Advertisement

ಶಾಸಕರ ನಡೆ ಖಂಡಿಸಿ ದಲಿತ ಸಂಘಟನೆ ಬೃಹತ್‌ ಪ್ರತಿಭಟನೆ

05:56 PM Sep 21, 2022 | Team Udayavani |

ಹುಮನಾಬಾದ: ಮೀಸಲಾತಿಗಾಗಿ ಹೋರಾಟ ನಡೆಸುತ್ತಿರುವ ವೀರಶೈವ ಜಂಗಮರ ಪರ ಶಿಫಾರಸು ಪತ್ರ ನೀಡಿದ ಸ್ಥಳೀಯ ಶಾಸಕ, ವಿಧಾನ ಪರಿಷತ್‌ ಸದಸ್ಯರ ನಡೆ ಖಂಡಿಸಿ ದಲಿತ ಹೋರಾಟ ಕ್ರಿಯಾ ಸಮಿತಿ ವತಿಯಿಂದ ಮಂಗಳವಾರ ಪಟ್ಟಣದಲ್ಲಿ ಬೃಹತ್‌ ಪ್ರತಿಭಟನೆ ನಡೆಯಿತು.

Advertisement

ಹಳೆ ತಹಶೀಲ್ದಾರ್‌ ಕಚೇರಿಯಿಂದ ಆರಂಭಗೊಂಡ ಪ್ರತಿಭಟನಾ ರ್ಯಾಲಿ ಪಟ್ಟಣದ ಪ್ರಮುಖ ರಸ್ತೆಗಳ ಮೂಲಕ ಪಟ್ಟಣದ ಅಂಬೇಡ್ಕರ್‌ ವೃತ್ತದವರೆಗೆ ನಡುಗೆ ಮೂಲಕ ರ್ಯಾಲಿ ನಡೆಯಿತು.

ವಿವಿಧ ಕಡೆಗಳಿಂದ ಸಾವಿರಾರು ಸಂಖ್ಯೆಯ ಜನರು ಭಾಗವಹಿಸಿ ಶಾಸಕ ಪಾಟೀಲ ಹಾಗೂ ಸಹೋದರ ಸೇರಿದಂತೆ ಬಸವಕಲ್ಯಾಣ ಶಾಸಕ ಶರಣು ಸಲಗರ ಮತ್ತು ಸಚಿವ ಗೋವಿಂದ್‌ ಕಾರಜೋಳ ವಿರುದ್ಧ ಘೋಷಣೆ ಕೂಗಿದರು.

ಕ್ರಿಯಾ ಸಮಿತಿ ಅಧ್ಯಕ್ಷ ಅಂಕುಶ ಗೋಖಲೆ ಮಾತನಾಡಿ, ನಿಜವಾಗಿಯೂ ಅನ್ಯಾಯಕ್ಕೆ ಒಳಗಾದ ಬೇಡ ಜಂಗಮರಿಗೆ ಪರಿಶಿಷ್ಟ ಜಾತಿ ಪಟ್ಟಿಯಲ್ಲಿ ಸೇರ್ಪಡೆ ಮಾಡಲಿ. ಆದರೆ, ಮಡಿವಂತಿಕೆ ಮಾಡುವ ಹಾಗೂ ಪಾದಪೂಜೆ ಮಾಡಿಸಿಕೊಳ್ಳುವ ವೀರಶೈವ ಜಂಗಮರಿಗೆ ಎಸ್‌ಸಿ ಪಟ್ಟಿಯಲ್ಲಿ ಯಾವುದೇ ಕಾರಣಕ್ಕೆ ಸೇರ್ಪಡೆ ಮಾಡಬಾರದು. ಜಂಗಮರ ಬೆಂಬಲಕ್ಕೆ ನಿಂತು ಶಿಫಾರಸು ಪತ್ರ ನೀಡಿದ ಶಾಸಕರನ್ನು ಮುಂದಿನ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕು. ಯಾರೂ ಹಣಕ್ಕಾಗಿ ಮತ ಮಾರಿಕೊಳ್ಳದೆ, ಸಮಾಜಕ್ಕೆ ಅನ್ಯಾಯ ಮಾಡುವರ ವಿರುದ್ಧ, ನಮ್ಮ ಹಕ್ಕುಗಳು ಕಸಿದುಕೊಳ್ಳುವರ ವಿರುದ್ಧ ಸಮಾಜದ ಜನರು ಜಾಗೃತರಾಗಬೇಕು. ಜಾತಿವಾದಿಗಳಿಗೆ ಸೂಕ್ತ ಸಮಯಕ್ಕೆ ಉತ್ತರ ನೀಡಲು ಮುಂದಾಗಬೇಕು. ಜಂಗಮರು ಎಸ್‌ಸಿ ಪಟ್ಟಿಗೆ ಸೇರ್ಪಡೆಯಾದರೆ ಮತ್ತೆ ಹಳೆ ಇತಿಹಾಸದ ದಿನಗಳು ಮತ್ತೆ ಮರಳಿ ಬರುತ್ತವೆ. ದಲಿತರು ಶೋಷಣೆಗೆ ಒಳಗಾಗಬೇಕಾಗುತ್ತದೆ. ಜಂಗಮರ ಪರ ಶಿಫಾರಸು ಪತ್ರ ನೀಡಿದ ರಾಜ್ಯದ ಎಲ್ಲ ಶಾಸಕರ ವಿರುದ್ಧ ಪ್ರತಿಭಟನೆ ನಡೆಯಬೇಕು ಎಂದರು.

