Advertisement

ದಲಿತರ ಮೇಲೆ ಹಲ್ಲೆ ಪ್ರಕರಣ: ಆಕ್ರೋಶ

12:50 PM Feb 01, 2017 | |

ಕಲಬುರಗಿ: ಇತ್ತೀಚಿನ ದಿನಗಳಲ್ಲಿ ಜಿಲ್ಲೆಯಲ್ಲಿ ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿವೆ ಎಂದು ಆತಂಕ ವ್ಯಕ್ತಪಡಿಸಿರುವ ದಲಿತ ಸಂಘಟನೆಗಳ ಸಮನ್ವಯ ಸಮಿತಿಯ ಸಾವಿರಾರು ಕಾರ್ಯಕರ್ತರು, ಮಂಗಳವಾರ ನಗರದಲ್ಲಿ ಬೃಹತ್‌ ಪ್ರತಿಭಟನೆ ನಡೆಸಿ ಕೂಡಲೆ ಆರೋಪಿಗಳನ್ನು ಬಂಧಿಧಿಸುವಂತೆ ಆಗ್ರಹಿಸಿದರು. 

Advertisement

ನಗರದ ಎಂಎಸ್‌ಕೆಮಿಲ್‌ ಪ್ರದೇಶದ ದೀಕ್ಷಾ ಮೈದಾನದಿಂದ ಬೃಹತ್‌ ಪ್ರತಿಭಟನಾ ಮೆರವಣಿಗೆ ಮೂಲಕ ಈಶಾನ್ಯ ವಲಯ ಪೊಲೀಸ್‌ ಮಹಾ ನಿರೀಕ್ಷಕರ ಕಚೇರಿವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಿ ಐಜಿ ಕಚೇರಿಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು. ಸೇಡಂ ತಾಲೂಕಿನ ಕೋಡ್ಲಾ ಗ್ರಾಮದಲ್ಲಿ ಮಹಾಪರಿನಿರ್ವಾಣ ದಿನದಂದೆ ಡಾ| ಅಂಬೇಡ್ಕರ್‌ ಕಟ್ಟೆಯನ್ನು ಧ್ವಂಸಗೊಳಿಸಿದ್ದು, ಧ್ವಜಸ್ತಂಭ ಕಿತ್ತು ಹಾಕಲಾಗಿದೆ.

ಆರೋಪಿಗಳನ್ನು ಬಂಧಿಸುವ ಬದಲು 27 ಜನ ದಲಿತರ ಮೇಲೆ ಸುಳ್ಳು ಪ್ರಕರಣ ದಾಖಲಿಸಲಾಗಿದೆ. ಆಳಂದ ತಾಲೂಕಿನ ಧುತ್ತರಗಾಂವ ಗ್ರಾಮದಲ್ಲಿ ಬುದ್ಧ, ಬಸವ, ಅಂಬೇಡ್ಕರ್‌ ಅವರ ನಾಮಫಲಕ ಕಿತ್ತು ಹಾಕಿ ಅವಮಾನಗೊಳಿಸಿದ್ದನ್ನು ಖಂಡಿಸಿ ಪ್ರತಿಭಟಿಸಿದ ದಲಿತರ ಮೇಲೆ ಲಾಠಿ ಪ್ರಹಾರ ಮಾಡಿ ಸುಳ್ಳು ಪ್ರಕರಣ ದಾಖಲಿಸಿ ಜೈಲಿಗೆ ತಳ್ಳಲಾಗಿದೆ.

ಚಿಂಚೋಳಿ ತಾಲೂಕಿನ ಗಾರಂಪಳ್ಳಿ ಗ್ರಾಮದಲ್ಲಿ ಅಂಬೇಡ್ಕರ್‌ ನಾಮಫಲಕಕ್ಕೆ ಅವಮಾನಗೊಳಿಸಲಾಗಿದೆ. ನೀಲಿ ಧ್ವಜ, ಪಂಚಶೀಲ ಧ್ವಜ ಕಿತ್ತುಹಾಕಲಾಗಿದೆ. ಜೇವರ್ಗಿ ತಾಲೂಕಿನ ಮಂದೇವಾಲ್‌ ಗ್ರಾಮದಲ್ಲಿ ಸವರ್ಣಿಯರು ಹಲ್ಲೆ ನಡೆಸಿದ್ದರೂ ಆರೋಪಿಗಳನ್ನು ಬಂಧಿಸಿಲ್ಲ.

