ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್ ಸೋಂಕು ತನ್ನ ರುದ್ರ ನರ್ತನವನ್ನು ಪ್ರದರ್ಶಿಸಿದ್ದು ಇಂದು ಜಿಲ್ಲೆಯಲ್ಲಿ 183 ಮಂದಿಯಲ್ಲಿ ಕೋವಿಡ್ ಸೋಂಕು ದೃಢ ಪಟ್ಟಿರುವ ಮೂಲಕ ಜಿಲ್ಲೆಯಲ್ಲಿ ಅತೀ ಹೆಚ್ಚಿನ ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ.
ಜಿಲ್ಲೆಯಲ್ಲಿ ಪ್ರಾಥಮಿಕ ಸಂಪರ್ಕದಿಂದ ಜೊತೆಗೆ SARI ಮತ್ತು ILE ಪ್ರಕರಣಗಳಿಂದಲೂ ಕೋವಿಡ್ ಸೋಂಕಿನ ಪ್ರಕರಣ ಹೆಚ್ಚಳವಾಗಿದ್ದು ಇದರೊಂದಿಗೆ ವಿದೇಶದಿಂದ ಬಂದಿರುವ ಕೆಲವು ಪ್ರಯಾಣಿಕರಲ್ಲೂ ಸೋಂಕು ದೃಢ ಪಟ್ಟಿವೆ ಎಂದು ಜಿಲ್ಲೆಯ ಅರೋಗ್ಯ ಇಲಾಖೆಯ ಮೂಲಗಳು ತಿಳಿಸಿವೆ.
ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುತ್ತಿದ್ದು ಜನರಲ್ಲಿ ಆತಂಕ ಮನೆಮಾಡಿದೆ. ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ಉಳ್ಳಾಲ ಪರಿಸರದಲ್ಲಿ ಹೆಚ್ಚಿನ ಸೋಂಕಿನ ಪ್ರಕರಣಗಳು ದಾಖಲಾಗುತಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್-19 ಅಟ್ಟಹಾಸ ಅಂಕೆ ಮೀರುತ್ತಿದೆ. ಇಂದು ಬೆಳಿಗ್ಗೆ ಮೂವರು ಕೋವಿಡ್-19 ಸೋಂಕಿತರು ಸಾವನ್ನಪ್ಪಿದ್ದು. ಜಿಲ್ಲೆಯಲ್ಲಿ ವೈರಾಣು ಪೀಡಿತರ ಸಾವಿನ ಸಂಖ್ಯೆ 29ಕ್ಕೆ ಏರಿಕೆಯಾಗಿದೆ.
ಉಳ್ಳಾಲ ಅಜಾದ್ ನಗರದ 56 ವರ್ಷದ ಮಹಿಳೆ, ಪುತ್ತೂರು ಮೂಲದ 32 ವರ್ಷದ ಮಹಿಳೆ, ಭಟ್ಕಳ ಮೂಲದ 60 ವರ್ಷದ ವ್ಯಕ್ತಿ ಕೋವಿಡ್ ವೈರಸ್ ಗೆ ಅಸುನೀಗಿದ್ದಾರೆ.
ಮಂಗಳೂರು ಮಹಾನಗರ ಪಾಲಿಕೆಯ ಕಾರ್ಪೋರೇಟರಲ್ಲೂ ದೃಢಪಟ್ಟಿದ್ದು ಈ ವಿಚಾರ ಸ್ವತಃ ಕಾರ್ಪೋರೇಟರ್ ಅವರೇ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.