ಸಾಗರ: ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ತಾವೇ ಎಂದು ಬಿಂಬಿಸಿಕೊಳ್ಳುತ್ತಿರುವ ಗುರುಮೂರ್ತಿ ಶಿವಮೊಗ್ಗ ಅವರು ಅಧಿಕೃತ ದಾಖಲೆ ತಂದು ತೋರಿಸಲಿ ಎಂದು ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಚಿನ್ನಯ್ಯ ಸವಾಲು ಹಾಕಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಚೆಗೆ ಗುರುಮೂರ್ತಿ ಎಂಬುವವರು ಭದ್ರಾವತಿ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ 2021 ನೇ ಸಾಲಿನಲ್ಲಿ ದಲಿತ ಸಂಘರ್ಷ ಸಮಿತಿಯ ಪ್ರೊ. ಬಿ. ಕೃಷ್ಣಪ್ಪ ಬಣದ ರಾಜ್ಯ ಸಂಚಾಲಕ ಎಂದು ತೀರ್ಮಾನವಾಗಿದೆ ಎಂದು ನೀಡಿರುವ ಹೇಳಿಕೆ ಶುದ್ಧ ಸುಳ್ಳಾಗಿದ್ದು, ಹಾಲಿ ಪ್ರಕರಣ ಭದ್ರಾವತಿ ಹಿರಿಯ ನ್ಯಾಯಾಲಯದಲ್ಲಿ ಇನ್ನೂ ನಡೆಯುತ್ತಿದೆ ಎಂದು ಹೇಳಿದರು.
ದಲಿತ ಸಂಘರ್ಷ ಸಮಿತಿ ಹೆಸರನ್ನು ಗುರುಮೂರ್ತಿ ತಮ್ಮ ರಿಯಲ್ ಎಸ್ಟೆಟ್ ಸೇರಿದಂತೆ ಇತರ ಕೆಲಸಗಳಿಗೆ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಪ್ರಾಮಾಣಿಕವಾಗಿ ದಲಿತರ ಪರ ಹೋರಾಟ ಮಾಡುತ್ತಿರುವವರ ವಿರುದ್ಧ ಸುಳ್ಳು ದೂರುಗಳನ್ನು ದಾಖಲಿಸಿ ಕಿರಿಕಿರಿ ಉಂಟು ಮಾಡುತ್ತಿದ್ದಾರೆ. ಅಧಿಕೃತ ಸಮಿತಿ ಕುರಿತ ವಿಚಾರಣೆ ಸಂದರ್ಭದಲ್ಲಿ ದಾಖಲೆಯೊಂದಿಗೆ ಪೊಲೀಸ್ ಠಾಣೆಗೆ ಹಾಜರಾಗಿ ಎಂದರೆ ಗುರುಮೂರ್ತಿ ಹಾಜರಾಗುತ್ತಿಲ್ಲ. ಗುರುಮೂರ್ತಿ ಅವರೇ ಸಮಿತಿಯ ರಾಜ್ಯ ಸಂಚಾಲಕನೆಂದು ತಿಳಿಸಲು ಅಗತ್ಯವಾದ ಯಾವುದೇ ದಾಖಲೆ ಅವರ ಬಳಿ ಇಲ್ಲ ಎಂದು ಹೇಳಿದರು.
ಇತರರು ಗಂಜಿ ಗಿರಾಕಿಗಳೆಂದು ಹೇಳುವ ಗುರುಮೂರ್ತಿಯವರು ತಾವೇ ರಾಜ್ಯ ಸಂಚಾಲಕ ಎಂದು ಸಾಬೀತುಪಡಿಸುವ ಆದೇಶ ಪ್ರತಿಯನ್ನು ತೋರಿಸಲಿ. ರಾಜ್ಯದಲ್ಲಿ ಕಳೆದ ಒಂದು ವರ್ಷದಲ್ಲಿ ದಲಿತ ಜನಾಂಗದ ಏಳಕ್ಕೂ ಹೆಚ್ಚು ಜನರ ಮೇಲೆ ದಬ್ಬಾಳಿಕೆ, ಕೊಲೆ, ಅತ್ಯಾಚಾರದಂತಹ ಘಟನೆ ನಡೆದಿದೆ. ಈ ಬಗ್ಗೆ ಗುರುಮೂರ್ತಿ ಧ್ವನಿ ಎತ್ತಿದ ಒಂದು ದಾಖಲೆಯಿಲ್ಲ. ಕನಿಷ್ಠ ಸಂತ್ರಸ್ತ ಕುಟುಂಬ ಭೇಟಿ ಮಾಡಿ ಸಾಂತ್ವನ ಹೇಳಿಲ್ಲ. ಕಾರ್ಯಕರ್ತರನ್ನು ಪ್ರಚೋದಿಸಿ ಗಲಾಟೆ ಮಾಡಿಸುವ ಗುರುಮೂರ್ತಿ ಮತ್ತಿರರ ವಿರುದ್ಧ ಸೊರಬ ಠಾಣೆಯಲ್ಲಿ ದೂರು ದಾಖಲಾಗಿದೆ ಎಂದರು.