ದಲಿತ ಮುಖಂಡ ಪರಮೇಶ್ವರ ಆರ್ಯ, ಬ್ಯಾಂಕ್‌ ರೆಡ್ಡಿ, ಗೌತಮ ಪ್ರಸಾದ, ಅನಿಲ ದೊಡ್ಡಿ, ಗಣಪತಿ ಅಷ್ಟೂರೆ, ಗೌತಮ ಚವ್ಹಾಣ್‌, ಶಿವಪುತ್ರ ಮಾಳಗೆ, ಪ್ರವೀಣ ನಾಟೇಕರ್‌, ಚೇತನ ಗೋಖಲೆ, ಸೈಯದ್‌ ಯಾಸೀನ್‌, ಜಮೀಲ್‌ ಖಾನ್‌, ಮಹೇಶ ಗೋರನಳ್ಳಿ ಸೇರಿದಂತೆ ಇತರೆ ಮುಖಂಡರು ಮಾತನಾಡಿದರು.

Advertisement

ಕೆಲ ಹೊತ್ತು ಪಟ್ಟಣದ ಪ್ರಮುಖ ರಸ್ತೆಗಳಲ್ಲಿನ ಕೆಲ ಅಂಗಡಿಗಳು ಮುಚ್ಚಿರುವುದು ಕಂಡುಬಂತು. ಜಿಲ್ಲೆಯ ವಿವಿಧೆಡೆಯಿಂದ ಪೊಲೀಸ್‌ ಅಧಿಕಾರಿಗಳು ಹಾಗೂ ಸಿಬ್ಬಂದಿ ಆಗಮಿಸಿ ಬಿಗಿ ಬಂದೋಬಸ್ತ್ ಮಾಡಿದ್ದರು. ಮುಖ್ಯಮಂತ್ರಿಗಳಿಗೆ ಬರೆದ ಮನವಿಯನ್ನು ಬಸವಕಲ್ಯಾಣ ಸಹಾಯಕ ಆಯುಕ್ತರಾದ ರಮೇಶ ಕೋಳಾರಗೆ ಸಲ್ಲಿಸಿದರು.

ಗೌತಮ ಸಾಗಾರ, ಲಕ್ಷ್ಮೀಪುತ್ರ ಮಾಳಗೆ, ರೇಷ್ಮಾ ಹಂಸರಾಜ್‌, ವೈಜಿನಾಥ ಶಿಂಧೆ, ಸಂಜುಕುಮಾರ ಜಂಜಿರೆ, ಧರ್ಮರಾಜ ರತ್ನಾಕರ, ಮಧುಕರ ಹಿಲಾಲಪುರ್‌, ರವಿ ಹೊಸಳ್ಳಿ, ಪ್ರಭು ಸಂತೋಷಕರ್‌, ಗಜೇಂದ್ರ ಕನಕಟ್ಟಕರ್‌, ಶಿವಕುಮಾರ ಶಿಂಧೆ, ಪ್ರಕಾಶ ಮುಗುನೂರ್‌, ನಜೀಮೊದ್ದಿನ್‌, ಸುಶೀಲಕುಮಾರ ಭೋಲಾ, ಶ್ರೀಕಾಂತ ಜಮಗಿ, ರವಿ ನಿಜಾಂಪುರೆ, ವಿಠಪದಾಸ ಪ್ಯಾಗೆ, ಚೇತನ ಕಾಳೆ, ಬಸವರಾಜ ಮಾಳಗೆ ಸೇರಿದಂತೆ ಅನೇಕರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next