ವಿಜಯಪುರ: ರಾಜ್ಯದಲ್ಲಿ ದಲಿತ ಮುಖ್ಯಮಂತ್ರಿ ಆಗಬೇಕು ಎಂದು ಸಚಿವ ಎಚ್.ಸಿ.ಮಹದೇವಪ್ಪ ಹೇಳಿಕೆ ನೀಡಿರುವಲ್ಲಿ ತಪ್ಪೇನಿಲ್ಲ. ದಲಿತರು ಮುಖ್ಯಮಂತ್ರಿ ಆಗಲು ಈಗ ಆ ಕುರ್ಚಿ ಖಾಲಿ ಇಲ್ಲ ಎಂದು ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ ಪ್ರತಿಕ್ರಯಿಸಿದ್ದು, ಸೂಕ್ತ ಸಂದರ್ಭದಲ್ಲಿ ದಲಿತ ವ್ಯಕ್ತಿ ರಾಜ್ಯದಲ್ಲಿ ಮುಖ್ಯಮಂತ್ರಿ ಆಗಲಿದ್ದಾರೆ. ದಲಿತ ಮುಖ್ಯಮಂತ್ರಿಯಾಗಲು ಖಂಡಿತವಾಗಿ ನನ್ನ ಬೆಂಬಲ ಇರಲಿದೆ ಎಂದರು.
ಶನಿವಾರ ಬಬಲೇಶ್ವರ ಪಟ್ಟಣದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಭೀಕರ ಬರ ಆವರಿಸಿರುವ ಹಿನ್ನೆಲೆಯಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಎದುರಾಗಿದೆ. ರಾಜಧಾನಿ ಬೆಂಗಳೂರಿನಲ್ಲಂತೂ ಐಟಿ-ಬಿಟಿ ಕಂಪನಿಗಳು, ಕೈಗಾರಿಕೆಗಳಿಗೂ ನೀರಿನ ಬಿಸಿ ತಟ್ಟಿದ್ದರೂ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದರು.
ಆದರೆ ವಿಪಕ್ಷ ನಾಯಕ ಅಶೋಕ ಹೇಳಿದಂತೆ ನೀರಿನ ಸಮಸ್ಯೆಯಿಂದ ಕೈಗಾರಿಕೆಗಳು ರಾಜ್ಯಕ್ಕೆ ಬರಲು ಹಿಂಜರಿಯುತ್ತವೆ ಎಂಬುದು ಆರ್ಥಹೀನ. ಪ್ರಕೃತಿ ವಿಕೋಪದ ಹಿನ್ನೆಲೆಯಲ್ಲಿ ವಿಶ್ವದ ಎಲ್ಲೆಡೆ ಭೀಕರ ಬರ ಆವರಿಸಿದೆ. ಬೆಂಗಳೂರು ಮಾತ್ರವಲ್ಲ ದೇಶದಲ್ಲಿ ಹಲವು ಕಡೆಗಳಲ್ಲಿ ಭೀಕರ ಬರ ಆವರಿಸಿದ್ದು, ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ ಎಂದು ತಿರುಗೇಟು ನೀಡಿದರು.
ಕರ್ನಾಟಕ ರಾಜ್ಯದಲ್ಲಿ ಕೈಗಾರಿಕೆಗಳಿಗೆ ನೀರಿನ ಸಮಸ್ಯೆ ಉಂಟಾಗದಂತೆ ಕ್ರಮ ಕೈಗೊಳ್ಳಲಾಗಿದೆ. ಇದಲ್ಲದೇ ರಾಜ್ಯದಲ್ಲಿ ಭವಿಷ್ಯದಲ್ಲಿ ಕೈಗಾರಿಕೆಗಳಿಗೆ ನೀರಿನ ಸಮಸ್ಯೆ ಎದುರಾಗದಂತೆ ಶಾಶ್ವತ ಪರಿಹಾರಕ್ಕಾಗಿ ಕೃಷ್ಣಾ, ಕಾವೇರಿ, ಮಲಪ್ರಭಾ ಸೇರಿದಂತೆ ರಾಜ್ಯದ ನದಿ ಮೂಲಗಳಿಂದ ನೀರಿನ ಯೋಜನೆಗೆ ರೂಪಿಸುವ ಕುರಿತು ಚರ್ಚೆ ನಡೆದಿವೆ ಎಂದರು.
ಲೋಕಸಭೆ ಚುನಾವಣೆ ಪರಿಶಿಷ್ಟ ಜಾತಿಗೆ ಮೀಸಲಾಗಿರುವ ವಿಜಯಪುರ ಕ್ಷೇತ್ರದಿಂದ ಬಲಗೈ ಸಮುದಾಯಕ್ಕೆ ಕಾಂಗ್ರೆಸ್ ಟಿಕೆಟ್ ಕೊಡಬೇಕೆಂಬ ಬೇಡಿಕೆ ಇದೀಗ ಈಡೇರಿದ್ದು, ಟಿಕೆಟ್ ಪಡೆದಿರುವ ರಾಜು ಆಲಗೂರ ಅವರನ್ನು ಅಭಿನಂದಿಸುತ್ತೇನೆ. ಶಿವರಾತ್ರಿಯ ಶುಭ ಸಂದರ್ಭದಲ್ಲಿ ಟಿಕೆಟ್ ಘೋಷಣೆ ಆಗಿದ್ದು, ಈ ಬಾರಿ ಕಾಂಗ್ರೆಸ್ ಗೆಲುವು ಖಚಿತ ಎಂದರು.
ಡಾ.ಬಿ.ಆರ್.ಅಂಬೇಡ್ಕರ್ ವಾದಿಗಳ ಬೇಡಿಕೆಯಂತೆ ಪರಿಶಿಷ್ಟ ಜಾತಿಯ ಬಲ ಸಮುದಾಯದ ರಾಜು ಆಗಲೂರ ಅವರಿಗೆ ಟಿಕೆಟ್ ಘೋಷಣೆಯಾಗಿದೆ. ಜಿಲ್ಲೆಯ ಶಾಸಕರ ಒಟ್ಟಾಭಿಪ್ರಾಯ ಹಾಗೂ ಜನಾಶಯದಂತೆ ಟಿಕೆಟ್ ಪಡೆದಿರುವ ಆಲಗೂರ ಮೂಲಕ ವಿಜಯಪುರ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲ್ಲುವುದು ಖಚಿತ ಎಂದರು.
ವಿಜಯಪುರ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದಿಂದ ನಾನು ಸಂಸದನಾಗಿದ್ದೇ ಕೊನೆ, ಕಳೆದ ಐದು ಚುನಾವಣೆಗಳಲ್ಲಿ ಕಾಂಗ್ರೆಸ್ ಗೆದ್ದಿಲ್ಲ. ನಾವೆಲ್ಲ ಕಾಂಗ್ರೆಸ್ ಅಭ್ಯರ್ಥಿಯ ಗೆಲುವಿಗೆ ಶ್ರಮಿಸಲಿದ್ದು, ರಾಜು ಆಲಗೂರ ಮೂಲಕ ಕಾಂಗ್ರೆಸ್ ವಿಜಯ ಸಾಧಿಸುವುದು ಖಚಿತ ಎಂದರು.