Advertisement
ಜಮ್ಮು ಕಾಶ್ಮೀರ ಕರಣ್ ನಗರದಲ್ಲಿ ಇತ್ತೀಚೆಗೆ ಕಟ್ಟಡವೊಂದಕ್ಕೆ ನುಗ್ಗಿದ ಇಬ್ಬರು ಭಯೋತ್ಪಾದಕರನ್ನು ಹೊಡೆದುರುಳಿಸಿದ ಕಾರ್ಯಾಚರಣೆ ತಂಡದಲ್ಲಿದ್ದ ಸುರತ್ಕಲ್ ಕೃಷ್ಣಾಪುರ ಮೂಲದ ಸಿಆರ್‌ಪಿಎಫ್ ಯೋಧ ಸತೀಶ್ ಅವರು, ಕಾರ್ಯಾಚರಣೆಯಲ್ಲಿ ಯಶಸ್ವಿಯಾದ ಖುಷಿಯನ್ನು ಶುಕ್ರವಾರ ‘ಉದಯವಾಣಿ’ಯೊಂದಿಗೆ ಹಂಚಿಕೊಂಡಿದ್ದು ಹೀಗೆ.
Related Articles
Advertisement
‘ನಮ್ಮ ಟೀಂ 13ರ ಬೆಳಗ್ಗೆ ಸುಮಾರು 7.30ರ ವೇಳೆಗೆ ಶಿಬಿರದಿಂದ ಹೊರಟಿತು. ಕಟ್ಟಡದ ಸುತ್ತಮುತ್ತ ಫೈರಿಂಗ್ ನಡೆಯುತ್ತಲೇ ಇತ್ತು. ಆದರೆ ಕಟ್ಟಡದೊಳಗೆ ಈರ್ವರು ಎಲ್ಲಿ ಅಡಗಿದ್ದಾರೆಂಬ ಸುಳಿವು ಅಲಭ್ಯವಾಗಿತ್ತು. ಈ ಮಧ್ಯೆ ತಂಡದಲ್ಲಿದ್ದ ಯೋಧರೋರ್ವರು ಉಗ್ರರ ಫೈರಿಂಗ್‌ಗೆ ಸಿಲುಕಿ ವೀರ ಮರಣ ಹೊಂದಿದರು.
ನಮ್ಮ ತಂಡದಲ್ಲಿ ಒಟ್ಟು 17 ಮಂದಿ ಇದ್ದೆವು. ಕಟ್ಟಡದಲ್ಲಿದ್ದ ಸಾರ್ವಜನಿಕರನ್ನೆಲ್ಲ ಹೊರಗೆ ಕಳುಹಿಸಿದೆವು. ಕಟ್ಟಡದ ಎಡಭಾಗದಿಂದ ನಾವೂ ಫೈರಿಂಗ್ ಆರಂಭಿಸಿದೆವು. ಆ ರಾತ್ರಿ ಫೈರಿಂಗ್ ಸ್ವಲ್ಪ ತಗ್ಗಿದ್ದರೂ, ಮರುದಿನ ಬೆಳಗ್ಗೆ ಮತ್ತೆ ತೀವ್ರಗೊಂಡಿತ್ತು. ಕಟ್ಟಡವನ್ನು ಸಂಪೂರ್ಣ ಕೆಡವಲಾಯಿತು. 14ರ ಬೆಳಗ್ಗೆ 10.30ರ ವೇಳೆಗೆ ಓರ್ವ ಉಗ್ರನನ್ನು, ಮಧ್ಯಾಹ್ನ 1ರ ಸುಮಾರಿಗೆ ಇನ್ನೊಬ್ಬ ಉಗ್ರನನ್ನು ಸಾಯಿಸುವುದರಲ್ಲಿ ಅಲ್ಲಿ ಸೇರಿದ್ದ ತಂಡಗಳು ಯಶಸ್ವಿಯಾದವು. ಆ ಸುದ್ದಿ ಕೇಳುತ್ತಲೇ ವಿಜಯದ ನಗೆ ಬೀರಿದೆವು’ ಎನ್ನುತ್ತಾರೆ ಸತೀಶ್.