ಅದೇ ರೀತಿ ಜೇವರ್ಗಿಯಲ್ಲಿ ಗಣಪತಿ ಕೋಬಾಳ್‌ ಎನ್ನುವ ದಲಿತ ಯುವಕನ ಹತ್ಯೆ ಪ್ರಕರಣ, ಸಂಗಾವಿ ಗ್ರಾಮದ ಮಾರುತಿ ಶಿವಲಿಂಗಪ್ಪ ಹತ್ಯೆ ಪ್ರಕರಣ, ಗೋಳಾ ಗ್ರಾಮದ ಶಾಂತಪ್ಪ ಹತ್ಯೆ ಪ್ರಕರಣ ಬೇಧಿಧಿಸುವಲ್ಲಿ ಪೊಲೀಸರು ವಿಫಲವಾಗಿದ್ದಾರೆ ಎಂದು ಘೋಷಣೆಗಳನ್ನು ಕೂಗಿದರು. 

Advertisement

ದಲಿತರ ಮೇಲಿನ ಹಲ್ಲೆ ತಡೆಯಲು ಹಾಗೂ ಆರೋಪಿಗಳನ್ನು ಬಂಧಿಸುವಲ್ಲಿ ವಿಫಲತೆ ಹೊಂದಿರುವ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳನ್ನು ಅಮಾನತುಗೊಳಿಸುವಂತೆ ಹಾಗೂ ಆರೋಪಿಗಳನ್ನು ಬಂಧಿಸಿ ಗಡಿಪಾರು ಮಾಡುವಂತೆ, ಧ್ವಂಸಗೊಳಿಸಿದ ಅಂಬೇಡ್ಕರ್‌ ಕಟ್ಟೆ, ನೀಲಿ ಧ್ವಜ, ಪಂಚಶೀಲ ಧ್ವಜಗಳನ್ನು ಸರ್ಕಾರವೇ ಪುನರ್‌ ಪ್ರತಿಷ್ಠಾಪಿಸುವಂತೆ, ಎಸ್‌ಸಿ, ಪಿ/ಟಿ ವಿಶೇಷ ಘಟಕ ಯೋಜನೆಗಳಲ್ಲಿ ನಡೆದಿರುವ ಅವ್ಯವಹಾರಗಳ ಕುರಿತು ಸಂಪೂರ್ಣ ತನಿಖೆ ಕೈಗೊಂಡು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಪ್ರತಿಭಟನಾಕಾರರು ಆಗ್ರಹಿಸಿದರು. 

ಮೈಸೂರಿನ ಗುರುಲಿಂಗಪೆದ್ದಿ ಸಂಸ್ಥಾನಮಠದ ಜ್ಞಾನಪ್ರಕಾಶ ಸ್ವಾಮೀಜಿ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಹಿರಿಯ ಮುಖಂಡರಾದ ಡಾ| ವಿಠಲ್‌ ದೊಡ್ಡಮನಿ, ಬಸಣ್ಣ ಸಿಂಗೆ, ಅರ್ಜುನ್‌ ಭದ್ರೆ, ಎ.ಬಿ. ಹೊಸಮನಿ, ಸೂರ್ಯಕಾಂತ್‌ ನಿಂಬಾಳಕರ್‌, ಪ್ರಕಾಶ್‌ ಮೂಲಭಾರತಿ, ದತ್ತಾತ್ರೇಯ್‌ ಇಕ್ಕಳಕಿ, ಸಚಿನ್‌ ಫರತಾಬಾದ ಹಾಗೂ ಮುಂತಾದವರು ಪಾಲ್ಗೊಂಡಿದ್ದರು.   

Advertisement

Udayavani is now on Telegram. Click here to join our channel and stay updated with the latest news.

Next