‌: ಹುಣಸೂರು ನಗರದ ಸದಾಶಿವನಕೊಪ್ಪಲು ಬಡಾವಣೆಯ ದಲಿತ ಯುವಕ ಸುನೀಲ್‌ನನ್ನು ರೌಡಿಶೀಟರ್‌ ಪ್ರಕರಣದಲ್ಲಿ ದಾಖಲಿಸಿದ್ದೀರಿ. ಆತ ಈ ಸಮಾಜಕ್ಕೆ ಯಾವುದೇ ತೊಂದರೆ ನೀಡಿದವನಲ್ಲ. ಹನುಮ ಜಯಂತಿ ಆಚರಣೆಯಲ್ಲಿ ಭಾಗವಹಿಸಿದ್ದಾನಷ್ಟೆ. ಪದೇ ಪದೆ ಆತನ ವಿರುದ್ಧ ಕಾನೂನು ಕ್ರಮ ಜರುಗಿಸಿದಲ್ಲಿ ಆತನ ಭವಿಷ್ಯ ಹಾಳಾಗುತ್ತದೆಂದು ನಿಂಗರಾಜ ಮಲ್ಲಾಡಿ ಅವಲತ್ತುಕೊಂಡರು.

ಇದಕ್ಕೆ ಉತ್ತರಿಸಿದ ವೃತ್ತ ನಿರೀಕ್ಷಕ ಶಿವಕುಮಾರ್‌, ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳು ಸುನೀಲ್‌ನನ್ನು ಗಡಿಪಾರು ಮಾಡಿದ್ದರು. ಆದರೆ, ಆತನ ಚುನಾವಣೆ ದಿನ ಇಲ್ಲಿಗೆ ಬಂದು ಪೊಲೀಸರೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾನೆ. ಇನ್ನು ಹಲವು ಆರೋಪಗಳು ಅವನ ಮೇಲಿವೆ. ಕಾರಣವಿಲ್ಲದೆ ಯಾರ ಮೇಲೂ ಪೊಲೀಸರು ಕಾನೂನು ಕ್ರಮ ಜರುಗಿಸುವುದಿಲ್ಲ, ಈ ಬಗ್ಗೆಯೂ ಮುಖಂಡರು ತಿಳಿದಿರಬೇಕೆಂದರು.

ಸಭೆಯಲ್ಲಿ ಎಸ್‌ಐಗಳಾದ ಮಹೇಶ್‌, ಎಂ.ನಾಯಕ್‌, ದಲಿತ ಮುಖಂಡರಾದ ಶಿವಣ್ಣ, ಕಿರುಂಗೂರು ಸ್ವಾಮಿ, ವಕೀಲ ಪುಟ್ಟರಾಜು, ಬಾಚಳ್ಳಿ ರಾಜು, ಸರಸ್ವತಿಪುರಂನ ರಾಚಯ್ಯ, ಕಟ್ಟೆಮಳಲವಾಡಿ ಹರೀಶ್‌, ಗಾಯತ್ರಿ, ಗೌರಮ್ಮ ಇತರರು ಉಪಸ್ಥಿತರಿದ್ದರು.

ಪುಂಡರ ಹಾವಳಿ ನಿಯಂತ್ರಿಸಿ: ನಗರದ ಕೋಟೆ ವೃತ್ತದ ಬಳಿಯ ಮಹಿಳಾ ಕಾಲೇಜು ಆವರಣದ ಬಳಿ ಕಾಲೇಜು ವೇಳೆಯಲ್ಲಿ ಪುಂಡರ‌ ಹಾವಳಿ ಮಿತಿ ಮೀರಿದೆ. ಇದರಿಂದ ಕಾಲೇಜಿನ ಶೈಕ್ಷಣಿಕ ವಾತಾವರಣ ಮತ್ತು ವಿದ್ಯಾರ್ಥಿನಿಯರು ಭಯದಿಂದಿದ್ದು, ಪೊಲೀಸರು ಬಿಗಿ ಕ್ರಮ ಕೈಗೊಳ್ಳಬೇಕೆಂದು ದಲಿತ ಸಂಘರ್ಷ ಸಮಿತಿ ಮುಖಂಡ ಬಲ್ಲೇನಹಳ್ಳಿ ಕೆಂಪರಾಜು ಆಗ್ರಹಿಸಿದರು. ನಗರದಲ್ಲಿ ಹಗಲು ವೇಳೆಯೇ ಬೈಕ್‌ ವ್ಹೀಲಿಂಗ್‌ ಸಿಕ್ಕಾಪಟ್ಟೆ ನಡೆಯುತ್ತಿದೆ. ಜನದಟ್ಟಣೆ ಇರುವೆಡೆ ಬೇಕಾಬಿಟ್ಟಿಯಾಗಿ ಬೈಕ್‌ ಓಡಿಸಲಾಗುತ್ತಿದೆ. ಈ ಕುರಿತು ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next