ದೇಶಸೇವೆಯ ಖುಷಿ: ಜುಬೈರ್‘ಇದೇ ಕಾರ್ಯಾಚರಣೆಯಲ್ಲಿ ಪಾಲ್ಗೊಂಡು ಉಗ್ರರನ್ನು ಸದೆಬಡಿಯುವಲ್ಲಿ ಯಶಸ್ವಿಯಾದ ಪುತ್ತೂರಿನ ಯೋಧ ಜುಬೈರ್ ಅವರು ಹೇಳುವ ಪ್ರಕಾರ, ಕರಣ್‌ನಗರದಲ್ಲಿ ಸತತ 32 ಗಂಟೆಗಳ ಕಾರ್ಯಾಚರಣೆ ಬಳಿಕ ಇಬ್ಬರು ಉಗ್ರರನ್ನು ಹೊಡೆದುರುಳಿಸುವಲ್ಲಿ ಯಶಸ್ವಿಯಾದದ್ದು ಜೀವನದ ಅತ್ಯಂತ ಹೆಮ್ಮೆಯ ಕ್ಷಣ. ಆ ಮೂಲಕ ದೇಶಸೇವೆಯ ತುಡಿತ ಇನ್ನೂ ಹೆಚ್ಚಾಗಿದೆ. ಆದರೆ ಇದರಲ್ಲಿ ಓರ್ವ ಯೋಧನನ್ನು ನಾವು ಕಳೆದುಕೊಳ್ಳಬೇಕಾಯಿತು’ ಎನ್ನುತ್ತಾರೆ. ಜುಬೈರ್ ಕಾರ್ಯಾಚರಣೆಗೆ ಮೆಚ್ಚಿ ಭಾರತೀಯ ಸೇನೆಯಿಂದ ಡಿಜಿ ಡಿಸ್ಕ್ ಅವಾರ್ಡ್ ಕೂಡ ಅವರಿಗೆ ಲಭಿಸಿದೆ. ಅಲ್ಲದೆ ಪುತ್ತೂರಿನ ಈ ವೀರಯೋಧನ ಸಾಹಸದ ಬಗ್ಗೆ ಸಾಮಾಜಿಕ ತಾಣಗಳಲ್ಲಿ ಶ್ಲಾಘನೆಯ ಪೋಸ್ಟ್‌ಗಳು ಸಾಕಷ್ಟು ವೈರಲ್ ಆಗುತ್ತಿವೆ . ಶುಕ್ರವಾರವೂ..
‘ನಾವಿರುವ ಶಿಬಿರದಿಂದ ಸುಮಾರು 16 ಕಿಮೀ. ದೂರದಲ್ಲಿ ಶುಕ್ರವಾರವೂ ಉಗ್ರನೊಬ್ಬನ ಚಲನವಲನಗಳ ಬಗ್ಗೆ ಮಾಹಿತಿ ಬಂದಿದೆ. ಆದರೆ ಆತ ಯೋಧರ ಕೈಗೆ ಸಿಗದೆ ತಪ್ಪಿಸಿಕೊಂಡ. 2013 ರಿಂದೀಚೆಗೆ ಇಂಥ ಘಟನೆಗಳ ಬಗ್ಗೆ ಆಗಾಗ ನಿಗಾವಹಿಸುತ್ತಲೇ ಇದ್ದೇವೆ. ಶ್ರೀನಗರದಲ್ಲಿ ತುಂಬ ಕಠಿನ ಪರಿಸ್ಥಿತಿ ಇರುವುದರಿಂದ ನಾವೂ ಯಾವುದಕ್ಕೂ ಸಿದ್ಧರಾಗಿರುತ್ತೇವೆ’ ಎನ್ನುತ್ತಾರೆ ಅವರು. ಧನ್ಯಾ ಬಾಳೆಕಜೆ