ರಾಜಸ್ಥಾನ : ಶಾಲೆಯಲ್ಲಿಟ್ಟಿದ್ದ ನೀರು ಕುಡಿದನೆಂದು ಶಾಲಾ ಶಿಕ್ಷಕನಿಂದ ಗಂಭೀರ ಹಲ್ಲೆಗೊಳಗಾದ ಒಂಬತ್ತು ವರ್ಷದ ದಲಿತ ಬಾಲಕ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ ಘಟನೆ ರಾಜಸ್ಥಾನದ ಜಲೋರೆ ಜಿಲ್ಲೆಯಲ್ಲಿ ನಡೆದಿದೆ.
ಕಳೆದ ಜುಲೈ 20 ಜಲೋರೆ ಜಿಲ್ಲೆಯ ಸುರಾನಾ ಗ್ರಾದಲ್ಲಿರುವ ಖಾಸಗಿ ಶಾಲೆಯಲ್ಲಿ ಈ ಘಟನೆ ನಡೆದಿದ್ದು, ಶಾಲೆಯಲ್ಲಿ ಕುಡಿಯಲು ಇಟ್ಟಿದ್ದ ನೀರನ್ನು ದಲಿತ ಬಾಲಕ ಕುಡಿದನೆಂದು ಕೋಪಗೊಂಡ ಶಿಕ್ಷಕ ಬಾಲಕನ ಮೇಲೆ ಮನಬಂದಂತೆ ಹಲ್ಲೆ ನಡೆಸಿದ್ದಾರೆ ಗಂಭೀರ ಗಾಯಗೊಂಡ ಬಾಲಕನನ್ನು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು ಬಳಿಕ ಹೆಚ್ಚಿನ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು ಆದರೆ ಚಿಕಿತ್ಸೆಗೆ ಸ್ಪಂದಿಸದೆ ಬಾಲಕ ಶನಿವಾರ ಮೃತಪಟ್ಟಿದ್ದಾನೆ.
ಇತ್ತ ಪ್ರಕರಣ ಕೈಗೆತ್ತಿಕೊಂಡ ಪೊಲೀಸರು ಆರೋಪಿ ಶಿಕ್ಷಕ ಚೈಲ್ ಸಿಂಗ್ ನನ್ನು ವಶಕ್ಕೆ ಪಡೆದುಕೊಂಡಿದ್ದಾರೆ, ಅಲ್ಲದೆ ಶಿಕ್ಷಕನ ವಿರುದ್ಧ ಕೊಲೆ ಪ್ರಕರಣ, ದಲಿತ ಬಾಲಕನ ಮೇಲೆ ಹಲ್ಲೆ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ನೆಡೆಸುತ್ತಿದ್ದಾರೆ.
ಘಟನೆ ಕುರಿತು ಮಾತನಾಡಿದ ಪೊಲೀಸ್ ಅಧಿಕಾರಿ ಈ ಘಟನೆ ಯಾಕಾಗಿ ನಡೆಯಿತು, ಕೇವಲ ನೀರು ಕುಡಿದ ಎಂಬ ಕಾರಣಕ್ಕೆ ಹಲ್ಲೆ ನಡೆಸಲಾಯಿತೇ ಅಥವಾ ಬೇರೆ ಏನಾದರು ಕಾರಣಗಳು ಇವೆಯೇ ಎಂದು ಕೂಲಂಕುಷ ತನಿಖೆ ನಡೆಸಲಾಗುವುದು ಎಂದು ಹೇಳಿದ್ದಾರೆ.
ಘಟನೆ ಕುರಿತು ಮುಖ್ಯಮಂತ್ರಿ ಅಶೋಕ್ ಗೆಹಲೋಟ್ ಸಂತಾಪ ಸೂಚಿಸಿದ್ದಾರೆ.