ನ್ಯಾಯಾಲಯದ ಆದೇಶವನ್ನು ತಪ್ಪಾಗಿ ಪ್ರಚಾರ ಮಾಡುತ್ತಾ, ದಲಿತ ಸಂಘರ್ಷ ಸಮಿತಿ ಹೆಸರು ದುರ್ಬಳಕೆ ಮಾಡಿಕೊಳ್ಳುತ್ತಿರುವ ಗುರುಮೂರ್ತಿ ಕಳೆದ ಮೂರ‍್ನಾಲ್ಕು ದಶಕಗಳಿಂದ ದಲಿತರ ಧ್ವನಿಯಾಗಿ ಕೆಲಸ ಮಾಡುತ್ತಿರುವ ರಾಜೇಂದ್ರ ಬಂದಗದ್ದೆಯಂತಹ ಮುಖಂಡರನ್ನು ಗಂಜಿ ಗಿರಾಕಿ ಎಂದು ಹೇಳಿದ್ದು ಖಂಡನೀಯ. 2006-07 ರಲ್ಲಿ ಜೈಭೀಮ್ ಕೋ. ಆಪರೇಟಿವ್ ಸೊಸೈಟಿ ಸ್ಥಾಪಿಸಿ ದಲಿತರಿಂದ ಲಕ್ಷಾಂತರ ರೂಪಾಯಿ ಷೇರು ಹಣ ಸಂಗ್ರಹಿಸಿ ಅದನ್ನು ಸ್ವಬಳಕೆ ಮಾಡಿಕೊಂಡು ದಲಿತರನ್ನು ವಂಚಿಸಿದ್ದಾರೆ. ಪೊಲೀಸ್ ಇಲಾಖೆ ಇಂತಹ ವಂಚಕರನ್ನು ಕೂಡಲೇ ಬಂಧಿಸಿ, ಜನಸಾಮಾನ್ಯರು ಮತ್ತು ದಲಿತರು ವಂಚನೆಗೊಳಗಾಗುವುದನ್ನು ತಪ್ಪಿಸಬೇಕು ಎಂದು ಒತ್ತಾಯಿಸಿದರು.
ಸಮಿತಿ ತಾಲೂಕು ಸಂಚಾಲಕ ಲಕ್ಷ್ಮಣ್ ಸಾಗರ್ ಮಾತನಾಡಿ, ದಲಿತ ಸಂಘರ್ಷ ಸಮಿತಿ ಲಕ್ಷ್ಮೀನಾರಾಯಣ ನಾಗವಾರ ಬಣದ ಜಿಲ್ಲಾ ಸಂಚಾಲಕ ಎಂದು ಹೇಳಿಕೊಳ್ಳುವ ಪರಮೇಶ್ವರ ದೂಗೂರು ಏನೂ ದುಡಿಮೆ ಇಲ್ಲದಿದ್ದರೂ ಐಷಾರಾಮಿ ಜೀವನ ನಡೆಸುವುದಾದರೂ ಹೇಗೆ ಎಂದು ಪ್ರಶ್ನಿಸಿದ ಅವರು, ತಮ್ಮದೇ ಸಂಘಟನೆ ಕಟ್ಟಿಕೊಳ್ಳಲು ಸಾಧ್ಯವಾಗದ ದೂಗೂರು ಬೇರೆಯವರ ಜೊತೆ ಗುರುತಿಸಿಕೊಂಡು ತೇಜೋವಧೆ ಮಾಡುವ ಪ್ರಯತ್ನ ಖಂಡನೀಯ ಎಂದು ಹೇಳಿದರು.
ಗೋಷ್ಠಿಯಲ್ಲಿ ಗುರುರಾಜ್, ರಾಜೇಂದ್ರ ಬಂದಗದ್ದೆ, ಹರೀಶ್, ನಾಗರಾಜ್, ಸುರೇಶ್ ಮಂಡ್ಯ, ವಿಶ್ವನಾಥ್, ಮಹೇಶ್, ರವಿ ಜಂಬಗಾರು, ಎ.ಎ.ಶೇಕ್, ಸತ್ಯನಾರಾಯಣ್, ವಿನ್ಸಂಟ್ ರಾಸ್, ರೋಸಯ್ಯ, ಪ್ರಕಾಶ್, ಅಣ್ಣಪ್ಪ ಇನ್ನಿತರರು ಹಾಜರಿದ್ದರು.