ಸಕಲೇಶಪುರ: ಗೋರಕ್ಷಣೆ ಹೆಸರಿನಲ್ಲಿ ಭಜರಂಗದಳ ಕಾರ್ಯಕರ್ತರು ವಿನಾಕಾರಣ ದಲಿತರಿಗೆ ತೊಂದರೆ ಕೊಡುತ್ತಿದ್ದು, ಪೊಲೀಸರು ಇವರಿಗೆ ಬೆನ್ನೆಲುಬಾಗಿ ನಿಂತಿದ್ದಾರೆ ಎಂದು ಆರೋಪಿಸಿ ಸಮುದಾಯದ ಪರ ಸಂಘಟನೆಗಳು ಪಟ್ಟಣದಲ್ಲಿ ಪ್ರತಿಭಟಿಸಿದವು.
ಪಟ್ಟಣದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದ ದಲಿತ ಪರ ಸಂಘಟನೆಗಳ ಕಾರ್ಯಕರ್ತರು, ಪಟ್ಟಣದ ಪ್ರವಾಸಿ ಮಂದಿರದಿಂದ ಮೆರವಣಿಗೆ ಹೊರಟು, ಮಿನಿವಿಧಾನಸೌಧದ ಮುಂಭಾಗ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಹಳೇ ಬಸ್ ನಿಲ್ದಾಣದಲ್ಲಿ ಕೆಲಕಾಲ ರಸ್ತೆ ತಡೆ ಮಾಡಿ ಬಹಿರಂಗಸಭೆ ನಡೆಸಿದರು.
ಹದಗೆಟ್ಟ ಶಾಂತಿ ಸುವ್ಯವಸ್ಥೆ: ಈ ವೇಳೆ ದಲಿತ ಮುಖಂಡರು ಮಾತನಾಡಿ, ಸಕಲೇಶಪುರ ಶಾಂತಿ ಸುವ್ಯವಸ್ಥೆಗೆ ಹೆಸರಾಗಿದೆ. ಎರಡು ವರ್ಷಗಳಿಂದೀಚೆಗೆ ಹಿಂದುತ್ವದ ಹೆಸರಿನಲ್ಲಿ ಭಜರಂಗದಳದ ರಘು, ಸಹಚರರು ಗಲಬೆ ಎಬ್ಬಿಸುತ್ತಿದ್ದಾರೆ. ಇಂತಹವರಿಗೆ ಪೊಲೀಸ್ ಠಾಣೆಯಲ್ಲಿ ರಾಜಮರ್ಯಾದೆ ನೀಡುತ್ತಿರುವುದು ಖಂಡನೀಯ ಎಂದು ದೂರಿದರು.
ಗೋರಕ್ಷಣೆ ಹೆಸರಲ್ಲಿ ಹಲ್ಲೆ: ಶನಿವಾರ ಸಾಕಲು ಹಸು-ಕರು ತರುತ್ತಿದ್ದ ಹಲಸುಲಿಗೆ ಪಂಚಾಯ್ತಿ ಮಾಜಿ ಅಧ್ಯಕ್ಷ ಮಂಜು ಅವರ ಮೇಲೆ ಗೋರಕ್ಷಣೆ ಹೆಸರಿನಲ್ಲಿ ಭಜರಂಗದಳದ ಕಿಡಿಗೇಡಿಗಳು ಹಲ್ಲೆ ನಡೆಸಿದ್ದಾರೆ. ಹಲ್ಲೆ ಮಾಡಿರುವ ದೀಪುವನ್ನು ಕೂಡಲೇ ಬಂಧಿಸಬೇಕು ಹಾಗೂ ಈ ಬಗ್ಗೆ ಕೇಳಲು ಹೋದ ದಲಿತ ಹೋರಾಟಗಾರರ ಮೇಲೆ ಕೇಸು ದಾಖಲಿಸಿರುವ ಡಿವೈಎಸ್‌ಪಿ ಉದಯ್ ಭಾಸ್ಕರ್ ಅವರನ್ನು ಅಮಾನತ್ತು ಮಾಡಬೇಕು, ಭಜರಂಗದಳ ಸಂಘಟನೆ ನಿಷೇಧಿಸಬೇಕು ಎಂದು ಒತ್ತಾಯಿಸಿದರು.
ಪೊಲೀಸ್ ಬಂದೋಬಸ್ತ್: ನಂತರ ಉಪವಿಭಾಗಾಧಿಕಾರಿ ಪ್ರತೀಕ್ ಬಯಾಲ್ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು. ಯಾವುದೇ ಅಹಿತಕರ ಘಟನೆ ನಡೆಯದಂತೆ ಹೊಳೆನರಸೀಪುರ ಡಿವೈಎಸ್‌ಪಿ ಮುರಳೀಧರ್ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.
ದಲಿತ ಮುಖಂಡರಾದ ವೇಣು, ರಾಧಾಕೃಷ್ಣ, ಬೈಕೆರೆ ದೇವರಾಜ್, ವಳಲಹಳ್ಳಿ ವೀರೇಶ್, ಹೆತ್ತೂರು ನಾಗರಾಜ್, ಲಕ್ಷ್ಮಣ್ ಕೀರ್ತಿ, ಎಸ್.ಎನ್ ಮಲ್ಲಪ್ಪ, ಪುರಸಭೆ ಸದಸ್ಯ ಅಣ್ಣಪ್ಪ, ಕೌಡಹಳ್ಳಿ ತಿಮ್ಮಯ್ಯ, ಕಲ್ಗಣೆ ಪ್ರಶಾಂತ್, ದೊಡ್ಡಿರಯ್ಯ, ನಲ್ಲುಲ್ಲಿ ಈರಯ್ಯ, ಸಿಐಟಿಯು ಧರ್ಮೇಶ್, ಪೃಥ್ವಿ, ರಾಜಶೇಖರ್, ಸಂದೇಶ್, ಹೆನ್ನಲಿ ಶಾಂತರಾಜು, ಸಂದೀಪ್ ಮುಂತಾದವರು ಹಾಜರಿದ್ದರು.